ಚಿತ್ರಕಲಾ ಪರಿಷತ್ತಿನ ಗ್ಯಾಲರಿಯಲ್ಲಿ ಈ ಬಾರಿ ಅಪರೂಪದ ಚಿತ್ರಾವಳಿಗಳ ಸಂಗಮ. ಫೋಟೋಗ್ರಫಿ, ಪೇಂಟಿಂಗ್- ಎರಡನ್ನೂ ಒಟ್ಟೊಟ್ಟಿಗೆ ಕಲಾಸಕ್ತರ ಎದುರಿಟ್ಟಿದ್ದಾರೆ, ಸುಪ್ರೀತ್ ಅಡಿಗ. ಸುಪ್ರೀತ್ ಅವರ ನಿಸರ್ಗ ಛಾಯಾಚಿತ್ರ ಹಾಗೂ ಗೆರೆಗಳಲ್ಲಿ ಬದುಕಿನ ಭಾವಗಳನ್ನು ತೆರೆದಿಟ್ಟ ಕಲಾಕೃತಿಗಳ ಪ್ರದರ್ಶನ “ರಿಫೋಕಲ್’ ಎಲ್ಲರ ಗಮನ ಸೆಳೆಯುತ್ತಿದೆ.
ಜೂನ್ 7ರಂದು ಆರಂಭಗೊಂಡಿರುವ “ರಿಫೋಕಲ್’ ಪ್ರದರ್ಶನದಲ್ಲಿ ಹಲವು ಆಕರ್ಷಣೆಗಳಿವೆ. ಬಹುಮುಖೀ ದೃಶ್ಯ ಸಂಸ್ಕೃತಿಯಲ್ಲಿ ತೊಡಗಿಸಿಕೊಂಡಿರುವ ಕಲಾವಿದ ಸುಪ್ರೀತ್ ಅಡಿಗ ಚಿತ್ರಕಲೆ, ಛಾಯಾಗ್ರಾಹಕ, ವಿನ್ಯಾಸಕ ಮತ್ತು ಅನಿಮೇಶನ್ ಕ್ಷೇತ್ರಗಳಲ್ಲಿ ದುಡಿಸಿಕೊಂಡವರು. ಇವರ ಕಲಾಕೃತಿಗಳು ವೈವಿಧ್ಯತೆಗೆ ಹೆಸರಾದಂಥವು. ಪ್ರತಿ ಚಿತ್ರದಲ್ಲೂ ಪ್ರಕೃತಿ, ಸಮಾನತೆಯ ಭಾವ ಮುಂತಾದ ವ್ಯಕ್ತಿಗತ ಶೋಧಕ ಗುಣಗಳನ್ನು ಒಳಗೊಂಡಿದೆ.
“ಸುಪ್ರೀತ್‌ರ ಛಾಯಾಚಿತ್ರಗಳು, ಒಂದು ಅಗೋಚರ ಜಗತ್ತನ್ನು ಕ್ಯಾಮೆರಾ ಕಣ್ಣಿನಿಂದ ಅನಾವರಣಗೊಳಿಸಿವೆ. ಹಳೆಯ ಪ್ರಾಕೃತಿಕ ದೃಶ್ಯಾವಳಿಗಳು, ಸಮುದ್ರದ ಚಿತ್ರಗಳು, ಚೌಕಟ್ಟುಗಳು, ನೀರಿನ ಅಲೆಯೋಪಾದಿಯಲ್ಲಿ ಗೋಚರಿಸುವ ಮರಳಿನ ರೂಪಗಳು- ಇವೇ ಮುಂತಾದವುಗಳ ವ್ಯಕ್ತಿಗತ ದೃಶ್ಯದಾಖಲೆಗಳ ಮಾಲೆ’ ಎನ್ನುವುದು ಕಲಾ ಇತಿಹಾಸಕಾರ ಡಾ.ಎಚ್.ಆರ್. ಕುಲಕರ್ಣಿ ಅವರ ಬಣ್ಣನೆ.
ಸುಪ್ರೀತ್‌ರ ಕ್ಯಾಮೆರಾದ ಜಾದೂಗಳನ್ನು ಸವಿಯಬಯಸುವವರು, ಚಿತ್ರಕಲಾ ಪರಿಷತ್ತಿನತ್ತ ಧಾವಿಸಬಹುದು. ಜೂನ್ 11ಕ್ಕೆ ಪ್ರದರ್ಶನ ಕೊನೆಯಾಗುತ್ತದೆ.
ಏನಿದು?
ರಿಫೋಕಲ್! ಸುಪ್ರೀತ್ ಅಡಿಗ ಅವರ ಛಾಯಾಚಿತ್ರ ಹಾಗೂ ಚಿತ್ರಕಲಾ ಪ್ರದರ್ಶನ.
ಎಲ್ಲಿ?
ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ
ಸಮಯ
ಬೆಳಗ್ಗೆ 10ರಿಂದ ಸಂಜೆ 6