ಮುಂಬಯಿ, ಮಾ. 12.: ಬಂಟರ ಸಂಘ ಮುಂಬಯಿ ಇದರ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯ 13ನೇ ವಾರ್ಷಿಕ ಸಂಭ್ರಮವು ಮಾ. 7 ರಂದು ಕಾಂದಿವಲಿ ಪೂರ್ವದ ರಾಷ್ಟ್ರೀಯ ಹೆದ್ದಾರಿ ಬಳಿಯ ಹೊಟೇಲ್ ಅವೆನ್ಯೂ ಸಭಾಂಗಣದಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರ ಉಪಸ್ಥಿತಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜದ ಸಾಧಕರಾದ ಅಹರ್ವೇದ ಮತ್ತು ಅಂಬಾ ಗೋಪಾಲ ಫೌಂಡೇಶನ್ ಸಂಸ್ಥಾಪಕರಾದ ಹರೀಶ್ ಜಿ. ಶೆಟ್ಟಿ ದಂಪತಿ, ಡಿವಿಜನಲ್ ಫೈರ್ ಆಸರ್ ಹರಿಶ್ಚಂದ್ರ ಆರ್. ಶೆಟ್ಟಿ ದಂಪತಿ ಮತ್ತು ಪ್ರಾದೇಶಿಕ ಸಮಿತಿಯ ವ್ಯಾಪ್ತಿಯಲ್ಲಿ ಸಾಮಾಜಿಕ ಹಾಗೂ ವ್ಯವಹಾರ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ಲ್ಯಾಂಡ್ ಮಾರ್ಕ್ ಗ್ರೂಪ್ ಆಫ್
ಹೊಟೇಲ್ಸ್ ನ ಪ್ರಭಾಕರ್ ಶೆಟ್ಟಿ ದಂಪತಿ, ಗೋರೆಗಾಂವ್ ಕರ್ನಾಟಕ ಸಂಘ ಟ್ರಸ್ಟಿ ರಮೇಶ್ ಶೆಟ್ಟಿ ಪಯ್ನಾರು ದಂಪತಿ, ಹೊಟೇಲ್ ಸಪ್ನಾ ರೆಸ್ಟೋರೆಂಟ್ ಆ್ಯಂಡ್ ಬಾರ್ ಬೊರಿವಿಲಿ ಇದರ ಆನಂದ ಎಸ್. ಮಾಡ ದಂಪತಿ ಮತ್ತು ಪ್ರಾದೇಶಿಕ ಸಮಿತಿ ಜೋಗೇಶ್ವರಿ ದಹಿಸರ್ ಇದರ ಮಾಜಿ ಕಾರ್ಯಾಧ್ಯಕ್ಷೆ ಪದ್ಮಾವತಿ ಬಿ. ಶೆಟ್ಟಿ ದಂಪತಿ ಇವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಅಭಿನಂದಿಸಿ ಗೌರವಿಸಲಾಯಿತು.
ಸಮ್ಮಾನಕ್ಕೆ ಉತ್ತರಿಸಿದ ಹರೀಶ್ ಜಿ. ಶೆಟ್ಟಿ ಅವರು ಮಾನವನ ದುರಾಸೆಯಿಂದ ಪ್ರಕೃತಿ ಇಂದು ವಿಕಾರ ರೂಪ ತಾಳಿದ್ದು, ಪಂಚ ತತ್ವದಿಂದ ನಿರ್ಮಿತ ನಮ್ಮ ಜೀವ ಇಂದು ವಿಷಯುಕ್ತ ಆಹಾರ ಸೇವಿಸುವ ಮೂಲಕ ಕ್ಯಾನ್ಸರ್‌ನಂತಹ ಮಹಾ ಮಾರಕ ರೋಗಗಳಿಗೆ ತುತ್ತಾಗುವ ಸಮಯ ಒದಗಿ ಬಂದಿದೆ. ಹೊಸ ಜನಾಂಗಕ್ಕೆ ಶುದ್ಧ ಗಾಳಿ ಆಹಾರ ನೀರು ಒದಗಿಸುವ ಮೂಲ ಯೋಜನೆ ನಮ್ಮ ಸಂಸ್ಥೆ ಹೊಂದಿದ್ದು ಸರಕಾರಕ್ಕೆ ತಿಳಿ ಹೇಳುವ ಮೂಲಕ ಸಮಾಜದ ಪ್ರದೂಷಣೆಯನ್ನು ದೂರ ಮಾಡಿ ಉತ್ತಮ ಆರೋಗ್ಯ ನಿರ್ಮಿಸುವಂತಹ ದೇವರ ಕೆಲಸ ಈ ಸಂಸ್ಥೆಯಿಂದ ಜರುಗುತ್ತಿದ್ದು, ಅನ್ನ ಹಾಗೂ ತತ್ವಶಾಸ್ತ್ರದ ಆಧ್ಯಾತ್ಮಿಕತೆಯನ್ನು ಅಧ್ಯಯನಾತ್ಮಕವಾಗಿ ತಿಳಿಸುವ ಯೋಜನೆ ನಮ್ಮ ಸಂಸ್ಥೆಯದ್ದಾಗಿದೆ. ಎಂದು ಹೇಳಿ ಪ್ರಾದೇಶಿಕ ಸಮಿತಿಯ ಕಾರ್ಯವೈಖರಿಯನ್ನು ಶ್ಲಾಘಿಸಿ ಸರ್ವ ಸದಸ್ಯರನ್ನು ಅಭಿನಂದಿಸಿದರು.
