ಹೊಸದಿಲ್ಲಿ: “ದೇಶದ ಕಾನೂನುಗಳನ್ನು ಪಾಲಿಸಿ; ಇಲ್ಲವೇ ಕಠಿನ ಕ್ರಮ ಎದುರಿಸಿ. ಅದರಲ್ಲಿ ಸುಳ್ಳು ಸುದ್ದಿ, ವದಂತಿಗಳನ್ನು ತಡೆಯಲು ವಿಫಲರಾದರೆ ಭಾರತದಲ್ಲಿರುವ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿಸಲಾಗುತ್ತದೆ.’- ಇದು ವದಂತಿಗಳನ್ನು ನಂಬಿ ಗುಂಪು ಥಳಿತ ತಡೆಯಲು ಕೇಂದ್ರ ಸರಕಾರ ರಚಿಸಿದ ಅಧಿಕಾರಿಗಳ ಸಮಿತಿ ನೀಡಿರುವ ವರದಿಯ ಪ್ರಮುಖ ಅಂಶ. ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ನೇತೃತ್ವದ ಅಧಿಕಾರಿಗಳ ಸಮಿತಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‌ಗೆ ವರದಿ ಸಲ್ಲಿಸಿದೆ.
ಇದರ ಜತೆಗೆ ಸಣ್ಣ ಮಕ್ಕಳನ್ನು ಅಶ್ಲೀಲ ಸಿನೆಮಾಗಳಿಗೆ ಬಳಕೆ ಮಾಡುವುದರ ವಿರುದ್ಧವೂ ಸಮಿತಿ ಕ್ರಮಗಳನ್ನು ಸೂಚಿಸಿದೆ. ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ವಾಟ್ಸ್‌ಆ್ಯಪ್ ಮತ್ತಿತರ ಜಾಲತಾಣಗಳಲ್ಲಿ ವದಂತಿ, ಸುಳ್ಳು ಸುದ್ದಿ ನಂಬಿ ಥಳಿತಕ್ಕೊಳಗಾಗಿ 40 ಮಂದಿ ಅಸುನೀಗಿದ್ದರು.
ಆಕ್ಷೇಪಾರ್ಹ, ಸುಳ್ಳು ಸುದ್ದಿ ಹಾಗೂ ವೀಡಿಯೋ ತೆಗೆದು ಹಾಕದಿದ್ದರೆ ಭಾರತದಲ್ಲಿರುವ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾ ಗುತ್ತದೆ. ಸಚಿವ ರಾಜನಾಥ್ ನೇತೃತ್ವದ ಸಚಿವರ ಸಮಿತಿ ಈ ಬಗ್ಗೆ ಚರ್ಚಿಸಿ ಶೀಘ್ರವೇ ಪ್ರಧಾನಿ ಮೋದಿಯವರಿಗೆ ಅಂತಿಮ ವರದಿ ಸಲ್ಲಿಸಲಿದೆ.
ತಾಣಗಳ ದುರ್ಬಳಕೆ ಮಾಡಬೇಡಿ: ಪಿಎಂ
“ಸುಳ್ಳು, ಕೊಳಕು ಸುದ್ದಿಗಳು ಹಾಗೂ ಕಣ್ಣಿಗೆ ಕಂಡಿದ್ದನ್ನೆಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲು ಹೋಗಬೇಡಿ. ಆ ಮೂಲಕ ಸಮಾಜಘಾತುಕ ಚಟುವಟಿಕೆಗಳಿಗೆ ಪ್ರೇರಣೆ ನೀಡಬೇಡಿ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಕಾರ್ಯಕರ್ತರು ಹಾಗೂ ಯುವಜನತೆಗೆ ಕರೆ ನೀಡಿದ್ದಾರೆ. ಹಾಗಂಥ ಯಾವುದೇ ಸಿದ್ಧಾಂತದ ವಿರುದ್ಧದ ಮಾತು ಇದಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಸ್ವ ಕ್ಷೇತ್ರ ವಾರಾಣಸಿಯಲ್ಲಿನ ಕಾರ್ಯಕರ್ತರು, ಸಂಚಾಲಕರ ಜತೆ ಮಾತುಕತೆ ನಡೆಸಿದ ಮೋದಿ, “ಯಾವುದೇ ವಿಚಾರಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಬೇಡಿ. ಈ ವಿಚಾರದಲ್ಲಿ ನಮ್ಮನ್ನು ನಾವೇ ತಿದ್ದುಕೊಳ್ಳಬೇಕು. ಒಂದಿಷ್ಟು ಒಳ್ಳೆಯ ಕೆಲಸಗಳನ್ನು ಮಾಡಲು ವೇದಿಕೆಯಾಗಿಸಿಕೊಳ್ಳಿ’ ಎಂದಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, “ಕೆಲವೊಮ್ಮೆ ಜಾಲತಾಣಗಳಲ್ಲಿ ಹರಿಬಿಡುವ ಸುಳ್ಳು ಸುದ್ದಿಗಳಿಂದ ಸಮಾಜದ ಮೇಲೆ ಏನು ಪರಿಣಾಮ ಬೀರುತ್ತದೆನ್ನುವುದರ ಬಗ್ಗೆ ಅರಿವು ಇರುವುದಿಲ್ಲ. ಅದರಿಂದ ನಷ್ಟ ಉಂಟಾಗಬಹುದು’ ಎಂದರು.