Advertisement

ಪ್ರಾದೇಶಿಕ ಅಸಮತೋಲನ ಇಂದಿಗೂ ನಿಂತಿಲ್ಲ

06:56 AM Feb 24, 2019 | Team Udayavani |

ಬ್ಯಾಡಗಿ: ದಾವಣಗೆರೆಯನ್ನು ರಾಜಧಾನಿಯನ್ನಾಗಿ ಮಾಡುತ್ತೇನೆಂದ ದಿ| ಎಸ್‌.ನಿಜಲಿಂಗಪ್ಪ ರಾಜ್ಯದ ಮೊದಲ ಮುಖ್ಯಮಂತ್ರಿಯಾಗುವ ಅವಕಾಶ ಕಳೆದುಕೊಳ್ಳಬೇಕಾಯಿತು, ಅಂದಿನಿಂದಲೇ ರಾಜ್ಯದಲ್ಲಿ ಪ್ರಾದೇಶಿಕ ಅಸಮತೋಲನ ಆರಂಭವಾಗಿದ್ದು, ಇಂದಿಗೂ ನಿಂತಿಲ್ಲ. ಇದರ ನಿವಾರಣೆಗೆ ಡಾ| ಡಿ.ಎಂ. ನಂಜುಂಡಪ್ಪ ವರದಿ ದಿವ್ಯೌಷಧವಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ|ಬಿ.ಪಿ.ವೀರಭದ್ರಪ್ಪ ಹೇಳಿದರು.

Advertisement

ಪಟ್ಟಣದ ಬಿಇಎಸ್‌ಎಂ ಮಹಾವಿದ್ಯಾಲಯದಲ್ಲಿ ಡಾ| ಡಿ.ಎಂ.ನಂಜುಂಡಪ್ಪನವರ ಸ್ಮರಣಾರ್ಥ ಆಯೋಜಿಸಿದ್ದ ಪ್ರಾದೇಶಿಕ ಅಸಮತೋಲನ ಮತ್ತು ಅದಕ್ಕೆ ಪರಿಹಾರಗಳು ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದ ರು. ಮಾಜಿ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಅವರ ಮಾತುಗಳಿಗೆ ಗಟ್ಟಿ ಧ್ವನಿಗೂಡಿಸದೇ ಉತ್ತರ ಕರ್ನಾಟಕದ ಜನತೆ ತಪ್ಪು ಮಾಡಿದ್ದಾರೆ. ಅಂದಿನ ಒಂದು ತಪ್ಪಿಗೆ ಇಂದಿಗೂ ಪರಿಹಾರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.

ಸರ್ಕಾರದಿಂದ ಅಗತ್ಯ ಹಣಕಾಸು ನೆರವು ಸಿಗದೇ ಅದರ ಕಡತಗಳು ಧೂಳು ತಿನ್ನುತ್ತಿವೆ, ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆ’ ಇದರ ಮುಂದುವರಿದ ಭಾಗವಷ್ಟೇ. ‘ಉದಯವಾಗಲಿ ಚೆಲುವ ಕನ್ನಡ ನಾಡು’ ಎಂಬ ಹುಯಿಲಗೋಳ ನಾರಾಯಣ ಅವರ ನಾಡಗೀತೆ ಇತ್ತೀಚಿನ ಯಾವ ಜನಪ್ರತಿನಿಧಿಗಳಿಗೂ ಬೇಡವಾಗಿದೆ, ಅದರಲ್ಲಿ ಬರುವ ಕಾವೇರಿ ನದಿಗೆ ನೀಡಿದ ಮಹತ್ವ ಕೃಷ್ಣ ಮತ್ತು ಭೀಮಾ ನದಿಗಳಿಗೆ ನೀಡುತ್ತಿಲ್ಲ. ಕೇವಲ 3 ಜಿಲ್ಲೆಗಳಲ್ಲಿ ಹರಿಯುವ ಕಾವೇರಿ ನದಿ ರಾಜ್ಯದ ಜೀವನದಿಯಾಗಲು ಹೇಗೆ ಸಾಧ್ಯ ಎಂದರು.

ಕೃಷ್ಣ ‘ಬಿ’ಸ್ಕೀಮ್‌ ಅನುಷ್ಠಾನಕ್ಕೆ ಹಿಂದೇಟು ಹಾಕುತ್ತಿರುವುದರಿಂದ ಉತ್ತರ ಕರ್ನಾಟಕ ಜನರು ನೀರಾವರಿ ಯೋಜನೆಗಳಿಂದ ವಂಚಿತರಾಗಿದ್ದಾರೆ, ಕಬ್ಬಿಗರ ಜಿಲ್ಲೆ ಬೆಳಗಾವಿ ಇಂದು ಮಹಾರಾಷ್ಟ್ರದ ಪಾಲಾಗುತ್ತಿದ್ದರೂ ಕೇಳುವ ಸರ್ಕಾರಗಳಿಲ್ಲ ಎಂದು ಖೇದ ವ್ಯಕ್ತಪಡಿಸಿದರು.
 
