Advertisement

ಶೇ.50 ಸಿಬಂದಿ ಕಡಿಮೆ ಮಾಡಿ; 7 ದಿನದಲ್ಲಿ ಪ್ರಕ್ರಿಯೆ ಪೂರ್ಣಕ್ಕೆ ಪಾಕ್‌ ಹೈಕಮಿಷನ್‌ಗೆ ಸೂಚನೆ

10:13 AM Jun 24, 2020 | mahesh |

ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ಥಾನದ ನಡುವೆ ಆರಂಭವಾಗಿರುವ ರಾಜತಾಂತ್ರಿಕ ಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಂಡಿದ್ದು, ಭಾರತದಲ್ಲಿರುವ ಪಾಕ್‌ ಹೈಕಮಿಷನ್‌ನ ಸಿಬಂದಿ ಸಂಖ್ಯೆಯನ್ನು ಅರ್ಧದಷ್ಟು ಕಡಿತಗೊಳಿಸಿ, ಶೇ.50ರಷ್ಟು ಅಧಿಕಾರಿಗಳನ್ನು ವಾಪಸ್‌ ಕರೆಸಿಕೊಳ್ಳಿ ಎಂದು ಪಾಕಿಸ್ಥಾನಕ್ಕೆ ಭಾರತ ಆದೇಶಿಸಿದೆ. 7 ದಿನಗಳೊಳಗಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಪಾಕ್‌ಗೆ ಸೂಚಿಸಲಾಗಿದೆ.

Advertisement

ಇದೇ ವೇಳೆ, ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ಅಷ್ಟೇ ಸಂಖ್ಯೆಯ ಅಧಿಕಾರಿಗಳನ್ನು ವಾಪಸ್‌ ಕರೆಸಿ ಕೊಳ್ಳುವುದಾಗಿ ವಿದೇಶಾಂಗ ಸಚಿವಾಲಯ ಮಂಗಳವಾರ ತಿಳಿಸಿದೆ. ಭಾರತದಲ್ಲಿರುವ ಪಾಕ್‌ ಅಧಿಕಾರಿಗಳು ನಿರಂತರವಾಗಿ ಬೇಹುಗಾರಿಕೆ ನಡೆಸುತ್ತಿರು ವುದು ಹಾಗೂ ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿರುವುದು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ, ಪಾಕಿಸ್ಥಾನದಲ್ಲಿರುವ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳಿಗೆ ಚಿತ್ರಹಿಂಸೆ, ಸುಳ್ಳು ಆರೋಪ ಹೊರಿಸಿ ಬಂಧನ‌, ಅಪಹರಣ, ಬೇಹುಗಾರಿಕೆ ನಡೆಸಿದಂಥ ಪ್ರಕರಣಗಳು ಕೂಡ ಈ ನಿರ್ಧಾರಕ್ಕೆ ಕಾರಣ ಎಂದು ಹೇಳಿದೆ.

ಮಂಗಳವಾರ ಪಾಕ್‌ನ ರಾಜತಾಂತ್ರಿಕ ಅಧಿಕಾರಿಯನ್ನು ಕರೆಸಿಕೊಂಡು ಈ ಕುರಿತು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ ಸರಕಾರ, ಇತ್ತೀಚೆಗಿನ ಪಾಕಿಸ್ಥಾನದ ವರ್ತನೆಯು ವಿಯೆನ್ನಾ ಒಪ್ಪಂದ ಹಾಗೂ ರಾಜತಾಂತ್ರಿಕ ಅಧಿಕಾರಿಗಳನ್ನು ನಡೆಸಿಕೊಳ್ಳುವಿಕೆಗೆ ಸಂಬಂಧಿಸಿದ ದ್ವಿಪಕ್ಷೀಯ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದೆ.

ಪಾಕಿಸ್ಥಾನದ ಇಬ್ಬರು ವೀಸಾ ಅಧಿಕಾರಿಗಳು ಬೇಹುಗಾರಿಕೆ ನಡೆಸುವಾಗ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಕಳೆದ ವಾರವಷ್ಟೇ ಭಾರತೀಯ ಹೈಕಮಿಷನ್‌ನ ಇಬ್ಬರು ಸಿಬಂದಿಯನ್ನು ಪಾಕ್‌ ಐಎಸ್‌ಐ ವಶಕ್ಕೆ ಪಡೆದಿತ್ತು. ಅನಂತರ, ರಸ್ತೆ ಅಪಘಾತ ಪ್ರಕರಣ ಸಂಬಂಧ ಅವರನ್ನು ಬಂಧಿಸಲಾಗಿದೆ ಎಂದು ಹೇಳಿಕೊಂಡಿತ್ತು. ಆದರೆ, ಆ ಸಿಬಂದಿಯು ತಮಗೆ ಪಾಕ್‌ ಅಧಿಕಾರಿಗಳು ಚಿತ್ರಹಿಂಸೆ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ಕೇಂದ್ರ ಸರಕಾರ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next