Advertisement

ಇರಲಿ ಕೊರೊನಾ ಬಗ್ಗೆ ನಿರಂತರ ಎಚ್ಚರಿಕೆ

09:20 AM Mar 01, 2020 | mahesh |

ಕೊರೊನಾ ಇಷ್ಟೆಲ್ಲ ಅವಾಂತರಗಳನ್ನು ಮಾಡಿದ್ದರೂ ನಮ್ಮ ಆಡಳಿತ ವ್ಯವಸ್ಥೆ ಈ ನಿಟ್ಟಿನಲ್ಲಿ ಗಂಭೀರವಾದ ಚಿಂತನೆಯನ್ನು ಮಾಡಿರುವಂತೆ ಕಾಣಿಸುತ್ತಿಲ್ಲ. ಸರಕಾರದ ಮಟ್ಟದಲ್ಲಿ ಕೊರೊನಾ ಎದುರಿಸಲು ಸರ್ವ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ ಎಂಬ ಹೇಳಿಕೆಗಳು ಬರುತ್ತಿದ್ದರೂ ವಾಸ್ತವ ಸ್ಥಿತಿ ಭಿನ್ನವಾಗಿದೆ.

Advertisement

ಚೀನದಲ್ಲಿ ಹುಟ್ಟಿದ ಮಾರಕ ಕೊರೊನಾ ವೈರಸ್‌ ಈಗ ಇಡೀ ಜಗತ್ತನ್ನು ವ್ಯಾಪಿಸಿದೆ. ಅಂಟಾರ್ಟಿಕಾ ಹೊರತುಪಡಿಸಿ ಎಲ್ಲ ಭೂಖಂಡಗಳಲ್ಲಿ ಕೊರೊನಾ ಪ್ರಕರಣಗಳು ವರದಿಯಾಗಿವೆ. ಕೇಂದ್ರಸ್ಥಾನವಾದ ಚೀನ ವೈರಸ್‌ ಹಾವಳಿಯನ್ನು ತಡೆಯುವ ದಾರಿಗಾಣದೆ ಕಂಗಾಲಾಗಿದೆ. ಆ ದೇಶದಲ್ಲಿ ಈಗಾಗಲೇ 2000ಕ್ಕೂ ಹೆಚ್ಚು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ ಹಾಗೂ ಸುಮಾರು 80,000 ಮಂದಿ ರೋಗ ಪೀಡಿತರಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಚೀನ ನೀಡುತ್ತಿರುವ ಅಂಕಿಅಂಶಗಳ ಬಗ್ಗೆ ಯಾರಿಗೂ ನಂಬಿಕೆಯಿಲ್ಲ. ಅಲ್ಲಿನ ಪರಿಸ್ಥಿತಿ ಇದಕ್ಕಿಂತಲೂ ಭೀಕರವಾಗಿದ್ದು , ಚೀನ ಇದನ್ನು ಬಚ್ಚಿಡುತ್ತಿದೆ ಎಂಬ ಅನುಮಾನ ದಟ್ಟವಾಗಿದೆ.

ಇರಾನ್‌, ಇಟಲಿ ಸೇರಿ ಹಲವು ದೇಶಗಳಲ್ಲಿ ಈಗಾಗಲೇ ಕೊರಾನಾ ಪ್ರಕರಣಗಳು ವರದಿಯಾಗಿವೆ. ನಮ್ಮ ದೇಶದಲ್ಲೂ ಕೆಲವು ಕೊರೊನಾ ಪ್ರಕರಣಗಳು ವರದಿಯಾಗಿದ್ದರೂ ಪರೀಕ್ಷೆಯ ನಂತರ ನೆಗೆಟಿವ್‌ ವರದಿ ಬಂದ ಬಳಿಕ ಸದ್ಯ ನೆಮ್ಮದಿಯಿಂದ ಇದ್ದೇವೆ. ಆದರೆ ಜಾಗತೀಕರಣದ ಈ ಯುಗದಲ್ಲಿ ಕೊರೊನಾದಂಥ ವೈರಸ್‌ನಿಂದ ಜನವಾಸವಿರುವ ಯಾವ ಪ್ರದೇಶವೂ ಬಚಾವಾಗುವಂತಿಲ್ಲ ಎನ್ನುತ್ತಿದೆ ವಿಶ್ವ ಆರೋಗ್ಯ ಸಂಸ್ಥೆ. ಇದು ನಮಗೆ ಎಚ್ಚರಿಕೆಯಾಗಬೇಕು.

