Advertisement

ಮೊಬೈಲ್‌ ಮಾಯಾಜಾಲ ರೀಲ್ಸ್‌ ಇಂದ್ರಜಾಲ!: ರೀಲ್‌ಗ‌ಳಿಗೆ ಮರುಳಾಗಬೇಡಿ, ನೆನಪು ಕುಂದುತ್ತೆ 

12:36 PM May 12, 2024 | Team Udayavani |

ರೂರ್ಕಿಯ ಒಂದು ರೇಲ್ವೆ ಹಳಿಯ ಮೇಲೆ ಒಬ್ಬ ಯುವತಿ ತನ್ನ ಸ್ನೇಹಿತೆಯ ಜೊತೆ 15 ಸೆಕೆಂಡುಗಳ ಒಂದು ರೀಲ್‌ ಮಾಡುತ್ತಿದ್ದಾಳೆ. ರೈಲು ಬರುವುದನ್ನು ಆಕೆ ನೋಡಿಯೇ ಇಲ್ಲ. ಪರಿಣಾಮ; ರೀಲ್‌ ಮುಗಿಸುವ ಬದಲು ರೈಲಿಗೆ ಬಲಿಯಾದಳು. ಇದು ನಡೆದದ್ದು ಮೊನ್ನೆ ಮೇ 2ರಂದು.

Advertisement

ಛತ್ತೀಸ್‌ಗಢದ ಬಿಲಾಸ್‌ಪುರ್‌ನಲ್ಲಿ ಹೋದ ವರ್ಷ ಇದೇ ರೀತಿ 20 ವರ್ಷದ ಯುವಕನೊಬ್ಬ ಇನ್ಸಾ$r ರೀಲ್‌ ಮಾಡುತ್ತಾ ಸತ್ತು ಹೋದ. ವಿಪರ್ಯಾಸವೆಂದರೆ, ಈತ ಸಾಯುತ್ತಿದ್ದುದನ್ನು ಮತ್ತೂಬ್ಬ ಯುವಕ ರೀಲ್‌ ಮಾಡಿ ಹಾಕಿದ್ದ! ಮತ್ತೂಂದು ಪ್ರಕರಣದಲ್ಲಿ ಹಾವಿನೊಂದಿಗೆ ಆಟವಾಡುತ್ತಾ ಅದನ್ನು ರೀಲ್ಸ್‌ ಮಾಡುತ್ತಿದ್ದವನನ್ನು ಹಾವು ಅಲ್ಲೇ ಕಚ್ಚಿ ಸಾಯಿಸಿತು!

“ರೀಲ್ಸ್‌’ ಎಂಬ ಈ ಅಲೆಗಳನ್ನು ಇನ್ಸ್ಟಾಗ್ರಾಂ ಬಿಡುಗಡೆ ಮಾಡಿದ್ದು 2020ರ ಆಗಸ್ಟ್ ನಲ್ಲಿ. ಅದು, ಕೋವಿಡ್‌ ಟೈಂ! ನಾವೆಲ್ಲರೂ ಹೊರ ಹೋಗಲಾಗದೆ ಚಡಪಡಿಸುತ್ತಿದ್ದ ಸಂದರ್ಭ. ಆ ಸಮಯದಲ್ಲಿ ಹೊರಬಂದ ರೀಲ್ಸ್‌ಗಳನ್ನು ಪ್ರಪಂಚದ ಕೋಟ್ಯಂತರ ಬಳಕೆದಾರರು ಅಪ್ಪಿಕೊಂಡರು. ನೋಡಿದರು, ಮಾಡಿದರು, ಅದರಲ್ಲಿಯೇ ಮುಳುಗಿ ಹೋದರು!

