Advertisement

ತೆಂಗಿನ ಪೌಡರ್‌ಗೆ ತಗ್ಗಿದ ಬೇಡಿಕೆ; ಆತಂಕದಲ್ಲಿ ತೆಂಗು ಬೆಳೆಗಾರರು

06:07 PM Jun 10, 2023 | Team Udayavani |

ಗೋಕರ್ಣ: ಕಲ್ಪವೃಕ್ಷ ಎಂದೇ ಕರೆಯಲಾಗುವ ತೆಂಗಿನಕಾಯಿ ಬೆಲೆ ಭಾರಿ ಇಳಿಕೆಯಾಗಿದೆ. ಹೀಗಾಗಿ ಈ ಉದ್ಯೋಗವನ್ನೇ ನಂಬಿ ಬದುಕುವ ಸಾಕಷ್ಟು ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇನ್ನೊಂದೆಡೆ ಕೂಲಿಯಾಳುಗಳ ಕೊರತೆಯೂ ತೆಂಗು ಬೆಳೆಗಾರರನ್ನು ಕಾಡುತ್ತಿದೆ. ತೆಂಗು ಬೆಳೆ ಈಗ ಅಷ್ಟಾಗಿ ಲಾಭದಾಯಕವಲ್ಲ ಎನ್ನುವಷ್ಟರ ಮಟ್ಟಿಗೆ ಬಂದು ತಲುಪಿದೆ.

Advertisement

ಜಿಲ್ಲೆಯಲ್ಲಿ 10087.73 ಹೆಕ್ಟೇರ್‌ ಪ್ರದೇಶದಲ್ಲಿ ತೆಂಗನ್ನು ಬೆಳೆಯಲಾಗುತ್ತದೆ. ಜಿಲ್ಲೆಯಲ್ಲಿ ಹೊನ್ನಾವರ ತಾಲೂಕು ಪ್ರಥಮ ಸ್ಥಾನದಲ್ಲಿದ್ದರೆ, ಹಳಿಯಾಳ ಕೊನೆಯ ಸ್ಥಾನದಲ್ಲಿದೆ. ತೆಂಗಿನ ಮರಕ್ಕೆ ಕಾಂಡ ಸೋರುವ ರೋಗ, ನುಸಿ ಪೀಡೆ, ಮೊಗ್ಗು ಕೊಳೆ ರೋಗ, ಮಿಳ್ಳೆ ಉದುರುವುದು ಹೀಗೆ ವಿವಿಧ ರೋಗಗಳ ಜತೆಯಲ್ಲಿ ತುಂಬೆ ಹುಳು, ಮಂಗನ ಕಾಟ ಕೂಡ ರೈತರನ್ನು ನಿದ್ದೆಗೆಡಿಸಿದೆ.

ಈ ಬಾರಿಯ ಬರದಿಂದಾಗಿ ರೈತರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿಂದೆ ಸುಲಿದ ಒಂದು ಕೆ.ಜಿ. ತೆಂಗಿನ ಕಾಯಿಗೆ 37 ರೂ. ಇದ್ದು, ಪ್ರಸ್ತುತ 23 ರೂ.ಗೆ ಕುಸಿದಿದೆ. ಹೀಗಾಗಿ ರೈತರು ಅನಿವಾರ್ಯವಾಗಿ ಮಾರಾಟ ಮಾಡಬೇಕಾಗಿದೆ.

ಗೋಕರ್ಣ ಸಮೀಪದ ಬರ್ಗಿ ಗ್ರಾಮದ ವಿನಾಯಕ ಗುನಗಾ ಅವರು ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದ ನೇರವಾಗಿ ವಾರಕ್ಕೆ ಸುಮಾರು 20 ಸಾವಿರ ತೆಂಗಿನ ಕಾಯಿ ಖರೀದಿಸುತ್ತಾರೆ. ಸ್ಥಳದಲ್ಲಿಯೇ ತೂಕ ಮಾಡಿ ಹಣ ನೀಡುತ್ತಾರೆ. ತಾವು ಖರೀದಿಸಿದ ತೆಂಗಿನ ಕಾಯಿಯನ್ನು ತುಮಕೂರು ಜಿಲ್ಲೆಯ ತಿಪಟೂರಿಗೆ ಕಳುಹಿಸುತ್ತಾರೆ.

ಬೆಲೆ ಕುಸಿತಕ್ಕೆ ಕಾರಣ: ಸ್ಥಳೀಯವಾಗಿ ಅಡುಗೆ ಮತ್ತು ವಿವಿಧ ಖಾದ್ಯಗಳಿಗೆ ಕೊಬ್ಬರಿ ಬಳಸಲಾಗುತ್ತದೆ. ಆದರೆ ತಿಪಟೂರಿನಲ್ಲಿ ಈ ಕೊಬ್ಬರಿಯನ್ನು ಪೌಡರ್‌ ಮಾಡಿ ರಾಜ್ಯ ಹಾಗೂ ಹೊರರಾಜ್ಯಗಳಿಗೆ ಮಾರಾಟ ಮಾಡಲಾಗುತ್ತದೆ.

Advertisement

ಅಲ್ಲಿ ಸಾಕಷ್ಟು ಕಂಪನಿಗಳಿದ್ದು, ಅವೆಲ್ಲವೂ ತೆಂಗಿನ ಕಾಯಿಯನ್ನು ಪೌಡರ್‌ ಮಾಡಿ ಸರಬರಾಜು ಮಾಡುತ್ತಿದ್ದವು. ಬ್ರೆಡ್‌, ಪೇಡಾ ಸೇರಿದಂತೆ ಹಲವು ಸಿಹಿ ತಿಂಡಿ ಮತ್ತು ಆಹಾರಗಳಿಗೆ ಪೌಡರ್‌ ಕೊಬ್ಬರಿಯನ್ನೇ ಬಳಸುತ್ತಾರೆ. ಆದರೆ ಈಗ ಅದರ ಬೇಡಿಕೆ ಕುಗ್ಗಿದ್ದರಿಂದಾಗಿ ತಿಪಟೂರಿನಲ್ಲಿ ಖರೀದಿಯಲ್ಲಿ ವ್ಯತ್ಯಯ ಉಂಟಾಗಿದೆ. ಹೀಗಾಗಿ ಅವರು 37 ರೂ.ದಿಂದ 23ಕ್ಕೆ ಇಳಿಸಿದ್ದಾರೆ. ಇದರಿಂದಾಗಿ ಬೆಲೆ ಇಳಿಕೆಗೆ ಕಾರಣವಾಗಿದೆ.

ತೆಂಗು ಬೆಳೆಯನ್ನೇ ನಂಬಿಕೊಂಡು ಜೀವನ ಸಾಗಿಸಲಾಗುತ್ತಿತ್ತು. ಇನ್ನು ಕೂಲಿಯಾಳುಗಳ ಸಮಸ್ಯೆ ಕೂಡ ಸಾಕಷ್ಟಿದೆ. ಒಂದು ಮರ ಹತ್ತಿದರೆ 50 ರೂ. ಪಡೆಯುತ್ತಾರೆ. ಇದರ ಜತೆಗೆ ಕೆಜಿಯೊಂದರ ಮೇಲೆ 14 ರೂ. ಕಡಿಮೆಯಾಗಿದ್ದರಿಂದ ಜೀವನ ನಡೆಸುವುದು ಕಷ್ಟಕರವಾಗಿದೆ.
*ಲಕ್ಷ್ಮಣ ಗೌಡ, ತೆಂಗು ಬೆಳೆಗಾರ

Advertisement

Udayavani is now on Telegram. Click here to join our channel and stay updated with the latest news.

Next