Advertisement

ಪ್ರಾದೇಶಿಕ ನಾಯಕತ್ವ ಅನಿವಾರ್ಯ

05:43 PM Sep 21, 2021 | Team Udayavani |

ದಾವಣಗೆರೆ: ನಗರದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿಯು ಪಕ್ಷ ಸಂಘಟನೆ ಜತೆಗೆ ಪ್ರಾದೇಶಿಕ ನಾಯಕತ್ವ ವಿಚಾರದ ಮೇಲೆಯೂ ಪ್ರಖರ ಬೆಳಕು ಚೆಲ್ಲಿದೆ. ರಾಜ್ಯ ನಾಯಕರು ಪ್ರಾದೇಶಿಕ ನಾಯಕತ್ವಕ್ಕೆ ಮನ್ನಣೆ ಇದೆ ಎನ್ನುತ್ತಲೇ ಸ್ಥಳೀಯ ನಾಯಕತ್ವಕ್ಕೆ ಮಹತ್ವ ನೀಡುವುದು ಅನಿವಾರ್ಯ ಎಂಬ ಸ್ಪಷ್ಟ ಸಂದೇಶ ಸಾರಿದ್ದಾರೆ.

Advertisement

ಬಿಜೆಪಿಯಲ್ಲಿ ಎಲ್ಲದಕ್ಕೂ ಕೇಂದ್ರದ ನಾಯಕರ ಜತೆ ಚರ್ಚಿಸಿಯೇ ಮುಂದಿನ ಹೆಜ್ಜೆ ಇರಿಸ ಬೇಕಾದ - ನಿರ್ಧಾರ ಕೈಗೊಳ್ಳ ಬೇಕಾದ ವ್ಯವಸ್ಥೆ ಇದೆ. ಆದ್ದರಿಂದ ರಾಜ್ಯದ ಆಡಳಿತ ಹಾಗೂ ರಾಜಕಾರಣದಲ್ಲಿ ಪ್ರಾದೇಶಿಕ ನಾಯಕರಿಗೆ ಸ್ವಯಂ ನಿರ್ಧಾರ ಕೈಗೊಳ್ಳಲು ಸಾಧ್ಯ ವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿಯೇ ರಾಜ್ಯ ನಾಯಕರು ಕಾರ್ಯಕಾರಿಣಿ ಮೂಲಕ ಪರೋಕ್ಷವಾಗಿ ಪ್ರಾದೇಶಿಕ ನಾಯಕತ್ವದ ಮಹತ್ವ ಎಷ್ಟಿದೆ ಎಂಬುದನ್ನು ಕೇಂದ್ರ ನಾಯಕರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ ಎಂಬ ುದು ರಾಜಕೀಯ ವಿಶ್ಲೇಷಕರ ಅಭಿಮತ.

“ರಾಜಕಾರಣ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಪ್ರಾದೇಶಿಕ ಭಾವನೆಗಳಿಗೆ ಪ್ರಾದೇಶಿಕ ನಾಯಕತ್ವದ ಮೂಲಕ ಮನ್ನಣೆ ನೀಡಬೇಕು. ಆಗ ಮಾತ್ರ ಯಾವುದೇ ಪಕ್ಷ ಅಲ್ಲಿ ತನ್ನ ಸಂಘಟನೆ, ಬಲ ಹೆಚ್ಚಿಸಿಕೊಂಡು ಉತ್ತಮ ಆಡಳಿತ ನಡೆಸಲು ಸಾಧ್ಯವಾಗುತ್ತದೆ’ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಪ್ರಾದೇಶಿಕ ನಾಯಕತ್ವದ ಮಹತ್ವವನ್ನು ಸಭೆಯಲ್ಲಿ ತಿಳಿಸಿದ್ದಾರೆ. ಇದಕ್ಕೆ ಪೂರಕವಾಗಿ ಮಾಜಿ ಸಿಎಂ ಯಡಿಯೂರಪ್ಪ ಸಹ “ಕೇವಲ ಪ್ರಧಾನಿ ಮೋದಿ ಹೆಸರು ಹೇಳಿಕೊಂಡು ವಿಧಾನಸಭೆ ಗೆಲ್ಲಲಾಗದು. ಇದರ ಜತೆಗೆ ಸರ್ಕಾರದ ಕಾರ್ಯಕ್ರಮ, ಎಲ್ಲ ವರ್ಗದ ಜನರನ್ನು ಸೆಳೆದು ಸಂಘಟನೆ ಮಾಡುವುದು ಹಾಗೂ ಜನರ ಭಾವನೆಗಳಿಗೆ ಸ್ಪಂದಿಸುವುದು ಮುಖ್ಯ’ ಎಂದಿದ್ದಾರೆ. ತನ್ಮೂಲಕ ಇಬ್ಬರೂ ನಾಯಕರು ಪ್ರಾದೇಶಿಕ ನಾಯಕತ್ವಕ್ಕೆ ಆದ್ಯತೆ ನೀಡುವುದು ಅನಿವಾರ್ಯ ಎಂಬುದನ್ನು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ:ಸರ್ದಾರ್ಜಿಖಲಿಸ್ತಾನಿ,ನಾವು ಪಾಕಿಸ್ತಾನಿ,ಕೇವಲ ಬಿಜೆಪಿ ಮಾತ್ರ ಹಿಂದೂಸ್ತಾನಿ|ಮೆಹಬೂಬಾ ಮುಫ್ತಿ

ಭಾವನಾತ್ಮಕ ಸಂಬಂಧಕ್ಕೆ ಬೆಲೆ
ಎಲ್ಲ ರಾಜ್ಯಗಳಲ್ಲಿಯೂ ಅವರದ್ದೇ ಆದ ಆಶೋತ್ತರಗಳು ಇರುತ್ತವೆ. ಜನರ ಭಾವನೆಗಳೊಂದಿಗೆ ಸ್ಥಳೀಯ ನಾಯಕರ ಸಂಬಂಧ ಇರುತ್ತದೆ. ನಾಡಿನ ಭಾಷೆ, ನೆಲ, ಜಲದೊಂದಿಗೆ ಭಾವನಾತ್ಮಕ ಸಂಬಂಧ ಇರುವ ನಾಯಕತ್ವಕ್ಕೆ ಮಹತ್ವ ಕೊಡಬೇಕು. ಪ್ರಾದೇಶಿಕ ನಾಯಕತ್ವಕ್ಕೆ ಪಕ್ಷ ಬೆಲೆ ನೀಡುತ್ತದೆ ಎಂಬುದಕ್ಕೆ ರಾಜ್ಯದಲ್ಲಿ ಪಕ್ಷ ಕಟ್ಟಿ ಬೆಳೆಸಿ, ನಾಯಕತ್ವ ಕೊಟ್ಟ ಯಡಿಯೂರಪ್ಪ ಅವರೇ ಸಾಕ್ಷಿ ಎಂದು ಹೇಳುವ ಮೂಲಕ ಸಿಎಂ ಬೊಮ್ಮಾಯಿ, ಪರೋಕ್ಷವಾಗಿ ಪ್ರಾದೇಶಿಕ ನಾಯಕತ್ವವನ್ನು ಯಾವುದೇ ಕಾರಣಕ್ಕೂ ಕಡೆಗಣಿಸುವುದು ಸೂಕ್ತವಲ್ಲ ಎಂಬ ಸಂದೇಶವನ್ನೂ ನೀಡಿದ್ದಾರೆ.

Advertisement

-ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next