“ಟಿಕ್‌ ಟಾಕ್‌’, ಮೈಕ್ರೋ ವೀಡಿಯೋ ಸೇವೆಗಳಿಗೆ ಪ್ರತಿಸ್ಪರ್ಧಿಯಾಗಿ ಇನ್‌ಸ್ಟಾಗ್ರಾಮ್‌ ಬಿಡುಗಡೆ ಮಾಡಿದ್ದು ರೀಲ್ಸ್‌’. ಯಾರು ಬೇಕಾದರೂ ಸುಲಭವಾಗಿ ವೀಡಿಯೋ ಮಾಡಿ ಹರಿಯಬಿಡಬಹುದಾದ “ಸಿನಿಮಾ’ಗಳಂತಹ ಮ್ಯಾಜಿಕ್‌ ಸಾಧ್ಯವಿರುವಂತೆ ಮಾಡುವ ಉದ್ದೇಶ ಇದರ ಹಿಂದಿತ್ತು. ಈಗ ಏನಾಗಿದೆ ಅಂದರೆ- ಪತ್ರಿಕೆಗಳು, ಟಿ.ವಿ., ರೇಡಿಯೋ, ಅಂತರ್ಜಾಲ ಎಲ್ಲವನ್ನೂ “ರೀಲ್ಸ್‌’ ಹಿಂದಿಕ್ಕಿದೆ. ಜನರನ್ನು ತಲುಪಲು ಇರುವ ಸುಲಭ‌ ಮಾರ್ಗ ಅನ್ನಿಸಿಕೊಂಡಿದೆ. ಬಿಹಾರದ‌ಲ್ಲಿ ಒಬ್ಬ, ತನ್ನ ಮದುವೆಯ ಪ್ರತಿ ಹಂತದ “ರೀಲ್ಸ್‌’ ಮಾಡಿ, ಅದರೊಂದಿಗೆ ವಿವಿಧ ಟ್ಯೂನ್‌ಗಳಿಗೆ ಹಾಡುತ್ತಾ, “ಲಿಪ್‌ ಸಿಂಕ್‌’ ಮಾಡುತ್ತಾ ಅದನ್ನು “ವೈರಲ್‌’ ಮಾಡಿದ್ದಾನೆ. ಹುಡುಕುತ್ತಾ ಹೋದರೆ ಇಂತಹ ಸುದ್ದಿಗಳು ನಮ್ಮ ಸುತ್ತಮುತ್ತಲಲ್ಲೆ ಸಿಕ್ಕುತ್ತವೆ.

ನೆನಪಿನ ಶಕ್ತಿ ಕುಂದುತ್ತದೆ!:

