ಬೆಂಗಳೂರು: 20 ಕೋಟಿ ರೂಪಾಯಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿಗಾಗಿ ತೀವ್ರ ಶೋಧ, ರೆಡ್ಡಿ ಹೈದಾರಾಬಾದ್ ನಲ್ಲಿ ಇದ್ದಾರೆ..ತಲೆ ಮರೆಸಿಕೊಂಡು ನಾಪತ್ತೆಯಾಗಿದ್ದಾರೆಂಬ ಸುದ್ದಿಗೆ ಸ್ವತಃ ಜನಾರ್ದನ ರೆಡ್ಡಿ ಅಜ್ಞಾತ ಸ್ಥಳದಿಂದ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ವಿಡಿಯೋದಲ್ಲಿ ಏನಿದೆ?
ಜನಾರ್ದನ ರೆಡ್ಡಿ ನಾಪತ್ತೆಯಾಗಿದ್ದಾರೆ, ಹೈದರಾಬಾದ್ ನಲ್ಲಿ ಇದ್ದಾರೆ ಎಂಬುದಾಗಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನಾನು ಎಲ್ಲಿಯೂ ಓಡಿ ಹೋಗಿಲ್ಲ. ಬೆಂಗಳೂರು ಮಹಾನಗರದಲ್ಲಿಯೇ ಇದ್ದೇನೆ. ಇಷ್ಟು ದೊಡ್ಡ ಮಹಾನಗರ ಬಿಟ್ಟು ಎಲ್ಲಿಯೂ ಹೋಗಬೇಕಾದ ಅಗತ್ಯವೂ ಇಲ್ಲ. ಪೊಲೀಸರು ಕೆಟ್ಟ ಉದ್ದೇಶದಿಂದ ತಪ್ಪು, ತಪ್ಪು ಮಾಹಿತಿ ನೀಡಿದ್ದಾರೆ. ನಾನು ವಕೀಲರ ಮಾರ್ಗದರ್ಶನದಂತೆ ಒಂದು ಕಡೆ ಇದ್ದೆ. 15-20 ದಿನಗಳಿಂದ ಆತಂಕದ ವಾತಾವರಣವನ್ನು ಸಿಸಿಬಿ ಅಧಿಕಾರಿಗಳು ಸೃಷ್ಟಿಸಿದ್ದಾರೆ.
ನಾನೊಬ್ಬ ಪೊಲೀಸ್ ಮಗನಾಗಿ, ಪೊಲೀಸ್ ಕುಟುಂಬದಲ್ಲಿ ಹುಟ್ಟು, ಪೊಲೀಸ್ ಕ್ವಾಟ್ರಸ್ ನಲ್ಲಿ ಬೆಳೆದವನು ನಾನು. ನನಗೆ ಪೊಲೀಸರ ಮೇಲೆ ಅಪಾರವಾದ ಗೌರವವಿದೆ. ಕಾನೂನು ಪ್ರಕಾರ ನೋಟಿಸ್ ಕೊಟ್ಟರೆ ಮಾತ್ರ ಹಾಜರಾಗಲು ಸಾಧ್ಯ. ಹೀಗಾಗಿ ನನಗೆ ನಿನ್ನೆ ನೋಟಿಸ್ ನನ್ನ ಕೈ ಸೇರಿತ್ತು. ಭಾನುವಾರ ವಿಚಾರಣೆಗೆ ಹಾಜರಾಗಿ ಎಂದು ತಿಳಿಸಿದ್ದರು. ಆದರೆ ನಾನು ಶನಿವಾರವೇ ಸಿಸಿಬಿ ಕಚೇರಿಗೆ ತೆರಳಿ ವಿಚಾರಣೆ ಎದುರಿಸುತ್ತೇನೆ ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.
ಯಾವುದೇ ದಾಖಲೆಯನ್ನು ನೀಡದೆ ನನ್ನ ವಿರುದ್ಧ ಸುಳ್ಳು ಆರೋಪ ಹೊರಿಸುತ್ತಿದ್ದಾರೆ. ಸಿಸಿಬಿ ಅಧಿಕಾರಿಗಳು ಯಾವುದೇ ದಾಖಲೆಯನ್ನು ಮಾಧ್ಯಮಗಳಿಗೆ ನೀಡದೆ ಆರೋಪಿಸಿದ್ದು ಯಾಕೆ? ನಾನು ಯಾವುದೇ ತಪ್ಪು ಮಾಡಿಲ್ಲ, ಈ ನಿಟ್ಟಿನಲ್ಲಿ ನನಗೆ ಯಾವುದೇ ಆತಂಕವೂ ಇಲ್ಲ. ನಾನು ಯಾವುದೇ ಡೀಲ್ ಮಾಡಿಲ್ಲ, ಭಗವಂತ ನನಗೆ ಕೊಟ್ಟಿರುವುದರಲ್ಲಿ ನನ್ನಿಂದ ಆದಷ್ಟು ಸಹಾಯ ಮಾಡಿಕೊಂಡು ಇದ್ದೇನೆ. ಬೆಂಗಳೂರಿಲ್ಲಿಯೇ ಇದ್ದ ನನಗೆ ನಾನು ಹೈದರಾಬಾದ್ ನಲ್ಲಿದ್ದೇನೆ, ಅಲ್ಲಿದ್ದೇನೆ, ಇಲ್ಲಿದ್ದೇನೆ ಎಂಬ ಸುದ್ದಿ ನೋಡಿ ಅಳಬೇಕೋ, ನಗಬೇಕೋ ಅಂತ ಗೊತ್ತಾಗಿಲ್ಲ.
ಸಿಸಿಬಿ ಬಳಿ ನನ್ನ ವಿರುದ್ಧ ಸಣ್ಣ ಸಾಕ್ಷಿಯೂ ಇಲ್ಲ. ಪೊಲೀಸರು ಕೆಟ್ಟ ಉದ್ದೇಶದಿಂದ ನನ್ನ ಟಾರ್ಗೆಟ್ ಮಾಡಿದ್ದಾರೆ. ನನ್ನದು ಸಹಾಯ ಮಾಡುವ ಕೈ, ಬೇಡುವ ಕೈ ಅಲ್ಲ. ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ನಾನು ಯಾವುದೇ ಡೀಲ್ ನಲ್ಲಿ ಭಾಗಿಯಾಗಿಲ್ಲ ಎಂದರು. ನೀವು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ. ನೋಟಿಸ್ ಕೊಟ್ಟರೆ ನೀವು ವಿಚಾರಣೆಗೆ ಹಾಜರಾಗಿ ಎಂದು ನಮ್ಮ ವಕೀಲರಾದ ಚಂದ್ರಶೇಖರ್ ಅವರು ಹೇಳಿದ್ದರು. ನಿನ್ನೆ ನೋಟಿಸ್ ಕೊಟ್ಟಿದ್ದರಿಂದ ನಾನು ಇಂದು ಸಂಜೆ ಸಿಸಿಬಿ ಕಚೇರಿಗೆ ತೆರಳುವುದಾಗಿ ಮಾಹಿತಿ ನೀಡಿದ್ದಾರೆ.