Advertisement
ಪ್ರಕೃತಿಯ ವಿಸ್ಮಯದಂತೆ ಕಂಡು ಬರುವ ಈ ಸಹಜ, ಸುಂದರ ಕೇಶವನಾಥೇಶ್ವರ ಗುಹಾಂತರ ದೇವಸ್ಥಾನಕ್ಕೂ ಈಗ ಕಂಟಕ ಎದುರಾದಂತಿದೆ. ಈ ದೇವಸ್ಥಾನದ ತುಸು ದೂರದಲ್ಲಿಯೇ ಭಾರೀ ಪ್ರಮಾಣದಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಈ ಗಣಿಗಾರಿಕೆ ನಡೆಯುತ್ತಿದೆ.
ಪಟ್ಟ ಜಾಗದಲ್ಲಿ ಕೃಷಿ ಉದ್ದೇಶಕ್ಕಾಗಿ ಮಾತ್ರ ಅನುಮತಿ ನೀಡಲಾಗಿದೆ. ಅದು ಒಂದು ಅಡಿ ಕಲ್ಲು ತೆಗೆದು, ಕೃಷಿ ಮಾಡಲು ಅವಕಾಶ ನೀಡಲಾಗಿದೆ. ಆದರೆ ಇಲ್ಲಿ ಈಗ ಹಲವರ ಜಾಗದಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಮತ್ತೂಂದು ಮುಖ್ಯವಾದ ವಿಚಾರವೆಂದರೆ ಈಗ ಗಣಿಗಾರಿಕೆ ನಡೆಯುತ್ತಿರುವ ಬಹುಪಾಲು ಜಾಗಗಳಿಗೆ ಅವರ ಹೆಸರಲ್ಲಿ ದಾಖಲೆಯೇ ಇಲ್ಲ. ಅಂದರೆ ಅದು ಖಾಸಗಿ ಜಾಗವಲ್ಲ. ಸರಕಾರಿ ಅಧೀನದ ಜಾಗ. ಹಾಗಾದರೆ ಇದು ಹೇಗೆ ಸಕ್ರಮ ಆಗುತ್ತದೆ. ಇದು ಅಕ್ರಮ ಅಲ್ಲವಾ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು, ಡಿಸಿ ಕಣ್ಣು, ಮುಚ್ಚಿ ಕುಳಿತಿದ್ದಾರೆಯೇ ಎನ್ನುವುದು ದೇಗುಲದ ಭಕ್ತರ ಪ್ರಶ್ನೆ.
Related Articles
Advertisement
ರಸ್ತೆ ಧೂಳುಮಯ: ಈ ದೇವಸ್ಥಾನವನ್ನು ಸಂಪರ್ಕಿಸುವ ಸುಮಾರು 3 ಕಿ.ಮೀ. ದೂರದ ಮಣ್ಣಿನ ರಸ್ತೆಯು ನಿತ್ಯ ಸಂಚರಿಸುವ ಹತ್ತಾರು ಕೆಂಪು ಕಲ್ಲು ಸಾಗಾಟದ ವಾಹನಗಳಿಂದಾಗಿ ಸಂಪೂರ್ಣ ಧೂಳುಮಯವಾಗಿದೆ.
ರಸ್ತೆ ಅಭಿವೃದ್ಧಿಯ ಜತೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಹಲವಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ, ಮೀಸಲು ಅರಣ್ಯ ಪ್ರದೇಶ ನಿಯಮ ಎನ್ನುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಅಡ್ಡಗಾಲು ಹಾಕುತ್ತಾರೆ. ನಿಯಮದ ಪ್ರಕಾರ ಮೀಸಲು ಅರಣ್ಯದ 10 ಕಿ.ಮೀ. ದೂರದವರೆಗೆ ಗಣಿಗಾರಿಕೆಗೆ ಅನುಮತಿಯಿಲ್ಲ. ಹಾಗಾದರೆ ಇಲ್ಲಿ ಅದು ಹೇಗೆ ಕೆಂಪು ಕಲ್ಲು ಗಣಿಗಾರಿಕೆಗೆ ಅನುಮತಿ ಸಿಕ್ಕಿದೆ. ತತ್‌ಕ್ಷಣ ಗಣಿಗಾರಿಕೆ ನಿಲ್ಲಿಸಿ, ದೇವಸ್ಥಾನವನ್ನು ಕಾಪಾಡಿ ಎನ್ನುವುದು ಊರವರ ಆಗ್ರಹವಾಗಿದೆ. ದೇವಸ್ಥಾನಕ್ಕೆ ಹೇಗೆ ತೊಂದರೆ?
