Advertisement
ಶಿಯೋಮಿ ಪ್ರಸ್ತುತ ಮಿ ಬ್ರಾಂಡ್ ನಡಿ 20 ಸಾವಿರ ರೂ.ಗೂ ಮೇಲ್ಪಟ್ಟ ಮಧ್ಯಮ ಹಾಗೂ ಫ್ಲಾಗ್‍ಶಿಪ್ ಮೊಬೈಲ್ ಗಳನ್ನೂ, ರೆಡ್‍ಮಿ ಬ್ರಾಂಡ್‍ನಡಿ ಆರಂಭಿಕ ಹಾಗೂ ಮಧ್ಯಮ ವಲಯದ ಮೊಬೈಲ್‍ಗಳನ್ನು ತಯಾರಿಸುತ್ತಿದೆ. ರೆಡ್‍ಮಿ ಬ್ರಾಂಡ್‍ನಡಿ ಇದುವರೆಗೆ 5ಜಿ ಫೋನ್ ಗಳನ್ನು ಹೊರತಂದಿರಲಿಲ್ಲ. ಪ್ರಸ್ತುತ ರೆಡ್‍ಮಿ ನೋಟ್ 10 ಸರಣಿ ಚಾಲ್ತಿಯಲ್ಲಿದ್ದು, ಇದೇ ಸರಣಿಯಲ್ಲಿ ರೆಡ್‍ಮಿ ನೋಟ್ 10 ಟಿ 5ಜಿ ಫೋನನ್ನು ಹೊರತರಲಾಗಿದೆ. ನೆನಪಿರಲಿ, ರೆಡ್‍ಮಿ ನೋಟ್ 10, ರೆಡ್ ಮಿ ನೋಟ್ 10 ಪ್ರೊ, ರೆಡ್‍ಮಿ ನೋಟ್ 10ಎಸ್. ರೆಡ್‍ಮಿ ನೋಟ್ 10 ಪ್ರೊ ಮ್ಯಾಕ್ಸ್ ಗಳು ಈಗಾಲೇ ಚಾಲ್ತಿಯಲ್ಲಿವೆ. ಈಗ ಸಾಲಿಗೆ ಹೊಸ ಸೇರ್ಪಡೆ ರೆಡ್‍ಮಿ ನೋಟ್ 10 ಟಿ 5ಜಿ. ವಿವಿಧ ಕಂಪೆನಿಗಳು ಹೊರ ತರುವ ಒಂದೇ ಸರಣಿಯ ಸಂಖ್ಯೆಗಳು, ಪ್ರೊ, ಮ್ಯಾಕ್ಸ್, ಎಸ್, ಟಿ ಇತ್ಯಾದಿಗಳು ಗ್ರಾಹಕನನ್ನು ಗೊಂದಲಕ್ಕೀಡುಮಾಡುತ್ತವೆ. ಹೊಸದಾಗಿ ಅದರ ಪರಿಚಯ ಮಾಡಿಕೊಳ್ಳಬೇಕಾದ ಗ್ರಾಹಕ ಕಕ್ಕಾಬಿಕ್ಕಿಯಾಗಬೇಕಾಗುತ್ತದೆ! ಈಗಾಗಲೇ ಅವುಗಳ ಬಗ್ಗೆ ತಿಳಿದಿರುವ, ಆಗಾಗ ಗ್ಯಾಜೆಟ್ ಸುದ್ದಿಗಳನ್ನು ಓದುವವರಿಗಷ್ಟೇ ಈ ಫೋನಿನಲ್ಲಿ ಏನಿದೆ? ಆ ಫೋನಿನಲ್ಲಿ ಏನಿಲ್ಲ? ಪ್ರೊಸೆಸರ್ ಯಾವುದು, ರ್ಯಾಮ್ ಎಷ್ಟು ಎಂಬುದು ತಿಳಿಯಲು ಸಾಧ್ಯ!
