Advertisement

ಪ್ರಾದೇಶಿಕ ವಿಜ್ಞಾನ ಕೇಂದ್ರ ಕಾಮಗಾರಿ ನನೆಗುದಿಗೆ

09:12 AM May 05, 2022 | Team Udayavani |

ಹಾವೇರಿ: ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಜಿಲ್ಲಾ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಕಟ್ಟಡ ಕಾಮಗಾರಿ ಆರಂಭವಾಗಿ 5 ವರ್ಷಗಳೇ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ.

Advertisement

ಹೀಗಾಗಿ, ಜಿಲ್ಲೆಯ ವಿದ್ಯಾರ್ಥಿಗಳ ವಿಜ್ಞಾನ ಚಟುವಟಿಕೆಗಳಿಗೆ ಹಿನ್ನಡೆಯಾಗಿದ್ದು, ಭವಿಷ್ಯದ ವಿಜ್ಞಾನಿಗಳು ಸಮಸ್ಯೆ ಎದುರಿಸುವಂತಾಗಿದೆ. ಜಿಲ್ಲಾ ಪ್ರಾದೇಶಿಕ ವಿಜ್ಞಾನ ಕೇಂದ್ರದಕ್ಕೆ 15 ವರ್ಷಗಳ ಹಿಂದೆಯೇ ಸರ್ಕಾರದಿಂದ ಅನುಮೋದನೆ ನೀಡಲಾಗಿತ್ತು.

ಆದರೆ, ಸ್ಥಳ ಗುರುತಿಸುವುದರಲ್ಲೇ ಜಿಲ್ಲಾಡಳಿತ ಕಾಲಹರಣ ಮಾಡಿತು. ಅಲ್ಲದೇ, ಹಲವು ವರ್ಷಗಳಿಂದ ಕ್ರಿಯಾಯೋಜನೆ, ಸ್ಥಳ ಬದಲಾವಣೆ ಮಾಡುತ್ತಲೇ ವಿಳಂಬವಾಗಿದ್ದ ವಿಜ್ಞಾನ ಕೇಂದ್ರಕ್ಕೆ ಅಂತಿಮವಾಗಿ ಜಿಲ್ಲಾಡಳಿತ ಭವನದ ಎದುರಿನ ಗುಡ್ಡದಲ್ಲಿ 9.30 ಎಕರೆ ಜಾಗ ಗುರುತಿಸಲಾಯಿತು. 2.60 ಕೋಟಿ ರೂ. ವೆಚ್ಚದಲ್ಲಿ ವಿಜ್ಞಾನ ಕೇಂದ್ರ ತಲೆ ಎತ್ತಬೇಕಿತ್ತು. 2017ರಲ್ಲಿ ಕಾಮಗಾರಿ ಶುರು ಮಾಡಲಾಯಿತು. ಜಿಲ್ಲಾ ನಿರ್ಮಿತಿ ಕೇಂದ್ರದಿಂದ ಕಾಮಗಾರಿ ನಡೆಸಲಾಗಿದ್ದು, ಈ ವೇಳೆಗಾಗಲೇ ಪೂರ್ಣ ಕೆಲಸ ಮುಗಿಯಬೇಕಿತ್ತು.

ಜಿಲ್ಲೆಯಾಗಿ ಎರಡು ದಶಕವಾದರೂ ವಿಜ್ಞಾನ ಕೇಂದ್ರ ಇಲ್ಲದಿರುವುದು ಭವಿಷ್ಯದ ವಿಜ್ಞಾನಿಗಳ ಪಾಲಿಗೆ ಸಮಸ್ಯೆಯಾಗಿದೆ. ಅಧಿ ಕಾರಿಗಳು ಮತ್ತು ಸರ್ಕಾರದ ನಿರಾಸಕ್ತಿಯಿಂದ ಯೋಜನೆ ಗ್ರಹಣ ಹಿಡಿದಂತಾಗಿದೆ.

ಸಮರ್ಪಕ ಅನುದಾನ ಕೊರತೆ: 2.60 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಬೇಕಿದ್ದ ವಿಜ್ಞಾನ ಕೇಂದ್ರದ ಕಟ್ಟಡಕ್ಕೆ ಈಗಾಗಲೇ 3.10 ಕೋಟಿ ರೂ. ಖರ್ಚು ಮಾಡಲಾಗಿದೆ. ಆರಂಭದಲ್ಲಿ ಕಾಮಗಾರಿ ಚುರುಕು ಪಡೆದುಕೊಂಡಿತ್ತು. ನಿರ್ಮಿತಿ ಕೇಂದ್ರದಿಂದ ಆಕರ್ಷಕ ರೀತಿಯಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿತ್ತು. ಮೊದಲ ಹಂತದ ಕಾಮಗಾರಿ ಮುಗಿದಿದ್ದು, ಬಾಕಿ ಕಾಮಗಾರಿ ಕೈಗೊಳ್ಳಲು ಅನುದಾನ ದೊರೆತಿಲ್ಲ. ಇದರಿಂದ ಎರಡು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡಿದೆ.

