Advertisement

ದೂರು ದಾಖಲಿಸಲು ನಿರಾಕರಣೆ: ಠಾಣೆ ಮುಂದೆ ಪ್ರತಿಭಟನೆ

02:31 PM Nov 18, 2017 | Team Udayavani |

ಪುತ್ತೂರು: ಅಪಘಾತದಿಂದ ಬೈಕ್‌ ಸವಾರ ಮೃತಪಟ್ಟಿದ್ದು, ಸಂಪ್ಯ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ
ಎಂದು ಆರೋಪಿಸಿ ಠಾಣೆ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.

Advertisement

ಘಟನೆ ಬಗ್ಗೆ ಮಾಹಿತಿ ನೀಡಿದ ಹಿಂದೂ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ, ನ. 15ರಂದು ಸಂಟ್ಯಾರ್‌ ಬಳಿ ಅಪಘಾತ ಸಂಭವಿಸಿದ್ದು, ಬೈಕ್‌ ಸವಾರ ಜಗದೀಶ್‌ ರೈ ಮೃತಪಟ್ಟಿದ್ದಾರೆ. ಪ್ರಕರಣದ ಬಗ್ಗೆ ಲಾರಿ ಚಾಲಕನಿಂದ ದೂರು ಪಡೆದು ಕೊಂಡ ಪೊಲೀಸರು, ಮೃತರನ್ನೇ ಆರೋಪಿಯಾಗಿಸಿದ್ದಾರೆ. ಘಟನೆಯಲ್ಲಿ ಲಾರಿಯ ಹಿಂಬದಿ ಚಕ್ರಕ್ಕೆ ಬೈಕ್‌ ತಾಗಿರುವ ಫೋಟೋ ಪೊಲೀಸರು ತೋರಿಸುತ್ತಿದ್ದಾರೆ. ಆದರೆ ಮೊದಲಿಗೆ ಲಾರಿಯ ಮುಂಭಾಗಕ್ಕೆ ಬೈಕ್‌ ಢಿಕ್ಕಿಯಾಗಿದ್ದು, ಬಳಿಕ ಹಿಂಭಾಗಕ್ಕೆ ಎಸೆಯಲ್ಪಟ್ಟಿದೆ. ಇದರ ಬಗ್ಗೆ ಮಾತನಾಡುವುದೇ ಇಲ್ಲ. ಫೋಟೋದಲ್ಲಿ ಬೈಕ್‌ ಬಿದ್ದಿರುವುದು ಮಾತ್ರ ದಾಖಲಾಗಿದೆ ಎಂದರು.

ಸಹಾಯಕ್ಕೆ ಬಾರದ ಪೊಲೀಸರು
ವಕೀಲ ಗಿರೀಶ್‌ ಮಳಿ ಅವರು ಮಾತನಾಡಿ, ಪೊಲೀಸರು ಹಿಂಬರಹ ನೀಡಿದ್ದಾರೆ. ಒಂದು ಪ್ರಕರಣ ದಾಖಲಿಸಲಾಗಿದೆ
ಎಂದು ಪೊಲೀಸರು ಹೇಳಿದ್ದಾರೆ. ಇದು ಸರಿಯಲ್ಲ. ದೂರು ಕೊಟ್ಟರೆ ಸ್ವೀಕರಿಸಬೇಕಿತ್ತು. ಸ್ಥಳದಲ್ಲೇ ಮರಳು ಲಾರಿ ತಪಾಸಣೆ ನಡೆಸುತ್ತಿದ್ದ ಪೊಲೀಸರು ಅಪಘಾತ ನಡೆದ ವೇಳೆ ಸಹಾಯಕ್ಕೆ ಬರಲಿಲ್ಲ. ಪೊಲೀಸ್‌ ಜೀಪಿನಲ್ಲಿ ಗಾಯಾಳುವನ್ನು ಕೊಂಡೊಯ್ಯಲು ಮುಂದಾಗಲಿಲ್ಲ. ಬದಲಿಗೆ, ಲಾರಿ ಚಾಲಕನಿಂದಲೇ ದೂರು ಬರೆಸಿಕೊಂಡು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ದುಃಖದಲ್ಲಿದ್ದ ಮನೆ ಯವರನ್ನು ವಂಚಿಸಿದ್ದಾರೆ ಎಂದರು.