Related Articles
Advertisement
ಪ್ರೊಸೆಸರ್ : ಇದರಲ್ಲಿರುವುದು ಮೀಡಿಯಾಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್. ಇದೇ ಪ್ರೊಸೆಸರ್ ಸ್ಯಾಮ್ ಸಂಗ್ ಎ22 ಮೊಬೈಲ್‍ನಲ್ಲಿದೆ. ಪ್ರಸ್ತುತ ಮಧ್ಯಮ ದರ್ಜೆಯ ಫೋನ್‍ಗಳಿಗೆ 5ಜಿ ಸವಲತ್ತು ನೀಡಲು ಹಲವು ಕಂಪೆನಿಗಳು ಈ ಪ್ರೊಸೆಸರ್ ಮೊರೆ ಹೋಗುತ್ತಿವೆ. ಕ್ವಾಲ್‍ಕಾಂ ಸ್ನಾಪ್ ಡ್ರಾಗನ್ ಪ್ರೊಸೆಸರ್ ಗಳನ್ನೇ ಅವಲಂಬಿಸಿದ್ದ ಕಂಪೆನಿಗಳು ಸಹ ಈಗ ಮೀಡಿಯಾಟೆಕ್ ಪ್ರೊಸೆಸರ್ ಮೊರೆ ಹೋಗುತ್ತಿವೆ. ಹೀಗಾಗಿ ಈಗ ಸ್ನಾಪ್‍ಡ್ರಾಗನ್ ಜೊತೆ ಮೀಡಿಯಾಟೆಕ್ ಕೂಡ ಸ್ಪರ್ಧೆ ಮಾಡುತ್ತಿದೆ. ಬಳಕೆಯ ಅನುಭವದಲ್ಲಿ ಈ ಪ್ರೊಸೆಸರ್ ವೇಗವಾಗಿ ಕಾರ್ಯ ನಿರ್ವಹಿಸುತ್ತದೆ. ಎಂಟು ಕೋರ್‍ಗಳ ಪ್ರೊಸೆಸರ್ 2.2 ಗಿಗಾಹರ್ಟ್ಜ್ ವೇಗ ಹೊಂದಿದೆ. 7 ನ್ಯಾನೋ ಮೀಟರ್ ಆರ್ಕಿಟೆಕ್ಚರ್ ಒಳಗೊಂಡಿದೆ. 5ಜಿ ಭಾರತದಲ್ಲಿ ಲಭ್ಯವಿಲ್ಲದ ಕಾರಣ, ಅದರ ಉಪಯೋಗ ಸದ್ಯಕ್ಕಿಲ್ಲ. ಅಪ್ಲಿಕೇಷನ್‍ಗಳು, ವೆಬ್ ಸೈಟ್ ತೆರೆದುಕೊಳ್ಳುವಿಕೆ ಇತ್ಯಾದಿಗಳು ವೇಗವಾಗಿ ಕಾರ್ಯನಿರ್ವಹಿಸುತ್ತವೆ.
ಆಂಡ್ರಾಯ್ಡ್ 11 ಓಎಸ್ ಇದ್ದು, ಇದಕ್ಕೆ ಕಸ್ಟಮೈಸ್ ಮಾಡಿದ ಮಿ ಯೂಸರ್ ಇಂಟರ್ ಫೇಸ್ 12 ಆವೃತ್ತಿ ಅಳವಡಿಸಲಾಗಿದೆ. ಪ್ಯೂರ್ ಆಂಡ್ರಾಯ್ಡ್ ಗಿಂತ ಸ್ವಲ್ಪ ಹೆಚ್ಚಿನ ಸವಲತ್ತುಗಳು ಮಿ ಯೂಐ ಯಲ್ಲಿ ದೊರಕುತ್ತವೆ.
ಪರದೆ: ಎಫ್‍ಎಚ್‍ಡಿ ಪ್ಲಸ್ ಐಪಿಎಸ್ ಡಿಸ್‍ಪ್ಲೇ ಇದ್ದು, 6.5 ಇಂಚಿನ ಪರದೆ ಹೊಂದಿದೆ. 90 ಹರ್ಟ್ಜ್ ರಿಫ್ರೆಶ್ ರೇಟ್ ಇದೆ. ಮೇಲ್ಭಾಗದಲ್ಲಿ ಸೆಲ್ಫೀ ಕ್ಯಾಮರಾಗೆ ಪಂಚ್ ಹೋಲ್ ಡಿಸ್‍ಪ್ಲೇ ಇದೆ. ಪರದೆಗೆ ಕಾರ್ನಿಂಗ್ ಗೊರಿಲ್ಲಾ ಗಾಜಿನ ಸುರಕ್ಷತೆ ಇದೆ. ಅದರ ಮೇಲೆ ಸ್ಕ್ರೀನ್ ಗಾರ್ಡ್ ಮೊದಲೇ ಅಂಟಿಸಲಾಗಿದೆ. ಹೀಗಾಗಿ ಸದ್ಯಕ್ಕೆ ಅದರ ಮೇಲೆ ಟೆಂಪರ್ಡ್ ಗ್ಲಾಸ್ ಹಾಕುವ ಅಗತ್ಯ ಇಲ್ಲ. ಇದು ಐಪಿಎಸ್ ಎಲ್‍ಸಿಡಿ ಡಿಸ್‍ಪ್ಲೇ ಎಂಬುದನ್ನು ಗಮನಿಸಬೇಕು. ರೆಡ್‍ಮಿ ನೋಟ್ 10 ಸರಣಿಯಲ್ಲಿ ಉಳಿದ ಫೋನ್‍ಗಳಿಗೆ ಅಮೋಲೆಡ್ ಪರದೆ ಇದೆ. ಆದರೂ 5ಜಿ ಫೋನನ್ನು 15 ಸಾವಿರ ರೇಂಜ್‍ನಲ್ಲಿ ನೀಡುವುದಕ್ಕಾಗಿ ಎಲ್ ಇ ಡಿ ಪರದೆ ಬದಲು ಎಲ್‍ಸಿಡಿ ಪರದೆ ಅಳವಡಿಸಲಾಗಿದೆ ಅನಿಸುತ್ತದೆ.