Advertisement

ಈಗ ರೀಲುಗಳಲ್ಲಿ ನಾವು ಸುತ್ತುವುದರ ಬಗ್ಗೆ ನೋಡೋಣ. ಒಂದು ಸಂಜೆ, ಕೆಲಸದಿಂದ/ ಓದಿನಿಂದ ಸಣ್ಣ “ಬ್ರೇಕ್‌’ ತೆಗೆದುಕೊಳ್ಳೋಣ ಎಂದು ಮೊಬೈಲ್‌ ಕೈಗೆತ್ತಿಕೊಂಡಿದ್ದೀರಿ. ಹಾಗೇ ಬೆರಳಾಡಿಸುತ್ತಾ ರೀಲ್ಸ್‌ ನೋಡತೊಡಗುತ್ತೀರಿ. ಮನರಂಜಿಸುವಂತಹ, ತಮಾಷೆಯ ಹಲವನ್ನು ನೋಡುತ್ತೀರಿ. ಅವು ಹೇಗಿದ್ದರೂ 15 ಸೆಕೆಂಡಿನವು ಅಷ್ಟೆ ಎಂಬ ನಂಬಿಕೆ ನಿಮ್ಮದು. ಆದರೂ ಮೊಬೈಲ್‌ ಕೆಳಗಿಟ್ಟು ಸಮಯ ನೋಡಿದರೆ ಬರೋಬ್ಬರಿ ಒಂದು ಗಂಟೆ ಕಳೆದಿದೆ! “ಬ್ರೇಕ್‌’ ಎನ್ನುವುದೇ ಕೆಲಸದ ಸ್ಥಾನ ಪಡೆದುಕೊಂಡಿದೆಯೇನೋ ಎಂಬಂತಹ ಭಾವ! “ಏ ಇದನ್ನೇನು ಅಷ್ಟು ಉತ್ಪ್ರೇಕ್ಷೆ ಮಾಡ್ತೀರ?’ ಎಂದು ತಳ್ಳಿಹಾಕುವ ಮೊದಲು, ಈ ಪ್ರಶ್ನೆಗೆ ಉತ್ತರಿಸಿ: ಒಂದು ಗಂಟೆ ಅವಧಿಯಲ್ಲಿ ಸುಮಾರು 200 ರೀಲ್ಸ್‌ ನೋಡಿದಿರಿ ತಾನೆ, ಅದರಲ್ಲಿ 5ನೇ ರೀಲ್‌ ಯಾವುದರ ಬಗೆಗಿತ್ತು ಅಂತ ನಿಮಗೆ ನೆನಪಿರಬಹುದೆ? ಬಹು ಜನರ ಉತ್ತರ “ಇಲ್ಲ’. ಇಂತಹ ಏಕಾಗ್ರತೆಯ ಇಳಿಕೆ, ತತ್ಪರಿಣಾಮವಾಗಿ ನೆನಪಿನ ಶಕ್ತಿಯ ಕುಂದುವಿಕೆ ತನ್ನ “ಮ್ಯಾಜಿಕ್‌’ನ ಜೊತೆಗೆ “ರೀಲ್ಸ್‌’ ನಮಗೆ ಕರುಣಿಸಿರುವ ಕೊಡುಗೆ!

ವ್ಯಸನದ ಪ್ರಾಥಮಿಕ ಹಂತ…

“15 ಸೆಕೆಂಡು’, “60 ಸೆಕೆಂಡು’, “90 ಸೆಕೆಂಡು’ ಎನ್ನುವ ಪದಗಳೇ ನಮ್ಮನ್ನು “ರೀಲ್ಸ್‌’ ಒಳಗೆ ಎಳೆದುಕೊಳ್ಳುವ, ಮತ್ತೆ ಮತ್ತೆ ಸುತ್ತಿಸುವ ಪ್ರಬಲ ಅಂಶಗಳು. ಏಕೆಂದರೆ ತಮ್ಮ ಸುತ್ತಮುತ್ತ ರೀಲ್ಸ್‌ ಗಳಿಂದ ಭದ್ರವಾಗಿ ಸುತ್ತಿಕೊಂಡು, ಮೊಬೈಲ್‌ನಲ್ಲಿ ಮುಳುಗಿರುವ, ಆಗಾಗ್ಗೆ ತಮ್ಮದೇ ರೀಲ್ಸ್‌ ಮಾಡಲು ಮಾತ್ರ ಏಳುವ ಯುವಜನತೆಯನ್ನು ಕೇಳಿದರೆ ಅವರ ಮೊದಲ ಉತ್ತರ: “ಒಂದ್‌ 15 ಸೆಕೆಂಡು ತಾನೇ? ಒಂದು ರೀಲ್‌ ಮಾಡಿಬಿಡೋಣ, ಒಂದು ರೀಲ್‌ ನೋಡಿಬಿಡೋಣ’. ಅವರ ಮಾತಿನ ಹಿಂದೆ ಅದು ನಿರಾಪಾಯಕಾರಿಯಾದ, ಅತಿ ಶೀಘ್ರವಾಗಿ ಮುಗಿಯುವ ಚಿತ್ರ ವೀಕ್ಷಣೆ ಎಂಬ ಭಾವವೇ ಕಾಣುತ್ತದೆ.

