ಮಹದೇವಪುರ/ಬೆಂಗಳೂರು: ಮರಗಳ್ಳ ರಿಂದಲೇ ರಕ್ತಚಂದನದ ಮರದ ತುಂಡುಗಳನ್ನು ಲಾರಿ ಸಮೇತ ಅಪಹರಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಕಾಡುಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಎಚ್‌ಎಎಲ್ ಬಳಿಯ ಇಸ್ಲಾಂಪುರ ನಿವಾಸಿ ಸೈಯದ್ ಫೈರೋಜ್ (32) ಅಲಿಯಾಸ್ ಬಾಬು ಮತ್ತು ಕಾಡುಗೋಡಿ ನಿವಾಸಿ ಸೈಯದ್ ಯಾರಬ್ ಅಲಿಯಾಸ್ ಸೈಯದ್ ಅಸYರ್ (23) ಬಂಧಿತರು. ಆರೋಪಿಗಳು ಹೊಸಕೋಟೆ ಬಳಿ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ ಲಾರಿ ಸಮೇತ ರಕ್ತಚಂದನ ಮರದ ತುಂಡುಗಳನ್ನು ಕಳವು ಮಾಡಿದ್ದರು. ಇವರಿಂದ 2190 ಕೆ.ಜಿ. ರಕ್ತಚಂದನ ಮರದ ತುಂಡುಗಳು ಮತ್ತು ಲಾರಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿನಿಮೀಯ ಮಾದರಿಯಲ್ಲಿ ಅಪಹರಣ: ಘಟನೆ ಸಂಪೂರ್ಣ ಸಿನಿಮೀಯ ರೀತಿಯಲ್ಲೇ ನಡೆದಿದೆ. ಮರಗಳ್ಳರು ಆಂಧ್ರ ಮತ್ತು ತಮಿಳುನಾಡಿನಿಂದ ಲಾರಿಯೊಂದರಲ್ಲಿ ರಕ್ತಚಂದನದ ಮರದ ತುಂಡುಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದರು. ಲಾರಿ ಸಂಚರಿಸುವ ಮಾರ್ಗದ ಬಗ್ಗೆ ಅರಿತಿದ್ದ ಆರೋಪಿಗಳು, ನಾಲ್ಕಾರು ಸಹಚರರೊಂದಿಗೆ ಸೇರಿಕೊಂಡು ಹೊಸಕೋಟೆಯ ಟೋಲ್‌ಗೇಟ್ ಬಳಿ ರಸ್ತೆಗೆ ಅಡ್ಡಲಾಗಿ ಕಲ್ಲುಗಳನ್ನು ಇಟ್ಟಿದ್ದರು. ಇದೇ ಮಾರ್ಗದಲ್ಲಿ ಬಂದಲಾರಿ ಚಾಲಕ, ಲಾರಿ ನಿಲ್ಲಿಸಿ ಕಲ್ಲು ತೆಗೆಯಲು ಮುಂದಾಗಿದ್ದಾನೆ. ಈ ವೇಳೆ ಆರೋಪಿಗಳು ಲಾರಿ ಚಾಲಕ ಮತ್ತು ಕ್ಲೀನರ್ ಮೇಲೆರಗಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ನಂತರ ಲಾರಿ ಸಮೇತ ಮರದ ತುಂಡುಗಳನ್ನು ಕಳವು ಮಾಡಿದ್ದಾರೆ. ಹಲ್ಲೆ ಸಂಬಂಧ ಲಾರಿ ಚಾಲಕ ಎಲ್ಲಿಯೂ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತ ಆರೋಪಿಗಳು ಬೆಲೆ ಬಾಳುವ ಮರದ ತುಂಡುಗಳನ್ನು ಮಾರಾಟ ಮಾಡಲು ಬೆಳತೂರು ಕಾಲೋನಿಯ ಬಳಿ ಲಾರಿ ನಿಲ್ಲಿಸಿಕೊಂಡು ಖರೀದಿ ದಾರರಿಗಾಗಿ ಕಾಯುತ್ತಿದ್ದರು. ಈ ಬಗ್ಗೆ ಬಾತ್ಮೀದಾರ ರಿಂದ ಮಾಹಿತಿ ಪಡೆದ ಪೊಲೀಸರು, ಕೂಡಲೇ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ ಸೈಯದ್ ಫೈರೋಜ್ ಮತ್ತು ಸೈಯದ್ ಯಾರಬ್ ಮಾತ್ರ ಸೆರೆಯಾಗಿದ್ದು, ಇನ್ನುಳಿದ ಆರೋಪಿಗಳು ಪರಾರಿಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
ರಕ್ತಚಂದನ ಮರದ ತುಂಡುಗಳನ್ನು ಕಳವು ಮಾಡಿದ್ದ ಮೂಲ ಮರಗಳ್ಳರು ಯಾರೆಂಬುದು ತಿಳಿದಿಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಈ ದಂಧೆಕೋರರು ಸಕ್ರಿಯರಾಗಿದ್ದಾರೆ ಎಂಬುದು ತಿಳಿದು ಬಂದಿದೆ.