ಮಡಿಕೇರಿ : ಪ್ರಸಕ್ತ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಕಡಿಮೆ ಮಳೆಯಾಗುವ ಮುನ್ಸೂಚನೆ ಇರುವುದಾಗಿತಿಳಿಸಿರುವಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ಕಳೆದ ಸಾಲಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಅತಿಯಾದ ಮಳೆ ಕಾರಣವೇಹೊರತು ಭೂ ಕಂಪನವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಿವೃತ್ತ ಅಧಿಕಾರಿಯೊಬ್ಬರು ಕಳೆದ ಬಾರಿಯಂತೆ ಕೊಡಗು ಹಾಗೂ ಕೇರಳದಲ್ಲಿ ಭಾರೀ ಮಳೆಯಾಗುವುದರೊಂದಿಗೆ ಭೂಕುಸಿತ, ಜಲಪ್ರವಾಹ ಸಂಭವಿಸಲಿರುವುದಾಗಿ ಹೇಳಿದ್ದು, ಇದು ಸತ್ಯಕ್ಕೆ ದೂರವಾದ ವಿಚಾರವಾಗಿದೆ ಎಂದು ನುಡಿದರು.
ಜಿಲ್ಲೆಯಲ್ಲಿ ಮುಂಗಾರು ಸಂದರ್ಭದಲ್ಲಿ ಒಂದೆರಡು ದಿನ ಅಧಿಕ ಮಳೆಯಾಗುವ ಸಂಭವವಿದ್ದಲ್ಲಿ ಇಲಾಖೆ ವತಿಯಿಂದ ಮುಂಚಿತವಾಗಿಯೇ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದ ಅವರು, ಸಾರ್ವಜನಿಕರು ಕೂಡಾ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ 9243345433 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ನುಡಿದರು.
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಪ್ರತೀ 15 ನಿಮಿಷಗಳಿಗೊಮ್ಮೆ ಆಯಾ ಜಿಲ್ಲೆಯ ವಿವಿಧ ಪ್ರದೇಶಗಳ ಹವಾಮಾನ ಪರಿಸ್ಥಿತಿಯ ಬಗ್ಗೆ ಎಸ್‌ಎಂಎಸ್ ಮೂಲಕ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಲಿದೆ. ಅಲ್ಲದೆ ಸಾರ್ವಜನಿಕರು ಕೇಂದ್ರ ವೆಬ್‌ಸೈಟ್ ಮೂಲಕವೂ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಸಿಡಿಲು ಆ್ಯಪ್: ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಈಗಾಗಲೇ ಸಿಡಿಲು ಆ್ಯಪ್‌ನ್ನು ಅಭಿವೃದ್ಧಿಪಡಿಸಿದ್ದು, ಅದರ ಮೂಲಕ ಗುಡುಗು, ಸಿಡಿಲಿನಿಂದ ಉಂಟಾಗುವ ಅನಾಹುತಗಳನ್ನು ತಡೆಗಟ್ಟಲು ಕ್ರಮವಹಿಸಬಹುದಾಗಿದೆ. ಸಾರ್ವಜನಿಕರು ಕೂಡಾ ಈ ಆ್ಯಪ್‌ನ ನೆರವಿನಿಂದ ಸಿಡಿಲು, ಗುಡುಗಿನಿಂದ ತಮ್ಮನ್ನು ರಕ್ಷಿಸಿಕೊಳ್ಳಬಹುದಾಗಿದೆ ಎಂದು ಶ್ರೀನಿವಾಸ ರೆಡ್ಡಿ ಹೇಳಿದರು.