ಚೀನದ ಬಳಿಕ ಅತಿ ಹೆಚ್ಚು ಜನಸಂಖ್ಯೆಯಿರುವುದು ನಮ್ಮ ದೇಶದಲ್ಲಿ. ಇಲ್ಲಿ ವೈರಸ್‌ ಹರಡಲು ವಿಪುಲವಾದ ಅವಕಾಶಗಳಿವೆ. ಹೀಗಾಗಿ ನಮ್ಮಲ್ಲಿನ್ನೂ ವೈರಸ್‌ ಹಾವಳಿ ಕಾಣಿಸಿಕೊಂಡಿಲ್ಲ ಎಂದು ನಿರುಮ್ಮಳವಾಗಿರುವುದು ಅಪಾಯಕಾರಿಯಾದೀತು. ಅಮೆರಿಕದ ಗುಪ್ತಚರ ಪಡೆ ಕೂಡ ಈ ಮಾದರಿಯ ಎಚ್ಚರಿಕೆಯೊಂದನ್ನು ಭಾರತಕ್ಕೆ ನೀಡಿದೆ.

ಕೊರೊನಾ ವೈರಸ್‌ ಶಮನಗೊಳಿಸುವ ಯಾವುದೇ ಔಷಧಿಯನ್ನು ಇನ್ನೂ ಕಂಡು ಹಿಡಿದಿಲ್ಲ. ಈ ನಿಟ್ಟಿನಲ್ಲಿ ಪ್ರಯತ್ನ ಸಾಗಿದ್ದರೂ ಔಷಧಿ ತಯಾರಾಗಲು ಕನಿಷ್ಠ ಒಂದೂವರೆ ವರ್ಷ ಹಿಡಿಯಬಹುದು. ಹೀಗಾಗಿ ಸದ್ಯ ಫ‌ೂÉ, ನ್ಯೂಮೋನಿಯ ಮಾದರಿಯ ವೈರಾಣು ರೋಗಗಳನ್ನು ತಡೆಗಟ್ಟಲು ಬಳಸುವ ಆ್ಯಂಟಿಬಯಾಟಿಕ್ಸ್‌ ಹಾಗೂ ಲಸಿಕೆಗಳನ್ನೇ ಉಪಯೋಗಿಸಿ ರೋಗವನ್ನು ತಹಬಂದಿಗೆ ತರಲಾಗುತ್ತಿದೆ. ಇಂಥ ಔಷಧಿಗಳು ಹಾಗೂ ಮಾಸ್ಕ್ ಇತ್ಯಾದಿ ಪರಿಕರಗಳು ಧಾರಾಳವಾಗಿ ದಾಸ್ತಾನು ಇರುವಂತೆ ನೋಡಿಕೊಳ್ಳುವುದಕ್ಕೆ ಆಳುವ ವ್ಯವಸ್ಥೆ ಏರ್ಪಾಡು ಮಾಡಬೇಕು. ಅಂತೆಯೇ ವೈರಸ್‌ನ ಲಕ್ಷಣಗಳು ಏನಾದರೂ ಕಂಡುಬಂದರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು. ಆದರೆ ಕೊರೊನಾ ಇಷ್ಟೆಲ್ಲ ಅವಾಂತರಗಳನ್ನು ಮಾಡಿದ್ದರೂ ನಮ್ಮ ಆಡಳಿತ ವ್ಯವಸ್ಥೆ ಈ ನಿಟ್ಟಿನಲ್ಲಿ ಗಂಭೀರವಾದ ಚಿಂತನೆಯನ್ನು ಮಾಡಿರುವಂತೆ ಕಾಣಿಸುತ್ತಿಲ್ಲ. ಸರಕಾರದ ಮಟ್ಟದಲ್ಲಿ ಕೊರೊನಾ ಎದುರಿಸಲು ಸರ್ವ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ ಎಂಬ ಹೇಳಿಕೆಗಳು ಬರುತ್ತಿದ್ದರೂ ವಾಸ್ತವ ಸ್ಥಿತಿ ಭಿನ್ನವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ , ಸರಕಾರಿ ಆಸ್ಪತ್ರೆಗಳಲ್ಲಿ ಆ ಮಟ್ಟದ ಯಾವ ಸಿದ್ಧತೆಯೂ ಗೋಚರಿಸುತ್ತಿಲ್ಲ.