ಹೊಸ ಜಿಲ್ಲೆಗಳ ರಚನೆ ಸಂದರ್ಭದಲ್ಲಿ ಹಾವೇರಿ ಬಾಗಲಕೋಟೆ, ಗದಗ ಜಿಲ್ಲೆಗಳನ್ನು ಪಡೆಯಲು ಪೊಲೀಸರ ಲಾಠಿ ರುಚಿ ನೋಡಬೇಕಾಯಿತು. ಜಿಲ್ಲೆಗಳು ಹೆಸರು ಅಂತಿಮವಾಗುವವರೆಗೂ ಹೋರಾಟಗಾರರು ಜೈಲಿನಲ್ಲಿ ಕೊಳೆಯಬೇಕಾಯಿತು. ಆದರೆ, ಯಾರೊಬ್ಬರೂ ಕೇಳದೇ ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರಚನೆ ಹೇಗಾಯಿತು ಎಂಬುದೇ ಈಗಿನ ಪ್ರಶ್ನೆ. ಇನ್ನು ಧಾರವಾಡಕ್ಕೆ ಸಂಚಾರಿ ಹೈಕೋರ್ಟ್‌ ಪೀಠ ಪಡೆಯಲು ದಶಕಗಳ ಕಾಲ ಹೋರಾಟ ನಡೆಸಬೇಕಾಯಿತು ಎಂದರು.

ನಂಜುಂಡಪ್ಪ ವರದಿಗೆ ಜಾತಿ ಬಣ್ಣ: ಮೌಲ್ಯಾಧಾರಿತ ರಾಜಕಾರಣಿ ದಿ| ರಾಮಕೃಷ್ಣ ಹೆಗಡೆ, ಜೆ.ಎಚ್‌. ಪಟೇಲ್‌ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ನಂಜುಂಡಪ್ಪ ವರದಿಗೆ ಹೆಚ್ಚು ಮಹತ್ವ ದೊರೆತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ತಳಬುಡುವಿಲ್ಲದ ರಾಜಕಾರಣಿಗಳ ಕೈಗೆ ಅಧಿಕಾರ ಸಿಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಕ್ಷೇತ್ರಕ್ಕೂ ಮುಖ ನೋಡಿ ಅನುದಾನ ಒದಗಿಸುವಂಥ ಕಾಲ ಎದುರಾಗಿದೆ. ವರದಿಗೆ ಜಾತಿ ಬಣ್ಣ ಹಚ್ಚಲಾಗುತ್ತಿದೆ. ಲಿಂಗಾಯತ ಸಮುದಾಯ ಹೆಚ್ಚು ಪ್ರಾಬಲ್ಯವಾಗಿರುವ ಕ್ಷೇತ್ರಗಳಿಗೆ ಯೋಜನೆ ಘೋಷಣೆಯಾಗುತ್ತಿರುವುದಾಗಿ ಆರೋಪಿಸಿ ಹೆಚ್ಚಿನ ಅನುದಾನ ನೀಡಲಾಗುತ್ತಿಲ್ಲ ಎಂದರು.

Advertisement

ಸ್ವಪ್ರತಿಷ್ಟೆಗೆ ರಾಜಕಾರಣ: ಧಾರವಾಡದ ಬಹುಶಿಸ್ತೀಯ ಸಂಶೋಧನಾ ಕೇಂದ್ರದ ಗೌರವ ಪ್ರಾಧ್ಯಾಪಕ ಡಾ| ಜಿ.ಕೆ. ಕಡೇಕೊಡಿ ಮಾತನಾಡಿ, ಸ್ವಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಇತ್ತೀಚೆಗೆ ಹಣ ಚೆಲ್ಲಿ ಜನಪ್ರತಿನಿ ಗಳಾಗುತ್ತಿದ್ದಾರೆ, ವೋಟ್‌ ಬ್ಯಾಂಕ್‌ ರಾಜಕಾರಣ ಪರಿಣಾಮ ದೂರದೃಷ್ಟಿ ಯೋಜನೆಗಳಿಗೆ ಅನುದಾನ ಸಿಗುತ್ತಿಲ್ಲ ಎಂದರು.
 
ಸಂಸ್ಥೆ ಅಧ್ಯಕ್ಷ, ಮಾಜಿ ಶಾಸಕ ಸುರೇಶಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು, ಡಾ| ಡಿ.ಎಂ. ನಂಜುಂಡಪ್ಪ ಪತ್ನಿ ಶಾಂತಮ್ಮ, ಕವಿವಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಆರ್‌.ಆರ್‌. ಬಿರಾದಾರ, ಪ್ರಾಚಾರ್ಯ ಪ್ರೊ| ಕೆ.ಜಿ. ಖಂಡಿಬಾಗೂರು, ನಂಜುಂಡಪ್ಪನವರ ಮಕ್ಕಳಾದ ಶಾರದಾ, ಡಾ| ಯಾಶಿತಾ, ಡಾ| ಶಶಿಧರ, ಡಾ| ಮಹೇಂದ್ರ, ಡಾ| ವಿಜಯಾ ಪೂಜಾರ, ಡಾ| ವಿ.ಬಿ. ಅಣ್ಣಿಗೇರಿ, ಸಹಾಯಕ ಪ್ರಾಧ್ಯಾಪಕ ಡಾ| ಎಸ್‌.ವಿ. ಹನಗೋಡಿಮಠ ಹಾಗೂ ವಿಚಾರ ಸಂಕಿರಣದ ಸಮನ್ವಯಾಧಿಕಾರಿ ಡಾ| ಎಸ್‌.ವಿ.ಉಜ್ಜಯನಿಮಠ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next