ಘಟನೆ ಬಗ್ಗೆ ಮಾತನಾಡಿದ ಎಸ್‌ಐ ಅಬ್ದುಲ್‌ ಖಾದರ್‌, ಘಟನೆ ಬಗ್ಗೆ ಒಂದು ದೂರು ದಾಖಲಿಸಲಾಗಿದೆ. ಇನ್ನೊಂದು ದೂರು ದಾಖಲಿಸಲು ಸಾಧ್ಯವಿಲ್ಲ. ಮನೆಯವರ ದೂರನ್ನು ಸ್ವೀಕರಿಸಿದ್ದೇವೆ. ಮುಂದಿನ ಕ್ರಮ ತನಿಖಾಧಿಕಾರಿಗೆ ಬಿಟ್ಟದ್ದು. 

ಘಟನೆ
ನ. 15ರಂದು ಸಂಜೆ ಸುಮಾರು 4 ಗಂಟೆಗೆ ಘಟನೆ ಸಂಭವಿಸಿದೆ. ಎದುರಿನಿಂದ ಬಂದ ಲಾರಿ ಬೈಕ್‌ಗೆ ಢಿಕ್ಕಿಯಾಗಿದ್ದು, ಮಾಟ್ನೂರು ಸರೋಳ್ತಡಿ ನಿವಾಸಿ, ಕೃಷಿಕ ಜಗದೀಶ್‌ ರೈ (50) ಮೃತಪಟ್ಟಿದ್ದರು. ಲಾರಿ ಚಾಲಕ ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಲಾಗಿದೆ. ಬೈಕ್‌ ಸವಾರನ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಐಪಿಸಿ ಕಲಂ 279 (ರ್ಯಾಶ್‌ ಆ್ಯಂಡ್‌ ನೆಗ್ಲಿಜೆನ್ಸ್‌)   337 (ಸಾಧಾರಣ ಗಾಯ) ಪ್ರಕರಣ ದಾಖಲಿಸಲಾಗಿದೆ. ವೃತ್ತ ನಿರೀಕ್ಷಕ ಗೋಪಾಲಕೃಷ್ಣ ತನಿಖಾಧಿಕಾರಿಯಾಗಿದ್ದರು.

Advertisement

ಸಮಗ್ರ ತನಿಖೆಯಾಗಲಿ
ಮೃತರ ಸಂಬಂಧಿಕ ನಿತಿನ್‌ ಮಾತನಾಡಿ, ಲಾರಿಯಲ್ಲಿ ಗ್ಯಾಸ್‌ ಸಿಲಿಂಡರ್‌ ಸಾಗಿಸಲಾಗುತ್ತಿತ್ತು. ಮಂಗಳೂರಿನಲ್ಲಿ ಲೋಡ್‌ ಆಗಿ ಮೈಸೂರು ಕಡೆಗೆ ಹೋಗುತ್ತಿತ್ತು. ಅಪಘಾತ ನಡೆದ ಹೊತ್ತಲ್ಲಿ, ಲಾರಿಯ ಮುಂಭಾಗಕ್ಕೆ ಬೈಕ್‌ ಢಿಕ್ಕಿ ಹೊಡೆದಿದೆ ಎಂದು ಸ್ವತಃ ಲಾರಿ ಚಾಲಕನೇ ಹೇಳಿದ್ದಾನೆ. ಆದರೆ ದೂರು ನೀಡುವಾಗ ಇದನ್ನು ಬದಲಾಯಿಸಲಾಗಿದೆ. ಪೊಲೀಸರು ಲಾರಿ ಚಾಲಕನ ದೂರನ್ನೇ ದಾಖಲಿಸಿಕೊಂಡಿದ್ದಾರೆ. ಮೃತರ ಕಡೆ ಯಿಂದ ಠಾಣೆಗೆ ದೂರು ನೀಡಲು ಹಲವು ಬಾರಿ ಠಾಣೆಗೆ ತೆರಳಿದ್ದೇವೆ. ಆದರೆ ಇದುವರೆಗೆ ದೂರು ಸ್ವೀಕರಿಸಿಲ್ಲ. ಪ್ರತಿಭಟನೆ ಬಳಿಕ ದೂರು ಸ್ವೀಕರಿಸಿ, ಹಿಂಬರಹ ನೀಡಿದ್ದಾರೆ. ಘಟನೆಯ ಸಮಗ್ರ ತನಿಖೆಗೆ ಆಗ್ರಹಿಸಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.