Advertisement

2006ರಲ್ಲಿ ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದ ಬಸವರಾಜ ಹೊರಟ್ಟಿ ಅವರು ಹಾವೇರಿಗೆ ವಿಜ್ಞಾನ ಕೇಂದ್ರ ಮಂಜೂರು ಮಾಡಿದ್ದರು. ಬಳಿಕ ದೇವಗಿರಿಯಲ್ಲಿ 3 ಎಕರೆ ಜಾಗವನ್ನು ಕೇಂದ್ರ ಸ್ಥಾಪನೆಗೆ ಮೀಸಲಾಗಿಡಲಾಗಿತ್ತು. ಬಳಿಕ ಯಾರೂ ಈ ಬಗ್ಗೆ ಆಸಕ್ತಿ ತಾಳದ್ದರಿಂದ ನನೆಗುದಿಗೆ ಬಿದ್ದಿತ್ತು. ಎರಡು ವರ್ಷಗಳ ಹಿಂದೆ ಮತ್ತೆ ಚಾಲನೆ ದೊರೆತು ಕರ್ಜಗಿಯ ಕೇಂದ್ರೀಯ ವಿದ್ಯಾಲಯದ ಪಕ್ಕದಲ್ಲೇ ವಿಜ್ಞಾನ ಕೇಂದ್ರ ಸ್ಥಾಪನೆಗೆ ಜಿಲ್ಲಾಡಳಿತ ಮುಂದಾಗಿತ್ತು. ಬಳಿಕ ದೇವಗಿರಿಗೆ ವಿಜ್ಞಾನ ಕೇಂದ್ರ ಮತ್ತೆ ವರ್ಗಾಯಿಸಿಸಲಾಗಿತ್ತು.

ಹೆಚ್ಚುವರಿ 3.50 ಕೋಟಿ ಅನುದಾನಕ್ಕೆ ಬೇಡಿಕೆ: ವಿಜ್ಞಾನ ಕೇಂದ್ರ ಪೂರ್ಣಗೊಳಿಸಲು ಇನ್ನೂ 3.50 ಕೋಟಿ ರೂ. ಅನುದಾನದ ಅಗತ್ಯವಿದೆ. ಜಮೀನು ಹಂಚಿಕೆ ವಿಳಂಬದಿಂದ 2.60 ಕೋಟಿ ರೂ. ವೆಚ್ಚದ ಕಾಮಗಾರಿ 7 ಕೋಟಿ ರೂ.ಗೆ ಏರಿದೆ. ವಿಜ್ಞಾನ ಕೇಂದ್ರ ಕಾಮಗಾರಿ ವಿಳಂಬದ ಬಗ್ಗೆ ವಿಧಾನ ಪರಿಷತ್‌ ಸದಸ್ಯ ಸಲೀಂ ಅಹ್ಮದ್‌ ಅವರು ಅಧಿವೇಶನದಲ್ಲಿ ಪ್ರಶ್ನೆ ಎತ್ತಿದ್ದರು. ಇದಕ್ಕೆ ಉತ್ತರಿಸಿದ್ದ ಉನ್ನತ ಶಿಕ್ಷಣ ಸಚಿವ ಡಾ|ಅಶ್ವತ್ಥನಾರಾಯಣ ಅವರು, 2021ರಲ್ಲಿ ಹೆಚ್ಚುವರಿ 3.50 ಕೋಟಿ ರೂ. ಅನುದಾನಕ್ಕೆ ಜಿಲ್ಲಾಡಳಿತ ಪ್ರಸ್ತಾವನೆ ಸಲ್ಲಿಸಿದೆ.

ಈ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲು ಸರ್ಕಾರದಿಂದ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆಯ ಅಗತ್ಯವಿದ್ದು, ಆರ್ಥಿಕ ಇಲಾಖೆಯ ಸಮಾಲೋಚನೆಯೊಂದಿಗೆ ಸರ್ಕಾರದ ಗಮನದಲ್ಲಿದೆ ಎಂದು ಉತ್ತರ ನೀಡಿದ್ದರು. ಆದಷ್ಟು ಬೇಗ ಸರ್ಕಾರ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ ನನೆಗುದಿಗೆ ಬಿದ್ದಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರ ಪೂರ್ಣಗೊಳಿಸಲು ಮುಂದಾಗಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.

ವಿಜ್ಞಾನ ಕೇಂದ್ರದ ಸಿವಿಲ್‌ ಕಾಮಗಾರಿ ಶೇ.90ರಷ್ಟು ಮುಗಿದಿದೆ. ಆದರೆ, ಗ್ಯಾಲರಿ ಕೆಲಸ ಆಗಬೇಕು. ಅನುದಾನ ಇಲ್ಲದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಹೆಚ್ಚುವರಿ ಅನುದಾನವನ್ನು ಶೀಘ್ರದಲ್ಲಿ ಬಿಡುಗಡೆ ಮಾಡುವುದಾಗಿ ಭರವಸೆ ಸಿಕ್ಕಿದೆ. ಬಿಡುಗಡೆಯಾದ ತಕ್ಷಣ ಇನ್ನುಳಿದ ಕಾಮಗಾರಿ ಪೂರ್ಣಗೊಳಿಸಲಾಗುವುದು.ತಿಮ್ಮೇಶಕುಮಾರ್‌, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next