ಸಮ್ಮಾನ ಸ್ವೀಕರಿಸಿದ ಇನ್ನೋರ್ವ ಸಾಧಕ ಡಿವಿಜನಲ್ ಫಾಯರ್ ಆಫೀಸರ್ ಹರಿಶ್ಚಂದ್ರ ಆರ್. ಶೆಟ್ಟಿ ಮಾತನಾಡಿ, ನಮ್ಮದು ಹೋರಾಟದ ಉದ್ಯೋಗವಾಗಿದ್ದರೂ ಆಪತ್ಕಾಲದಲ್ಲಿ ಸಂಕಷ್ಟದಲ್ಲಿರುವವರ ಜೀವ ಉಳಿಸುವುದು ನಮ್ಮ ಉದ್ಯೋಗದ ಆದ್ಯ ಕರ್ತವ್ಯವಾಗಿದೆ. ಇದೊಂದು ರಾಷ್ಟ್ರ ಸೇವೆಯೂ ಆಗಿದೆ. ರಾಷ್ಟ್ರ ಸೇವೆ ಹಾಗೂ ಸಾಹಸದ ಈ ಕಾಯಕದಲ್ಲಿ ಬಂಟ ಸಮಾಜದ ಯುವಕ ಯುವತಿಯರು ಉತ್ಸುಕತೆಯಿಂದ ಈ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವಂತೆ ಸಲಹೆ ನೀಡಿದರು. ಶಿರ್ವ ಬಂಟರ ಸಂಘದ ಅಧ್ಯಕ್ಷ ರಾಗಿ ಅವಿರೋಧ ಆಯ್ಕೆಗೊಂಡ ಮುಂಬಯಿಯ ಪವಾಯಿ ಎಸ್‌ಎಂ ಶೆಟ್ಟಿ ವಿದ್ಯಾಸಂಕುಲದ ಉಪಾಧ್ಯಕ್ಷರಾದ ನಡಿಬೆಟ್ಟು ನಿತ್ಯಾನಂದ ಹೆಗ್ಡೆ ಮತ್ತು ಆಹಾರ್ ವಲಯ ಹತ್ತರ ಉಪಾಧ್ಯಕ್ಷ ಡಾ| ಸತೀಶ್ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಸಮಿತಿಯ ಉಪಕಾರ್ಯಾಧ್ಯಕ್ಷರಾದ ಮುದ್ದಣ್ಣ ಜಿ. ಶೆಟ್ಟಿ, ನಿಟ್ಟೆ ಯುವ ವಿಭಾಗದ ಕಾರ್ಯಾಧ್ಯಕ್ಷ ಸಂಕೇಶ್ ಎಸ್. ಶೆಟ್ಟಿ, ಜತೆ ಕೋಶಾಧಿಕಾರಿ ಶಿಮಂತೂರು ಪ್ರವೀಣ್ ಶೆಟ್ಟಿ ರಘುನಾಥ್ ಎನ್. ಶೆಟ್ಟಿ, ಸಂಚಾಲಕ ವಿಜಯ ಆರ್. ಭಂಡಾರಿ, ಜಯಲಕ್ಷ್ಮೀ ಪ್ರಸಾದ್ ಶೆಟ್ಟಿ ಸಮ್ಮಾನಿತರನ್ನು ಪರಿಚಯಿಸಿದರು. ವೇದಿಕೆಯಲ್ಲಿ ಅತಿಥಿ ಗಣ್ಯರು, ಬಂಟರ ಸಂಘದ ಪದಾಧಿಕಾರಿಗಳು, ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು ಸರ್ವ ಸದಸ್ಯರು ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸದಸ್ಯರು ಉಪಸ್ಥಿತರಿದ್ದರು.
ಚಿತ್ರ -ವರದಿ :ರಮೇಶ್ ಉದ್ಯಾವರ್