Advertisement

ಕೆಂಪುಕಲ್ಲು ಗಣಿಗಾರಿಕೆಯಿಂದಾಗಿ ಮಲೆನಾಡಿನಲ್ಲಿ ಆತಂಕ: ಅನಂತ ಹೆಗಡೆ ಅಶೀಸರ

07:54 PM Feb 08, 2022 | Team Udayavani |

ಸಾಗರ: ಬ್ರಾಹ್ಮಣ ಬೇದೂರು ಗ್ರಾಮವೂ ಸೇರಿದಂತೆ ಮಲೆನಾಡಿನ ವಿವಿಧ ಭಾಗಗಳಲ್ಲಿ ಕೆಂಪುಕಲ್ಲು ಗಣಿಗಾರಿಕೆಯಿಂದಾಗಿ ಸ್ಥಳೀಯರು ಆತಂಕದ ನಡುವೆ ಜೀವನ ಸಾಗಿಸುವಂತೆ ಆಗಿದೆ ಎಂದು ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ತಾಲೂಕಿನ ಆವಿನಹಳ್ಳಿ ಹೋಬಳಿಯ ಬ್ರಾಹ್ಮಣ ಬೇದೂರು ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ ಕಲ್ಲು ಗಣಿಗಾರಿಕೆ ಪ್ರದೇಶವನ್ನು ವೀಕ್ಷಣೆ ಮಾಡಿ, ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ಕಳೆದ ಮಳೆಗಾಲ ಸಂದರ್ಭದಲ್ಲಿ ಕಲ್ಲು ಗಣಿಗಾರಿಕೆಯಿಂದ ಗುಡ್ಡ ಕುಸಿದಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಗುಡ್ಡ ಕುಸಿದು ನಾಲ್ಕೈದು ಮನೆಗಳು ನೆಲಸಮವಾಗಿದೆ. ಈ ಭಾಗದ ಜನರು ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ. ಬೆಟ್ಟ ಪ್ರದೇಶದಲ್ಲಿ ಅನಧಿಕೃತವಾಗಿ ಕೆಂಪು ಕಲ್ಲುಗಣಿಗಾರಿಕೆ ಮಾಡುತ್ತಿರುವುದು ಖಂಡನೀಯ. ಈ ಬಗ್ಗೆ ಜೀವವೈವಿಧ್ಯ ಸಮಿತಿ, ಸ್ಥಳೀಯ ಗ್ರಾಮಸ್ಥರು ಅನೇಕ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಗಣಿಗಾರಿಕೆ ನಡೆಸದಂತೆ ಮನವಿ ನೀಡಿದ್ದಾರೆ ಎಂದರು.

ಕಲ್ಲು ಗಣಿಗಾರಿಕೆ ನಡೆಸುತ್ತಿರುವವರು ಸ್ಥಳೀಯ ಗ್ರಾಮಸ್ಥರಿಗೆ ಬೆದರಿಕೆ ಹಾಕುತ್ತಿದ್ದಾರೆ. ಬೆಟ್ಟದ ಮೇಲ್ಭಾಗದಲ್ಲಿ ರಸ್ತೆ ಮಾಡಿದ್ದರಿಂದ ಗುಡ್ಡ ಕುಸಿಯುತ್ತಿದೆ. ಇದನ್ನು ವಿರೋಧಿಸಿದ ಗ್ರಾಮಸ್ಥರ ವಿರುದ್ಧ ಸುಳ್ಳು ಕೇಸನ್ನು ದಾಖಲಿಸುತ್ತಿರುವುದು ಅಕ್ಷಮ್ಯ. ಆರ್ಥಿಕವಾಗಿ ಬಲಾಢ್ಯರಾಗಿರುವ ಕಲ್ಲು ಗಣಿಗಾರಿಕೆ ಮಾಲೀಕರು ಗ್ರಾಮಸ್ಥರನ್ನು ಬೇರೆಬೇರೆ ಹಂತದಲ್ಲಿ ಬೆದರಿಸಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದರೂ ಅಧಿಕಾರಿಗಳು ಮೌನವಾಗಿರುವುದು ದುರದೃಷ್ಟಕರ ಸಂಗತಿ. ವರದಹಳ್ಳಿ, ಬ್ರಾಹ್ಮಣ ಬೇದೂರು ಸೇರಿದಂತೆ ಬೇರೆಬೇರೆ ಕಡೆಗಳಲ್ಲಿ ಇಂತಹ ಅನಧಿಕೃತ ಕಲ್ಲು ಗಣಿಗಾರಿಕೆಗಳು ನಡೆಯುತ್ತಿದ್ದು ಗ್ರಾಮಸ್ಥರು ಗ್ರಾಮ ಬಿಡುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಧಿಕಾರಿಗಳು ಇದರ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಬೇಕು. ಸರ್ಕಾರದ ಹಂತದಲ್ಲಿ ಸಹ ಇದರ ಬಗ್ಗೆ ಗಮನ ಸೆಳೆಯುವ ಪ್ರಯತ್ನ ನಡೆಸಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಜೀವ ವೈವಿಧ್ಯ ಮಂಡಳಿ ಸದಸ್ಯ ವೆಂಕಟೇಶ್ ಕವಲಕೋಡು, ಗ್ರಾಮಸ್ಥರಾದ ಆರ್.ಎಸ್.ಗಿರಿ, ಉದಯಕುಮಾರ್ ಬಿ., ಅನಿಲಕುಮಾರ್, ಚಕ್ರಪಾಣಿ ಬಿ.ಪಿ., ರಾಘವೇಂದ್ರ ಬಿ.ಆರ್., ಜಯಪ್ರಕಾಶ್ ಗೋಳಿಕೊಪ್ಪ, ನಳಿನಿ, ಶ್ರೀನಿವಾಸ್ ಬಿ.ಜಿ., ಜಾನಕಮ್ಮ, ಶ್ರೀಲಕ್ಷ್ಮೀ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next