ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಕೊಯ್ನಾ, ಮಹಾಬಳೇಶ್ವರ, ನವಜಾ ಮತ್ತು ರಾಧಾನಗರಿ ಪ್ರದೇಶದಲ್ಲಿ ಶನಿವಾರ ಕೊಂಚ ಮಳೆ ಪ್ರಮಾಣ ತಗ್ಗಿದೆ. ಆದರೂ ಗಡಿ ಭಾಗದ ಕೃಷ್ಣಾ ಮತ್ತು ಉಪನದಿಗಳ ನೀರಿನ ಮಟ್ಟ ಒಂದು ಅಡಿಯಷ್ಟು ಏರಿಕೆ ಕಂಡಿದೆ.
ಕಳೆದ ಹದಿನೈದು ದಿನಗಳಿಂದ ಕೊಂಕಣ ಭಾಗದಲ್ಲಿ ಸತತ ಮಳೆ ಸುರಿಯುತ್ತಿರುವುದರಿಂದ ಚಿಕ್ಕೋಡಿ ತಾಲೂಕಿನ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳ ನೀರಿನ ಮಟ್ಟದಲ್ಲಿ ಭಾರಿ ಏರಿಕೆಯಾಗಿ ಅಪಾಯ ಮಟ್ಟ ಮೀರಿ ಹರಿಯುತ್ತಿವೆ.
ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ದಿಂದ ರಾಜ್ಯಕ್ಕೆ 78,629 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ದೂಧಗಂಗಾ ಮತ್ತು ವೇದಗಂಗಾ ನದಿಯಿಂದ 25,168 ಕ್ಯೂಸೆಕ್ ನೀರು ಹರಿದು ಕೃಷ್ಣಾ ನದಿಗೆ ಬರುತ್ತಿದ್ದು, ಇದರಿಂದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ ಒಟ್ಟು 1,03,797 ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದೆ. ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯದಿಂದ 93,500 ಕ್ಯೂಸೆಕ್ ನೀರನ್ನು ಆಲಮಟ್ಟಿ ಜಲಾಶಯಕ್ಕೆ ಹರಿ ಬಿಡಲಾಗುತ್ತಿದೆ. ಮಹಾರಾಷ್ಟ್ರದಿಂದ ಬರುವ ನೀರಿನ ಪ್ರಮಾಣದಷ್ಟೇ ಹಿಪ್ಪರಗಿ ಬ್ಯಾರೇಜ್ ಮೂಲಕ ಆಲಮಟ್ಟಿ ಅಣೆಕಟ್ಟಿಗೆ ಹರಿಬಿಡುವುದರಿಂದ ಚಿಕ್ಕೋಡಿ ಉಪವಿಭಾಗದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಕಡಿಮೆ ಇದೆ ಎನ್ನುತ್ತಾರೆ ತಹಶೀಲ್ದಾರ್ ಡಾ.ಸಂತೋಷ ಬಿರಾದಾರ.
ಕಳೆದ 2005 ಮತ್ತು 06ರಲ್ಲಿ ಕೃಷ್ಣಾ ಮತ್ತು ಉಪನದಿಗಳಿಗೆ ಉಂಟಾದ ಭಾರಿ ಪ್ರಮಾಣದ ಪ್ರವಾಹ ಈಗ ಉಂಟಾಗುವುದಿಲ್ಲ. ಜಮಖಂಡಿ ತಾಲೂಕಿನಲ್ಲಿರುವ ಹಿಪ್ಪರಗಿ ಬ್ಯಾರೇಜ್ ಗೇಟ್ ಹಾಕಿರುವ ಪರಿಣಾಮ ಪ್ರವಾಹ ಉಂಟಾಗಿತ್ತು. ಈಗ ಮಹಾರಾಷ್ಟ್ರದಿಂದ ಬರುವ ನೀರಿನ ಪ್ರಮಾಣ ನೋಡಿಕೊಂಡು ಆಲಮಟ್ಟಿಗೆ ನೀರು ಹರಿಬಿಡುವುದರಿಂದ ಪ್ರವಾಹ ಸಂಭವಿಸುವುದಿಲ್ಲ. ಒಂದು ವೇಳೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹರಿದು ನದಿಗೆ ಬಂದರೆ ಮಾತ್ರ ಉಪವಿಭಾಗದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ಅಧಿಕಾರಿಗಳು.
ಜಮೀನುಗಳಿಗೆ ನುಗ್ಗಿದ ನೀರು: ಪ್ರತಿ ವರ್ಷ ಮಳೆಗಾಲದಲ್ಲಿ ಚಿಕ್ಕೋಡಿ ಉಪವಿಭಾಗದ ನದಿಗಳು ಉಕ್ಕಿ ಹರಿಯುತ್ತವೆ. ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಅತಿಯಾದ ಮಳೆ ಸುರಿಯುವುದರಿಂದ ನದಿಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಾಣುತ್ತದೆ. ಇದರಿಂದ ನದಿಗಳು ಅಪಾಯದ ಮಟ್ಟ ಮೀರಿ ಹರಿದು ರೈತರ ಜಮೀನುಗಳಿಗೆ ನೀರು ನುಗ್ಗುವುದರಿಂದ ರೈತರ ಕಬ್ಬು, ಸೋಯಾ, ಶೇಂಗಾ ಬೆಳೆಗಳು ಜಲಾವೃತವಾಗುತ್ತವೆ.
ಮತ್ತೆರಡು ಸೇತುವೆ ಮುಳುಗುವ ಸಾಧ್ಯತೆ: ಈಗಾಗಲೇ ಕಲ್ಲೋಳ-ಯಡೂರ ಸೇತುವೆ, ಮಲಿಕವಾಡ-ದತ್ತವಾಡ, ಕಾರದಗಾ-ಭೋಜ, ಬೋಜವಾಡಿ-ಕುನ್ನೂರ, ಸಿದ್ನಾಳ-ಅಕ್ಕೋಳ, ಜತ್ರಾಟ-ಭಿವಸಿ ಸೇರಿ ಆರು ಸೇತುವೆಗಳು ಜಲಾವೃತಗೊಂಡಿವೆ. ಸದಲಗಾ-ಬೋರಗಾಂವ ಸೇತುವೆ ಜಲಾವೃತವಾಗಲು ಎರಡು ಅಡಿ ಮಾತ್ರ ಬಾಕಿ ಉಳಿದುಕೊಂಡಿದೆ. ಯಕ್ಸಂಬಾ-ದಾನವಾಡ ಸೇತುವೆ ಮುಳುಗಡೆಯಾಗಲು ಮೂರು ಅಡಿ ಮಾತ್ರ ಬಾಕಿ ಇದೆ.
ಸೇತುವೆಗಳ ನೀರಿನ ಮಟ್ಟ: ಕೃಷ್ಣಾ ನದಿಯ ಅಂಕಲಿ-ಮಾಂಜರಿ ಸೇತುವೆ ಅಪಾಯ ಮಟ್ಟ 537 ಮೀಟರ್, ಇಂದಿನ ನೀರಿನ ಮಟ್ಟ 531.41 ಮೀಟರ್. ದೂಧಗಂಗಾ ನದಿಯ ಸದಲಗಾ-ಬೋರಗಾಂವ ಸೇತುವೆ ಅಪಾಯ ಮಟ್ಟ 538 ಮೀಟರ್, ಇಂದಿನ ನೀರಿನ ಮಟ್ಟ 535ಮೀ. ಹಿಪ್ಪರಗಿ ಬ್ಯಾರೇಜ್ ಅಪಾಯ ಮಟ್ಟ 524 ಮೀ, ಇಂದಿನ ನೀರಿನ ಮಟ್ಟ 521.50.
ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ: ಕೊಯ್ನಾ-39 ಮಿಮೀ, ವಾರಣಾ-13 ಮಿಮೀ, ಕಾಳಮ್ಮವಾಡಿ-12 ಮಿಮೀ, ನವಜಾ-23 ಸಾಂಗ್ಲಿ-4 ಮಿಮೀ, ರಾಧಾನಗರಿ-46 ಮಿಮೀ, ಪಾಟಗಾಂವ-57 ಮಿಮೀ, ಮಹಾಬಲೇಶ್ವರ-13 ಮಿಮೀ, ಕೊಲ್ಲಾಪುರ-3 ಮಿಮೀ.
ಚಿಕ್ಕೋಡಿ ಮಳೆ ವಿವರ: ಚಿಕ್ಕೋಡಿ-1.2 ಮಿಮೀ, ನಾಗರಮುನ್ನೋಳ್ಳಿ-3.4 ಮಿಮೀ, ಸದಲಗಾ-3.3 ಮಿಮೀ, ಜೋಡಟ್ಟಿ-1.6, ನಿಪ್ಪಾಣಿ ಪಿಡಬ್ಲುಡಿ-2.6. ನಿಪ್ಪಾಣಿ ಎಆರ್‌ಎಸ್-2.4 ಮಿಮೀ, ಸೌಂದಲಗಾ-1.2 ಮಿಮೀ. ಮಳೆ ಆಗಿದೆ.