Advertisement

ರೆಡ್ಡಿಗಳ ಮಾತಿನ ಮಾರಾಮಾರಿ

12:06 PM Mar 15, 2018 | Team Udayavani |

ಬೆಂಗಳೂರು: ಬಿಪಿಎಲ್‌ ಕಾರ್ಡ್‌ ನೀಡುವಂತೆ ಒತ್ತಾಯಿಸಿ ನೂರಾರು ಜನರ ಪ್ರತಿಭಟನೆ ನಡೆಯುವ ವೇಳೆ ಮಾಜಿ ಮೇಯರ್‌ ಮಂಜುನಾಥ ರೆಡ್ಡಿ ಹಾಗೂ ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾ ರೆಡ್ಡಿ ನಡುವೆ ವಾಗ್ವಾದವಾಗಿದ್ದು, ಒಂದು ಹಂತದಲ್ಲಿ ಇಬ್ಬರೂ ನಾಯಕರು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಘಟನೆ ಬುಧವಾರ ಬಿಟಿಎಂ ಬಡಾವಣೆಯಲ್ಲಿ ನಡೆದಿದೆ.

Advertisement

ಬಿಟಿಎಂ ಬಡಾವಣೆಯ ತಾವರೆಕೆರೆಯ ಬಿಬಿಎಂಪಿ ಕಚೇರಿಯಲ್ಲಿ ಬಿಪಿಎಲ್‌ ಪಡಿತರ ಚೀಟಿ ವಿತರಿಸುವಂತೆ ಒತ್ತಾಯಿಸಿ ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ನೂರಾರು ಜನರು ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಮಂಜುನಾಥ ರೆಡ್ಡಿ ಅವರು, ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವವರಿಗೆ ಈಗಾಗಲೇ ಪಡಿತರ ಚೀಟಿ ವಿತರಿಸಲಾಗಿದೆ. ಹೀಗಾಗಿ ಚೀಟಿ ಪಡೆಯದವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸ್ಥಳ ಹಾಗೂ ದಿನಾಂಕ ನಿಗದಿಪಡಿಸಿ ಚೀಟಿ ನೀಡಲಿದ್ದಾರೆ. ಪ್ರತಿಭಟನೆ ಹಿಂಪಡೆಯಿರಿ ಎಂದು ಮನವಿ ಮಾಡಿದರು.

ಪಡಿತರ ಚೀಟಿಯನ್ನು ಈಗಲೇ ಕೊಡಬೇಕು ಎಂದು ಒತ್ತಾಯಿಸಿ, ಪ್ರತಿಭಟನಾ ಸ್ಥಳದಿಂದ ಹಿಂತಿರುಗುತ್ತಿದ್ದವರನ್ನು
ತಡೆದ ಪರಿಣಾಮ ರವಿಕೃಷ್ಣಾ ರೆಡ್ಡಿ ಹಾಗೂ ಮಂಜುನಾಥ ರೆಡ್ಡಿ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು. ಒಂದು ಹಂತದಲ್ಲಿ ಇಬ್ಬರು ನಾಯಕರು ಕೈ ಕೈ ಮಿಲಾಯಿಸುವ ಹಂತ ತಲುಪಿದಾಗ ಮಧ್ಯ ಪ್ರವೇಶಿಸಿದ ಪೊಲೀಸರು ಎರಡೂ ಕಡೆಯವರನ್ನು ಸಮಾಧಾನ ಪಡಿಸಿದರು.

ನಂತರ ಸಾರ್ವಜನಿಕವಾಗಿ ಹಲ್ಲೆ ನಡೆಸಲು ಮುಂದಾದರು ಎಂದು ರವಿಕೃಷ್ಣಾರೆಡ್ಡಿ ವಿರುದ್ಧ ಮಂಜುನಾಥ ರೆಡ್ಡಿ ಸುದ್ದಗುಂಟೆಪಾಳ್ಯ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ರವಿಕೃಷ್ಣಾ ರೆಡ್ಡಿಯನ್ನು ವಶಕ್ಕೆ
ಪಡೆದು ಬಿಡುಗಡೆಗೊಳಿಸಿದ್ದಾರೆ.

ಹಲ್ಲೆ ನಡೆಸಿದವರಿಗೇ ರಾಜ ಮರ್ಯಾದೆ!
“ನಮ್ಮ ವಿರುದ್ಧ ಹಲ್ಲೆ ಮಾಡಿ, ಮೊಬೈಲ್‌ ಒಡೆದ ಮಾಜಿ ಮೇಯರ್‌ ಮಂಜುನಾಥ ರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಸದ್ದಗುಂಟೆಪಾಳ್ಯ ಪೊಲೀಸರು, ಅವರಿಗೆ ರಾಜಮರ್ಯಾದೆ ನೀಡಿ, ನಮ್ಮ ವಿರುದ್ಧವೇ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ. ಪೊಲೀಸರು ನಮ್ಮೊಂದಿಗೆ ತುಂಬಾ ಕೆಟ್ಟದಾಗಿ ವರ್ತಿಸಿದ್ದಾರೆ. ನಮ್ಮನ್ನು ನೋಡಲು ಬಂದವರೊಂದಿಗೂ ಅಸಭ್ಯ ವರ್ತನೆ ತೋರಿದ್ದಾರೆ. ಗೃಹಸಚಿವರ ಕ್ಷೇತ್ರದಲ್ಲಿ ಗೂಂಡಾ ರಾಜ್ಯ ನಿರ್ಮಾಣವಾಗಿದೆ,’ ಎಂದು ಎಂದು ರವಿಕೃಷ್ಣಾ ರೆಡ್ಡಿ ಆರೋಪಿಸಿದ್ದಾರೆ.

Advertisement

ಜನರನ್ನು ಸಮಾಧಾನಪಡಿಸಿದರೂ ರವಿಕೃಷ್ಣಾರೆಡ್ಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದರು. ಇದರಿಂದಾಗಿ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಬಿ.ಎನ್‌.ಮಂಜುನಾಥ ರೆಡ್ಡಿ, ಮಾಜಿ ಮೇಯರ್‌

ನಮ್ಮ ಹಕ್ಕನ್ನು ಕೇಳಲು ಬರುವವರ ಮೇಲೆ ಮಾಜಿ ಮೇಯರ್‌ ಮಂಜುನಾಥ ರೆಡ್ಡಿ ಹಲ್ಲೆಗೆ ಮುಂದಾದರು. ಪೊಲೀಸರು ಸಹ ಅವರ ಅಣತಿಯಂತೆ ನ್ಯಾಯ ಕೇಳಲು ಬಂದವರನ್ನು ಬಂಧಿಸಿದ್ದಾರೆ.
ರವಿಕೃಷ್ಣಾ ರೆಡ್ಡಿ, ಸಾಮಾಜಿಕ ಕಾರ್ಯಕರ್ತ

Advertisement

Udayavani is now on Telegram. Click here to join our channel and stay updated with the latest news.

Next