ಕಲಬುರಗಿ: ಸಾಕಷ್ಟು ಸಂಶೋಧನೆ ನಡೆಸಿ ಕೋವಿಡ್ ಲಸಿಕೆ ಬಂದಿದ್ದರಿಂದ ಲಸಿಕೆ ಪಡೆದಲ್ಲಿ ಕೊರೊನಾ ನಿಯಂತ್ರಿಸಬಹುದು. ಆದ್ದರಿಂದ ವಿದ್ಯಾರ್ಥಿಗಳು ಆಸಕ್ತಿಯಿಂದ ಲಸಿಕೆ ಪಡೆಯಬೇಕೆಂದು ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಐಟಿಐ ಕಾಲೇಜಿನ ಕಿರಿಯ ತರಬೇತಿ ಅಧಿಕಾರಿ ಸಿದ್ಧರಾಮೇಶ್ವರ (ಸಿದ್ಧು) ಬಳಬಟ್ಟಿ ಹೇಳಿದರು.
ಐಟಿಐ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆಗೆ ಚಾಲನೆ ನೀಡಿ ಮಾತನಾಡಿದ ಅವರು, ಯುವಕರು ತಾವೆಲ್ಲ ಸದೃಢ, ಲಸಿಕೆ ಹಾಕಿಕೊಳ್ಳದಿದ್ದರೂ ಏನೂ ಆಗುವುದಿಲ್ಲ ಎಂಬ ಭಾವನೆ ತೆಗೆದು ಹಾಕಬೇಕು. ಈಗಿನ ಬದಲಾದ ಜೀವನಶೈಲಿಯಿಂದ ಯುವಕರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಇದಕ್ಕೆಲ್ಲ ಲಸಿಕೆಯೇ ರಾಮಬಾಣವಾಗಿದೆ ಎಂದರು.
ಕೋವಿಡ್ ಮೂರನೇ ಅಲೆ ವ್ಯಾಪಿಸುತ್ತಿದೆ. ಇದರ ಲಕ್ಷಣ ನೋಡಿದರೆ ಹೆಚ್ಚಿನ ಅಪಾಯ ಇಲ್ಲ ಎಂಬುದು ಕಂಡು ಬರುತ್ತಿದೆಯಾದರೂ ಮುಂಜಾಗ್ರತೆ ವಹಿಸುವುದು, ಮಾಸ್ಕ್ ಹಾಕಿಕೊಳ್ಳುವುದು, ಸಾಮಾಜಿಕ ಅಂತರ ಕಾಪಾಡುವುದು ಹೆಚ್ಚು ಸೂಕ್ತವಾಗಿದೆ ಎಂದು ಹೇಳಿದರು.
ಕಾಲೇಜಿನ ವಿದ್ಯಾರ್ಥಿಗಳಿಗೆಲ್ಲ ಕೋವಿಡ್ ಲಸಿಕೆ ಹಾಕಿಸಲಾಯಿತು. ಕಾಲೇಜಿನ ಪ್ರಾಚಾರ್ಯರಾದ ನಾಗವೇಣಿ ಸಿಕೆ, ಕಿರಿಯ ತರಬೇತಿ ಅಧಿಕಾರಿಗಳಾದ ಸೋಮಶೇಖರ ಪಾಟೀಲ, ಗುರುಶಾಂತ ಪಾಟೀಲ, ಜಯಶ್ರೀ ಚಕ್ಕಿ, ಸಾವಿತ್ರಿ ಪಾಟೀಲ, ತರಬೇತಿ ಅಧಿಕಾರಿ ವಿಜಯಕುಮಾರ ಆಲೂರ ಮುಂತಾದವರಿದ್ದರು.