Advertisement

ಕೊರೊನಾ ವೈರಸ್‌ ಜಾಗತಿಕ ಆರ್ಥಿಕತೆಯ ಮೇಲೆ ಬೀರುತ್ತಿರುವ ಪರಿಣಾಮವೂ ಕಳವಳಕಾರಿಯಾಗಿದೆ. ಬಾಂಬೆ ಶೇರುಪೇಟೆಯಲ್ಲಿ ಶುಕ್ರವಾರ ಒಂದೇ ದಿನದಲ್ಲಿ ಹೂಡಿಕೆದಾರರು ಕೊರೊನಾದಿಂದಾಗಿ 5 ಲಕ್ಷ ಕೋ. ರೂ. ನಷ್ಟ ಅನುಭವಿಸಿದ್ದಾರೆ. ಚೀನವೂ ಸೇರಿದಂತೆ ಕೊರೊನಾ ಬಾಧಿತ ದೇಶಗಳಿಗೆ ಈ ಮಾದರಿಯ ಆರ್ಥಿಕ ಹೊಡೆತಗಳು ಬಿದ್ದಿವೆ. ವಾಯುಯಾನ, ರಫ್ತು ಸೇರಿದಂತೆ ಹಲವು ವಲಯಗಳು ಕೊರೊನಾದಿಂದಾಗಿ ಕಂಗಾಲಾಗಿವೆ. ಸ್ಥಳೀಯ ಆರ್ಥಿಕತೆಯ ಮೇಲೂ ಕೊರೊನಾ ಪರಿಣಾಮ ಬೀರಲಾರಂಭಿಸಿದೆ. ನಮ್ಮ ಕುಕ್ಕುಟ ಉದ್ಯಮ ಸಾವಿರಾರು ಕೋ. ರೂ. ನಷ್ಟ ಅನುಭವಿಸುತ್ತಿರುವುದೇ ಇದಕ್ಕೊಂದು ಉತ್ತಮ ಉದಾಹರಣೆ. ಕಳೆದೆರಡು ವಾರಗಳಿಂದ ಫಾರ್ಮ್ ಕೋಳಿ ಬೆಲೆ ನಿರಂತರವಾಗಿ ಇಳಿಕೆಯಾಗಿ ಕೋಳಿ ಸಾಕಿದವರೆಲ್ಲ ಕೈಸುಟ್ಟುಕೊಂಡಿದ್ದಾರೆ. ಇದೇ ವೇಳೆ ಚೀನಾದ ರಫ್ತು ಬಹುತೇಕ ಸ್ಥಗಿತಗೊಂಡಿದ್ದು, ಈ ಪರಿಸ್ಥಿತಿಯನ್ನು ನಮ್ಮ ಲಾಭಕ್ಕೆ ಪರಿವರ್ತಿಸುವ ಅವಕಾಶವೊಂದು ಇದೆ. ಆದರೆ ಇದು ಸಾಧ್ಯವಾಗಬೇಕಾದರೆ ಸರಕಾರ ರಕ್ಷಣಾತ್ಮಕವಾಗಿ ಆಡುವುದನ್ನು ಬಿಟ್ಟು ಆಕ್ರಮಣಕಾರಿಯಾಗಿ ಆಡುವ ಮನೋಭಾವವನ್ನು ತೋರಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next