ಕ್ಯಾಮರಾ: 48 ಪ್ರಾಥಮಿಕ ಕ್ಯಾಮರಾ, 2 ಮೆಗಾಪಿಕ್ಸಲ್ ಡೆಪ್ತ್ ಲೆನ್ಸ್ ಹಾಗೂ 2 ಮೆ.ಪಿ. ಮ್ಯಾಕ್ರೋ ಲೆನ್ಸ್ ಹೊಂದಿದೆ. 8 ಮೆ.ಪಿ. ಸೆಲ್ಫಿ ಕ್ಯಾಮರಾ ಅಳವಡಿಸಲಾಗಿದೆ. ಇದೇ ದರಕ್ಕೆ 5ಜಿ ಇಲ್ಲದಿದ್ದರೆ 64 ಮೆ.ಪಿ. ಕ್ಯಾಮರಾವನ್ನೇ ರೆಡ್‍ಮಿ ನೀಡಿದೆ. ಆದರೆ ಬಜೆಟ್ 5ಜಿ ಫೋನ್ ಆದ್ದರಿಂದ 48 ಮೆ.ಪಿ. ಕ್ಯಾಮರಾ ನೀಡಲಾಗಿದೆ. ಈ ದರಕ್ಕೆ ಕ್ಯಾಮರಾ ಗುಣಮಟ್ಟ ಚೆನ್ನಾಗಿದೆ. ಸೆಲ್ಫಿ ಕ್ಯಾಮರಾಕ್ಕೆ 8 ಮೆ.ಪಿ. ನೀಡಲಾಗಿದ್ದು, ಅದರಿಂದ ಹೆಚ್ಚಿನ ಗುಣಮಟ್ಟವನ್ನು ನಿರೀಕ್ಷಿಸುವಂತಿಲ್ಲ.
ಬ್ಯಾಟರಿ: 5000 ಎಂಎಎಚ್ ಬ್ಯಾಟರಿ ನೀಡಿರುವುದು ತೃಪ್ತಿಕರ ಅಂಶ. ಬ್ಯಾಟರಿ ಸಾಮರ್ಥ್ಯ ಚೆನ್ನಾಗಿದೆ. ಒಂದೂವರೆ ದಿನ ಬಾಳಿಕೆಗೆ ಅಡ್ಡಿಯಿಲ್ಲ. ದಕ್ಕೆ 18 ವ್ಯಾಟ್ಸ್ ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ವಿಶೇಷವೆಂದರೆ ಬಾಕ್ಸ್ ಜೊತೆ 22.5 ವ್ಯಾಟ್ಸ್ ಚಾರ್ಜರ್ ನೀಡಲಾಗಿದೆ!
ಹೆಚ್ಚುವರಿಯಾಗಿ ಅಮೆಜಾನ್ ಅಲೆಕ್ಸಾ ಉಪಕರಣವಾಗಿಯೂ ಇದನ್ನು ಬಳಸಬಹುದು. ಅಲೆಕ್ಸಾ ಅಪ್ಲಿಕೇಷನ್ ಸ್ಥಾಪಿಸಿ, ಮಾತಿನ ಮೂಲಕ ಅಲೆಕ್ಸಾಗೆ ಆದೇಶಗಳನ್ನು ನೀಡಬಹುದು.
ಭಾರತದಲ್ಲಿ ಪ್ರಸ್ತುತ 5ಜಿ ಸೌಲಭ್ಯ ಇಲ್ಲ. ಮುಂದಿನ ಒಂದೆರಡು ವರ್ಷಗಳಲ್ಲಿ 5ಜಿ ಬರುತ್ತದೆಂಬ ಉದ್ದೇಶದಿಂದ ಕಂಪೆನಿಗಳು 5ಜಿ ಉಳ್ಳ ಫೋನ್‍ಗಳನ್ನು ಹೊರತರುತ್ತಿವೆ. ಇದೇ ದರಕ್ಕೆ 5ಜಿ ಇಲ್ಲದ ಇದೇ ಬ್ರಾಂಡಿನ ಫೋನನ್ನು ಕೊಂಡಾಗ ಇನ್ನುಳಿದ ಸೌಲಭ್ಯಗಳು ಇದಕ್ಕಿಂತ ಚೆನ್ನಾಗಿರುತ್ತವೆ. ಬಜೆಟ್ ಫೋನ್ ಗಳಲ್ಲಿ 5ಜಿ ಫೋನೇ ಬೇಕೆಂದು ಕೊಂಡಾಗ, ಕ್ಯಾಮರಾ, ಪರದೆ, ವೇಗದ ಚಾರ್ಜರ್ ಇತ್ಯಾದಿಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ 15-16 ಸಾವಿರ ದರದಲ್ಲಿ 5ಜಿ ಫೋನ್ ಈಗಲೇ ಬೇಕಾ? ಎಂಬುದನ್ನು ಗ್ರಾಹಕರೇ ನಿರ್ಧರಿಸಬೇಕು.
-ಕೆ.ಎಸ್. ಬನಶಂಕರ ಆರಾಧ್ಯ