ಇಂತಹದ್ದೇ ವಿವರಣೆಯನ್ನು ನಾವು ಬಹುಬಾರಿ ಕೇಳುವುದು ಎಲ್ಲಿ? “ಒಂದು ಪೆಗ್‌ ತೆಗೆದುಕೊಂಡ್ರೆ ಏನಾಗುತ್ತೆ? ಬಾ ಟ್ರೈ ಮಾಡೋಣ, ಮಜಾ ಸಿಗುತ್ತೆ’; “ಹತ್ತು ರೂಪಾಯಿ ಲಾಟರಿ ಟಿಕೆಟ್‌ ತಗೊಂಡ್ರೆ ಅದೇನು ವ್ಯಸನವಾದೀತೆ?’; “ಒಂದು ಸಿಗರೇಟು ಸೇದಿದ್ರೆ ಏನು ಕ್ಯಾನ್ಸರ್‌ ಬರುತ್ಯೆ?’- ಇವೆಲ್ಲವೂ ವ್ಯಸನ ಆರಂಭವಾಗುವ ಪ್ರಾಥಮಿಕ ಹಂತದ ನಿದರ್ಶನಗಳು. ಇದಕ್ಕೆ ಈಗ ಹೊಸ ಸೇರ್ಪಡೆ “ರೀಲ್ಸ್‌ ವ್ಯಸನ’.

ಮೈಮರೆಸುತ್ತದೆ…

ಅಲ್ಪಾವಧಿಯ “ರೀಲ್ಸ್‌’ ನೋಡುವುದರಿಂದ ಅದರ ವ್ಯಸನಕ್ಕೆ ಗುರಿಯಾಗುವುದು ಸಾಧ್ಯವೇ ಇಲ್ಲ ಎಂದು ಹಲವರು ಹೇಳುತ್ತಾರೆ. ಆದರೆ, “15 ಸೆಕೆಂಡು’ ಎಂಬ ಪದವನ್ನು ನಂಬಿ, ನೀವು ಒಳಕ್ಕಿಳಿದರೆ “ರೀಲು’ ಬೆಳೆಯುತ್ತಾ, ಬೆಳೆಯುತ್ತಾ “ರಿಯಲ್ಲಾ’ದ ವ್ಯಸನವಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ಇದಕ್ಕೆ ವೈಜ್ಞಾನಿಕ ಆಧಾರವಿದೆ. ಮಿದುಳಿನಲ್ಲಿ ಇರುವ “ಡೋಪಮೀನ್‌ ರಿವಾಡ್‌ ಸಿಸ್ಟಮ್‌’ ಎಂಬ ವ್ಯೂಹ ಆನಂದದ ಭಾವನೆಯನ್ನು ಪ್ರಚೋದಿಸುವಂತಹದ್ದು. ಮದ್ಯ-ಸಿಗರೇಟು-ಜೂಜಿಗಾದರೂ ಬೇರೆಡೆ ಹೋಗಬೇಕು, ದುಡ್ಡು ಖರ್ಚು ಮಾಡಬೇಕು. “ರೀಲ್ಸ್‌’ ನಲ್ಲಿ ಯಾವುದೂ ಇಲ್ಲದಿದ್ದರೂ ಪರವಾಗಿಲ್ಲ. ದಾಸ್ತಾನು ಖರ್ಚಾಗುವುದೇ ಇಲ್ಲ! ಇದು ಪರದೆಯಿಂದ ಕಣ್ಣು ತೆಗೆಯುವುದನ್ನು ಅಸಾಧ್ಯ ಮಾಡಿಬಿಡುತ್ತದೆ. ಕೈಯಿಂದ ಜಾರಿ ಹೋಗುವುದು ಕೇವಲ ಸಮಯವಲ್ಲ, ಮಿದುಳು ಕ್ರಿಯಾಶೀಲವಾಗಿ ತಾನೇ ಏನನ್ನೋ ಮಾಡಬಹುದಾಗಿದ್ದ ಸಾಮರ್ಥ್ಯವು ಕ್ರಮೇಣ ಇಳಿಮುಖ ಆಗುತ್ತದೆ. ಕೈಬೆರಳು ಪರದೆಯ ಮೇಲೆ ಮಾಡುವ ಪ್ರತಿ “ಸ್ವೈ ಪ್‌’- ತೆರೆ ಸರಿಸುವಿಕೆ “ಡೋಪ ಮೀನ್‌ ಸ್ರವಿಸುವಿಕೆ’ಯನ್ನು ಮಿದುಳಿನಲ್ಲಿ ಪ್ರಚೋದಿಸಿ, ಆನಂದದ ಅಲೆ ಬರಿಸಿ, ಮುಂದುವರಿಸುವಂತೆ ನೋಡಿಕೊಳ್ಳುತ್ತದೆ. ವ್ಯಸನದ ಮಾರ್ಗವಾಗುತ್ತದೆ.