ಇಲ್ಲಿ ಈಶ್ವರ ಲಿಂಗಕ್ಕೆ ಕಲ್ಲಿನಿಂದ ನಿರ್ಮಿತವಾದ ಗುಹೆಯೇ ಆಲಯ. ಗುಹೆಯೊಳಗೆ ಸುಮಾರು 20 ಅಡಿಗಳಷ್ಟು ವಿಶಾಲ ಜಾಗದಲ್ಲಿ ಎಲ್ಲ ಕಾಲದಲ್ಲಿಯೂ ಮೊಣಕಾಲಿನಷ್ಟು ಪನ್ನೀರಿನಂತಹ ನೀರು ಇಲ್ಲಿ ಹರಿಯುತ್ತಿರುತ್ತದೆ. ಇಲ್ಲಿನ ಹಿರಿಯರೊಬ್ಬರು ಹೇಳುವ ಪ್ರಕಾರ ಇದು ಇಡೀ ಮೂಡಗಲ್ಲು ಪರಿಸರದಾದ್ಯಂತ ಏಕ ಶಿಲೆಯಾಗಿದೆ. ಸುಮಾರು ದೂರದವರೆಗೆ ಈ ಕಲ್ಲು ವ್ಯಾಪಿಸಿದೆ. ಈಗ ಕೆಂಪು ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಪ್ರದೇಶದಲ್ಲಿ 30-40 ಅಡಿ ಆಳದವರೆಗೆ ಹೊಂಡ ಮಾಡಿದರೆ, ದೇವಸ್ಥಾನದಲ್ಲಿರುವ ನೀರು ಬತ್ತುವ ಸಾಧ್ಯತೆಗಳು ಇವೆ. ಅಲ್ಲಿ ಆಳವಾದಷ್ಟು, ದೇಗುಲದ ನೀರಿನ ಮಟ್ಟ ಆಳಕ್ಕೆ ಇಳಿದು, ಮುಂದೊಂದು ದಿನ ನೀರು ಸಂಪೂರ್ಣ ಬತ್ತಿ ಹೋಗುವ ಅಪಾಯವೂ ಇದೆ ಎನ್ನುವ ಆತಂಕ ಭಕ್ತರದು. ವರದಿ ತರಿಸಿಕೊಂಡು ಕ್ರಮ
ಮೂಡುಗಲ್ಲು ಗಣಿಗಾರಿಕೆ ಬಗ್ಗೆ ಮಾಹಿತಿ ಬಂದಿದೆ. ಈಗಾಗಲೇ ಸಂಬಂಧಪಟ್ಟ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆಗೆ ಕಳುಹಿಸಲಾಗಿದೆ. ಅವರಿಂದ ವರದಿ ತರಿಸಿಕೊಂಡು, ಸೂಕ್ತ ಕ್ರಮಕೈಗೊಳ್ಳಲಾಗುವುದು. ಅಲ್ಲಿ ಕೃಷಿ ಉದ್ದೇಶಕ್ಕೆ ಷರತ್ತುಗಳನ್ವಯ ಖಾಸಗಿ ಜಾಗದಲ್ಲಿ ಮಾತ್ರ ಅನುಮತಿ ನೀಡಲಾಗಿದೆ. ದೇವಸ್ಥಾನಕ್ಕೆ ತೊಂದರೆಯಾಗುವ ಬಗ್ಗೆ ಪರಿಶೀಲನೆ ನಡೆಸಿ, ಅಗತ್ಯ ಕ್ರಮಕೈಗೊಳ್ಳಲಾಗುವುದು.
– ಕೂರ್ಮಾ ರಾವ್ ಎಂ., ಉಡುಪಿ ಜಿಲ್ಲಾಧಿಕಾರಿ – ಪ್ರಶಾಂತ್ ಪಾದೆ