Advertisement

ಕೆಂಪು ಕಲ್ಲು  ಗಣಿಗಾರಿಕೆ: ಕಡಿವಾಣ ಅಗತ್ಯ

05:30 AM Mar 04, 2019 | |

ಈಶ್ವರಮಂಗಲ : ಕೇರಳ – ಕರ್ನಾಟಕ ಗಡಿಭಾಗದ ಗ್ರಾಮಗಳಾದ ನೆಟ್ಟಣಿಗೆಮುಟ್ನೂರು, ಪಡುವನ್ನೂರು ಮತ್ತು ಪಾಣಾಜೆ ಗ್ರಾಮಗಳಲ್ಲಿ ಕೆಲವು ತಿಂಗಳಿಂದ ಅನಧಿಕೃತ ಕೆಂಪುಕಲ್ಲಿನ ಗಣಿಗಾರಿಕೆ ನಡೆಯುತ್ತಿದ್ದು, ಕಡಿವಾಣ ಅಗತ್ಯವಾಗಿದೆ. ಕೆಂಪು ಕಲ್ಲಿನ ಗಣಿಗಾರಿಕೆಗೆ ಪೈಪೋಟಿ ಆರಂಭವಾಗಿದ್ದು, ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಪಡುವನ್ನೂರು ಗ್ರಾಮದ ಮೈಕುಳಿಯಲ್ಲಿ ನಡೆಯುತ್ತಿರುವ ಕೆಂಪು ಕಲ್ಲಿನ ಗಣಿಗಾರಿಕೆ ಇದಕ್ಕೆ ಸಾಕ್ಷಿಯಾಗಿದೆ.

Advertisement

ಸರಕಾರಿ ಜಾಗದಲ್ಲಿ!
ಬಡಗನ್ನೂರು ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಪಡುವನ್ನೂರು ಗ್ರಾಮದ ಮೈಕುಳಿ ಪ್ರದೇಶದಲ್ಲಿ ಸರಕಾರಿ ಜಾಗದಲ್ಲಿ ಅನಧಿಕೃತ ಕೆಂಪು ಕಲ್ಲಿನ ಗಣಿಗಾರಿಕೆ ಕೆಲವು ವರ್ಷಗಳಿಂದ ನಡೆದಿದೆ. ಆರಕ್ಕಿಂತ ಹೆಚ್ಚು ಕೆಂಪುಕಲ್ಲಿನ ಕೋರೆಗಳಿವೆ. ಪ್ರತಿಯೊಂದು ಗಣಿಗಾರಿಕೆ ಪ್ರದೇಶವು 1 ಕಿ.ಮೀ. ಉದ್ದ, ಅರ್ಧ ಕಿ.ಮೀ. ಅಗಲ ಹಾಗೂ 200 ಮೀ. ಆಳ ಇದೆ. ಯಂತ್ರದ ಮೂಲಕ ಕೆಂಪು ಕಲ್ಲುಗಳನ್ನು ಕತ್ತರಿಸಿ ತೆಗೆಯಲಾಗುತ್ತಿದೆ.

ದಿನಕ್ಕೆ 50ಕ್ಕೂ ಹೆಚ್ಚು ಲೋಡ್‌ ಕೆಂಪು ಕಲ್ಲುಗಳನ್ನು ಇಲ್ಲಿಂದ ಸಾಗಿಸಲಾಗುತ್ತಿದೆ. ಒಂದು ಗಣಿಗಾರಿಕೆ ಪ್ರದೇಶದಿಂದ ದಿನಕ್ಕೆ 3 ಲಕ್ಷ ರೂ. ಆದಾಯ ಇದೆ ಎಂದು ಲೆಕ್ಕಾಚಾರ ಹಾಕಲಾಗಿದೆ. ಪಕ್ಕದಲ್ಲೇ ಇರುವ ರಕ್ಷಿತಾರಣ್ಯದಿಂದಲೂ ಕಲ್ಲುಗಳನ್ನು ತೆಗೆದು ಸಾಗಿಸುವ ದಂಧೆ ನಡೆಯುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಹೊರರಾಜ್ಯದ ಕಾರ್ಮಿಕರು?
ಮೈಕುಳಿ ಪ್ರದೇಶದಲ್ಲಿ ನಡೆಯುತ್ತಿರುವ ಕೆಂಪುಕಲ್ಲಿನ ಗಣಿಗಾರಿಕೆಯನ್ನು ಯಂತ್ರದ ಮೂಲಕ ನಡೆಸಲಾಗುತ್ತಿದೆ. ಹೆಚ್ಚಿನ ಕಾರ್ಮಿಕರು ಹೊರ ರಾಜ್ಯದವರು. ಅವರಿಗೆ ಸ್ಥಳೀಯ ಭಾಷೆಗಳಾದ ತುಳು, ಕನ್ನಡದ ಪರಿಚಯವೇ ಇಲ್ಲ.