ಇವಿಷ್ಟೇ ಅಲ್ಲದೆ, ಸಾಮಾಜಿಕ ಮಾಧ್ಯಮಗಳಿಂದ ಈಗಾಗಲೇ ನಿರೂಪಿಸಲ್ಪಟ್ಟ ಮಾನಸಿಕ ಸಮಸ್ಯೆಗಳು-ಯುವ ಜನರಲ್ಲಿ ಸಂಬಂಧಗಳ ಸಮಸ್ಯೆಗಳು, ಆದರ್ಶ ದೇಹದ ಪರಿಕಲ್ಪನೆ, ಸೌಂದರ್ಯದ ಬಗ್ಗೆ ಅತಿ ಕಾಳಜಿ…ಇವೆಲ್ಲವೂ “ರೀಲ್ಸ್‌’ ನಿಂದ ಮತ್ತಷ್ಟು ಉಲ್ಬಣಗೊಂಡಿವೆ.

ತಡೆಯುವುದು ಹೇಗೆ? :

ಮನಸ್ಸನ್ನು ಗಟ್ಟಿಮಾಡಿಕೊಂಡು ರೀಲ್ಸ್‌ ನೋಡುವುದನ್ನು ಕಡಿಮೆ ಮಾಡಿ. ಆ ಸಮಯವನ್ನು ಓದು, ಕ್ರೀಡೆ, ಧ್ಯಾನದಂಥ ಕೆಲಸಗಳಿಗೆ ಬಳಸಿ. ಮನರಂಜನೆ/ಸುದ್ದಿಯ ರೀಲ್‌ಗ‌ಳನ್ನು ಆದಷ್ಟು ದೊಡ್ಡ ಪರದೆಯ ಮೇಲೆ, ಮತ್ತೂಬ್ಬರೊಂದಿಗೆ ನೋಡುವ ಪ್ರಯತ್ನ ಮಾಡಿ. ಕ್ರಿಯಾಶೀಲತೆ ಮನುಷ್ಯನ ದೊಡ್ಡ ಸಾಮರ್ಥ್ಯ ಎಂದು ನೆನಪಿಡಿ. ಆಟವಾಡುವುದು, ಮತ್ತೂಬ್ಬರೊಡನೆ ಮಾತನಾಡುವುದು, ಒಳ್ಳೆಯ ರುಚಿಯಾದ ಆಹಾರ, ಸಂಗೀತ-ನೃತ್ಯ-ನಾಟಕ ಇವೆಲ್ಲವೂ “ಆನಂದ’ ವನ್ನು ಆರೋಗ್ಯಕರವಾಗಿ ತರುತ್ತವೆ. ಅವುಗಳನ್ನು ನೋಡಿ, ಮಾಡಿ! ರೀಲುಗಳಲ್ಲಿ ಸುತ್ತಿ ಸುತ್ತಿ ಮಂಕಾಗಬೇಡಿ, ಮರುಳಾಗಬೇಡಿ!

-ಡಾ. ಕೆ.ಎಸ್‌. ಪವಿತ್ರ, ಮನೋವೈದ್ಯರು

Advertisement

Udayavani is now on Telegram. Click here to join our channel and stay updated with the latest news.