Advertisement
ಬ್ಯಾಂಕ್‌ಗಳ ಉಳಿತಾಯ ಖಾತೆಯಲ್ಲಿನ ಬ್ಯಾಲೆನ್ಸ್ ಮೇಲಿನ ಬಡ್ಡಿದರವನ್ನು ಇಳಿಸಲು ಬ್ಯಾಂಕುಗಳು ಚಿಂತಿಸುತ್ತಿವೆ ಎನ್ನುವ ವದಂತಿಗಳು ಕೆಲವು ತಿಂಗಳುಗಳಿಂದ ಕೇಳಿಬರುತ್ತಿದ್ದವು. ಅದೀಗ ದೃಢಪಟ್ಟಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮೇ 1, 2019ರಿಂದ, ತನ್ನ ಗ್ರಾಹಕರ ಉಳಿತಾಯ ಖಾತೆಯಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಬ್ಯಾಲೆನ್ಸ್ ಗೆ 0 .25% ಬಡ್ಡಿದರ ಕಡಿತ ಮಾಡುತ್ತಿದೆ. ಅದರಂತೆ, ಗ್ರಾಹಕರು ಉಳಿತಾಯ ಖಾತೆಯಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಬ್ಯಾಲೆನ್ಸ್ ಇಟ್ಟರೆ 3.50% ಬದಲು 3.25% ಬಡ್ಡಿ ಪಡೆಯುತ್ತಾರೆ. ಒಂದು ಲಕ್ಷಕ್ಕಿಂತ ಕಡಿಮೆ ಬ್ಯಾಲೆನ್ಸ್ಇಟ್ಟರೆ, 3.50% ಬಡ್ಡಿ ಪಡೆಯತ್ತಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮುಂದಿನ ದಿನಗಳಲ್ಲಿ ತನ್ನ ಉಳಿತಾಯ ಖಾತೆಯ ಮೇಲಿನ ಬಡ್ಡಿದರವನ್ನು ರಿಸರ್ವ್ ಬ್ಯಾಂಕ್‌ನ ರೆಪೋ ದರಕ್ಕೆ ಜೋಡಿಸುವ ಸುಳಿವು ನೀಡಿದೆ. ಸದ್ಯ ರೆಪೋ ದರ 6% ಇದ್ದು, ಉಳಿತಾಯ ಖಾತೆಯ ಮೇಲಿನ ಬಡ್ಡಿದರವನ್ನು ರೆಪೋ ದರಕ್ಕಿಂತ 2.75% ಕಡಿಮೆ ಮಾಡಿ, ಉಳಿತಾಯ ಖಾತೆಯ ಮೇಲಿನ ಬಡ್ಡಿದರವನ್ನು 3.25% ಗೆ ನಿಗದಿ ಪಡಿಸಿದೆ. ಮುಂದಿನ ದಿನಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಬದಲಿಸಿದಂತೆ, ಬ್ಯಾಂಕುಗಳು ಒಂದು ಲಕ್ಷಕ್ಕಿಂತ ಹೆಚ್ಚು ಬ್ಯಾಲೆನ್ಸ್ ಇರುವ ಉಳಿತಾಯ ಖಾತೆಯ ಮೇಲಿನ ಬಡ್ಡಿದರವನ್ನು ಬದಲಿಸಬಹುದು. ರೆಪೋ ದರವನ್ನು ಇಳಿಸಲು, ತನ್ಮೂಲಕ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರ ಇಳಿಸಲು , ಬ್ಯಾಂಕುಗಳ ಮೇಲೆ ಮತ್ತು ಸರ್ಕಾರದ ಮೇಲೆ ಸದಾ ಒತ್ತಡವಿರುತ್ತದೆ. ಮುಂದಿನ ದಿನಗಳಲ್ಲಿ ರೆಪೋ ದರ ಇಳಿದು ಉಳಿತಾಯ ಖಾತೆಯ ಮೇಲಿನ ಬಡ್ಡಿದರ ಇನ್ನೂ ಇಳಿದರೆ ಎನ್ನುವ ಭಯ ಜನತೆಯನ್ನು ಕಾಡುತ್ತಿದೆ. ಏರುತ್ತಿರುವ ನಿರ್ವಹಣಾ ವೆಚ್ಚ ಮತ್ತು ವಸೂಲಾಗದ ಸುಸ್ತಿ ಸಾಲ, ಬ್ಯಾಂಕಿಂಗ್ ಉದ್ಯಮವನ್ನು ಕಂಗೆಡಿಸಿದೆ. ಅದು ತನ್ನ ಠೇವಣಿ ಮೇಲಿನ ವೆಚ್ಚವನ್ನು (cost of funds) ಕಡಿಮೆ ಮಾಡುವ ಅನಿವಾರ್ಯತೆ ಎದುರಿಸುತ್ತಿದೆ. ಜನತೆಯಲ್ಲಿ ಉಳಿತಾಯದ ಪ್ರವೃತ್ತಿಯನ್ನು ಹೆಚ್ಚಿಸಲು ಬ್ಯಾಂಕ್ ಠೇವಣಿ ಮೇಲಿನ ಬಡ್ಡಿದರವನ್ನು ಏರಿಸಬೇಕು ಮತ್ತು ಠೇವಣಿಯನ್ನು ಆಕರ್ಷಕ ಮಾಡಬೇಕು ಎನ್ನುವ ನಿರಂತರ ಒತ್ತಾಸೆಯ ಹೊರತಾಗಿಯೂ, ಬ್ಯಾಂಕುಗಳು ಬಡ್ಡಿದರ ಇಳಿಸುವುದನ್ನು ನೋಡಿದರೆ, ಬ್ಯಾಂಕುಗಳು cost of funds ನಿಟ್ಟಿನಲ್ಲಿ ಸಂಕಷ್ಟದಲ್ಲಿ ಇವೆ ಎನ್ನಬಹುದು. ರೆಪೋ ದರ ಇಳಿದು, ಸಾಲದ ಮೇಲಿನ ಬಡ್ಡಿದರದಲ್ಲಿ ಕಡಿತ ಮಾಡುವಾಗ ಸ್ಥಿರ ಠೇವಣಿ ಮೇಲಿನ ಬಡ್ಡಿದರವನ್ನು ಸಾಮಾನ್ಯವಾಗಿ ಕಡಿತ ಮಾಡಿಯೇ, ರೆಪೋ ದರ ಇಳಿತದ ಲಾಭವನ್ನು, ಗ್ರಾಹಕರಿಗೆ ವರ್ಗಾಯಿಸುತ್ತವೆ. ಆದರೆ, ಸಾಮಾನ್ಯವಾಗಿ ಬ್ಯಾಂಕುಗಳು ಉಳಿತಾಯ ಖಾತೆಯ ಮೇಲಿನ ಬಡ್ಡಿದರವನ್ನು ಮುಟ್ಟುವುದಿಲ್ಲ. ಇದು ಸ್ಥಿರ ಠೇವಣಿ ಮೇಲಿನ ಬಡ್ಡಿದರದಂತೆ ನಿರಂತರವಾಗಿ ಬದಲಾಗುವುದಿಲ್ಲ.
Related Articles
Advertisement
ಇದರ ಪರಿಣಾಮ ಏನಾಗಬಹುದು?ಹೆಚ್ಚಿನ ಬಡ್ಡಿಗಾಗಿ ಹಲವರು, ಸ್ವಲ್ಪ ಕಷ್ಟವಾದರೂ ತಮ್ಮ ಠೇವಣಿಯನ್ನು ಸ್ಥಿರ ಠೇವಣಿಗೆ ಬದಲಿಸಿ ಹೆಚ್ಚಿನ ಬಡ್ಡಿದರದ ಉಪಯೋಗ ಪಡೆಯಬಹುದು. ಉಳಿತಾಯ ಖಾತೆಯಲ್ಲಿ 4% ಬಡ್ಡಿ ಪಡೆಯುವುದಕ್ಕಿಂತ,ಠೇವಣಿಯನ್ನು 6 ತಿಂಗಳಿಗೆ ಹೆಚ್ಚಿಸಿ 6%ವರೆಗೆ ಬಡ್ಡಿ ಪಡೆಯುವ ಯತ್ನ ಮಾಡಬಹುದು. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ಲಕ್ಷಕ್ಕಿಂತ ಹೆಚ್ಚು ಠೇವಣಿ ಇಡುವ ಆರ್ಥಿಕ ಸಾಮರ್ಥ್ಯ ಇರುವ ಗ್ರಾಹಕ ಉಳಿತಾಯ ಖಾತೆಯಲ್ಲಿಡದೇ, ಸ್ಥಿರ ಠೇವಣಿಯಲ್ಲಿಟ್ಟು ಹೆಚ್ಚಿಗೆ ಬಡ್ಡಿ ಗಳಿಸುತ್ತಾನೆ. ಬ್ಯಾಂಕುಗಳ ಈ ಕ್ರಮದಿಂದ ಬ್ಯಾಂಕುಗಳಲ್ಲಿ ಉಳಿತಾಯ ಖಾತೆ portfolioದಲ್ಲಿ ಗಣನೀಯ ಕಡಿತವಾಗಬಹುದು ಮತ್ತು ಸ್ಥಿರ ಠೇವಣಿ ವಿಭಾಗದಲ್ಲಿ ಹೆಚ್ಚಳ ಕಾಣಬಹುದು. ಇದು ಪರೋಕ್ಷವಾಗಿ ಬ್ಯಾಂಕುಗಳ CASA ಠೇವಣಿ ಮೇಲೆ ಪರಿಣಾಮ ಬೀರಬಹುದು. ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಬಡ್ಡಿದರದಲ್ಲಿ ಗರಿಷ್ಠ ಮತ್ತು ಕನಿಷ್ಠ ಠೇವಣಿ ಎನ್ನುವ ಯಾವುದೇ ಬದಲಾವಣೆ ಇಲ್ಲದಿರುವುದರಿಂದ, ಹೆಚ್ಚಿನ ಬಡ್ಡಿಗಾಗಿ ಹಲವರು ಅಂಚೆ ಕಚೇರಿಯತ್ತ ತಿರುಗುವುದನ್ನು ಅಲ್ಲಗೆಳೆಯಲಾಗದು. ನಾಲ್ಕು ಕಾಸು ಹೆಚ್ಚು ದೊರಕುತ್ತದೆ ಎಂದರೆ, ಅತ್ತ ಕಡೆ ಮುಖ ಮಾಡುವುದು ತೀರಾ ಸಾಮಾನ್ಯ. ಹಾಗೆಯೇ, ಖಾಸಗಿ ಹಣಕಾಸು ಸಂಸ್ಥೆಗಳು ಈ ಬೆಳವಣಿಗೆಯನ್ನು ಉಪಯೋಗ ಮಾಡಿಕೊಳ್ಳುವುದನ್ನು ತಡೆಯಲಾಗದು. ಮದ್ಯಮವರ್ಗಕ್ಕೆ ಆಘಾತ
ಬ್ಯಾಂಕುಗಳಲ್ಲಿ ಇರುವ ಒಟ್ಟು ಠೇವಣಿಯಲ್ಲಿ ಶೇ.32.10ರಷ್ಟು ಹಣ ಉಳಿತಾಯ ಖಾತೆಯಿಂದ ಬರುತ್ತದೆ ಮತ್ತು ಅರ್ಧದಷ್ಟು ಠೇವಣಿ ವೈಯಕ್ತಿಕ ಹೆಸರಿನಲ್ಲಿ ಇರುತ್ತದೆ. ಸ್ಥಿರ ಠೇವಣಿ ಖಾತೆಗಳಿಗಿಂತ ಉಳಿತಾಯ ಖಾತೆಯಲ್ಲಿಯೇ ಹಣದ ಹರಿವು ಹೆಚ್ಚು ಇರುತ್ತದೆ ಮತ್ತು householdಗಳ ಠೇವಣಿ ಸುಮಾರು 60%ಇರುತ್ತದೆ. ಉಳಿತಾಯ ಖಾತೆಯ ಮೇಲಿನ ಬಡ್ಡಿದರವನ್ನು ಇಳಿಸುವುದರಿಂದ ಆರ್ಥಿಕವಾಗಿ ಬಳಲುವವರು ಬಡ ಮತ್ತು ಮದ್ಯಮ ವರ್ಗದವರು. ಬಡ್ಡಿದರ ಇಳಿತ ಕೇವಲ 0.25% ಎಂದು ಸರ್ಕಾರ ಮತ್ತು ಬ್ಯಾಂಕುಗಳು ಸಮಜಾಯಿಷಿ ಕೊಡಬಹುದು. ಹಣದುಬ್ಬರದ ಕಾಲದಲ್ಲಿ, ಅದೇ ಅನುಪಾತದಲ್ಲಿ ಆದಾಯ ಏರದಿರುವಾಗ, ಯಾವ ಮೊತ್ತವೂ ಸಣ್ಣದಲ್ಲ ಮತ್ತು ನಿರ್ಲಕ್ಷಿಸುವಂತಿಲ್ಲ. ಕಳೆದ ಬಜೆಟ್‌ನಲ್ಲಿ ಠೇವಣಿ ಮೇಲಿನ ಬಡ್ಡಿಗೆ ವಿಧಿಸುವ ತೆರಿಗೆ (TDS) ವಿನಾಯಿತಿಯನ್ನು 10,000ದಿಂದ 40,000ಕ್ಕೆ ಏರಿಸಲಾಗಿತ್ತು. ಆಗ, ಬಡವರು, ಮಧ್ಯಮ ವರ್ಗದವರು ಮತ್ತು ಬಡ್ಡಿ ಆದಾಯದ ಮೇಲೇ ಜೀವನದ ಬಂಡಿ ನಡೆಸುವ ಪಿಂಚಣಿದಾರರು ಸ್ವಲ್ಪ ನಿಟ್ಟುಸಿರುಬಿಟ್ಟಿದ್ದರು. ಆದರೆ, ಈ ವಿನಾಯಿತಿಯನ್ನು, ಬಲಗೈಯಲ್ಲಿ ನೀಡಿ ಎಡಗೈಯಲ್ಲಿ ವಾಪಸ್ಸು ಪಡೆಯುವಂತೆ ಈ ರೀತಿ ಕಿತ್ತುಕೊಳ್ಳಬಹುದು ಎಂದು ಯಾರೂ ನಿರೀಕ್ಷಿಸಿರಲಿಲ್ಲ. -ರಮಾನಂದ ಶರ್ಮಾ