ತಹಶೀಲ್ದಾರ್‌ ಕ್ರಮ: ಶ್ಲಾಘನೆ
ಅಕ್ರಮ ಗಣಿಗಾರಿಕೆ ಸ್ಥಳಕ್ಕೆ ಪುತ್ತೂರು ತಹಶೀಲ್ದಾರ್‌ ಡಾ| ಪ್ರದೀಪ್‌ ಕುಮಾರ್‌ ಶನಿವಾರ ಭೇಟಿ ನೀಡಿದ್ದಾರೆ. ತಮ್ಮ ವಾಹನ ನಿಂತಾಗ ನಡೆದುಕೊಂಡೇ ಅಕ್ರಮ ಗಣಿಗಾರಿಕೆಯನ್ನು ಪರಿಶೀಲಿಸಿದ್ದಾರೆ. ಯಂತ್ರಗಳು, ಕಲ್ಲು ಹಾಗೂ ಇತರ ಸಲಕರಣೆ ಮುಟ್ಟುಗೋಲು ಹಾಕಿಕೊಂಡು ವರದಿ ಸಿದ್ಧ ಪಡಿಸುವಂತೆ ಕಂದಾಯ ನಿರೀಕ್ಷಕ ದಯಾನಂದ ಹಾಗೂ ವಿ.ಎ. ರಾಧಾಕೃಷ್ಣ ಅವರಿಗೆ ಸ್ಥಳದಲ್ಲೇ ಆದೇಶ ನೀಡಿದ್ದು, ಶ್ಲಾಘನೆಗೆ ಪಾತ್ರವಾಗಿದೆ.

Advertisement

ಸೂಕ್ತ ಕ್ರಮ
ಎರಡು ದಿನ ರಜೆ ಇರುವುದರಿಂದ ಮೈಕುಳಿ ಎಂಬಲ್ಲಿರುವ ಅನಧಿಕೃತ ಕಲ್ಲಿನ ಕೋರೆಯ ಪ್ರಕರಣವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಮಂಗಳವಾರ ಹಸ್ತಾಂತರಿಸಲಾಗುವುದು. ಇದರ ಬಗ್ಗೆ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತದೆ.
– ಡಾ| ಪ್ರದೀಪ ಕುಮಾರ
ತಹಶೀಲ್ದಾರ್‌, ಪುತ್ತೂರು

ಡಿಸಿ, ಲೋಕಾಯುಕ್ತರಿಗೆ ದೂರು ಕಳೆದ ಕೆಲವು ವರ್ಷಗಳಿಂದ ಪಡುವನ್ನೂರು ಗ್ರಾಮದ ಕನ್ನಡ್ಕ ಮತ್ತು ಮೈಕುಳಿಯಲ್ಲಿ ನಡೆಯುತ್ತಿರುವ ಕೆಂಪುಕಲ್ಲಿನ ಗಣಿಗಾರಿಕೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕೈವಾಡ ಇದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಗಡಿಭಾಗದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ವೀಡಿಯೋ ಮತ್ತು ಫೋಟೋಗಳನ್ನು ಸಂಗ್ರಹಿಸಲಾಗಿದೆ. ಅನಧಿಕೃತ ಗಣಿಗಾರಿಕೆಯಿಂದ ಸರಕಾರಕ್ಕೆ ಕೋಟ್ಯಂತರ ರೂ. ನಷ್ಟವಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಲೋಕಾಯುಕ್ತರಿಗೆ ದೂರು ನೀಡಲಾಗುವುದು.
– ಶ್ರೀಧರ ಪೂಜಾರಿ, ಸ್ಥಳೀಯರು

ಮಾಧವ ನಾಯಕ್‌

Advertisement

Udayavani is now on Telegram. Click here to join our channel and stay updated with the latest news.

Next