Advertisement

ಕಂಡಿದ್ದೀರಾ ಕೆಂಪು ಬೆಂಡೆ!

06:00 AM Aug 20, 2018 | |

ಕೆಂಪು ಬೆಂಡೆ ಗಿಡದ ಎಲೆಗಳಲ್ಲಿರುವ ದಂಡು, ಕಾಂಡ ಎಲ್ಲವೂ ಕೆಂಪು ಮಿಶ್ರಿತವಾಗಿದೆ. ಗಿಡ ನಾಲ್ಕು ತಿಂಗಳಲ್ಲಿ  ನಾಲ್ಕು ಅಡಿ ಎತ್ತರವಾಗುತ್ತದೆ. ಅನಂತರ ಹೂ ಬಿಡುವುದು ನಿಧಾನವಾಗುತ್ತದೆ. ಆ ತನಕ ವಾರದಲ್ಲಿ ಎರಡು ಸಲ ಪ್ರತಿ ಗಿಡದಿಂದಲೂ ನಾಲ್ಕು ಕಾಯಿಗಳು ಕೊಯ್ಲಿಗೆ ಸಿಗುತ್ತವೆ. 

Advertisement

ಬೆಂಡೆಕಾಯಿಯಲ್ಲಿ ಹಲವು ಬಗೆಗಳಿವೆ. ಘಮಘಮ ಪರಿಮಳವಿರುವ ಕರಾವಳಿಯ ಅಪ್ಪಟ ತಳಿ ಹಾಲು ಬೆಂಡೆ, ಗಿಡದ ತುಂಬ ಬೆಳೆಯುವ ಹಸಿರು ಬೆಂಡೆ, ಬೆರಳಷ್ಟುದ್ದದ ಗೊಂಚಲು ಬೆಂಡೆ, ಪೊದೆಯಂತೆ ಕೊಂಬೆಗಳು ಅರಳುವ ಪೊದೆ ಬೆಂಡೆ- ಇವೆಲ್ಲದರ ಸಾಲಿನಲ್ಲಿ ಮಾರುಕಟ್ಟೆಗೆ ಪ್ರವೇಶಿಸುತ್ತಿದೆ ಕೆಂಪು ಬೆಂಡೆ. ತೆಳ್ಳಗಿನ ಹಸಿರಿನ ಲೇಪದ ನಡುವೆ ಕಣ್ಣಿಗೆ ರಾಚುವ ಕೆಂಪು ವರ್ಣ ಹೊಂದಿದ ಈ ತಳಿ ಅಮೆರಿಕದಿಂದ ನಮ್ಮಲ್ಲಿಗೆ ಕಾಲಿಟ್ಟಿದೆ. ತಾರಸಿ ಕೃಷಿಯ ನಿಪುಣ ಮಂಗಳೂರಿನ ಮರೊಳಿಯ ಲಾಲ್‌ಬಹುದ್ದೂರ್‌ ಶಾಸ್ತ್ರಿ ಬಡಾವಣೆಯಲ್ಲಿರುವ ಪಡ್ಡಂಬೈಲು ಕೃಷ್ಣಪ್ಪಗೌಡರು ತಮ್ಮ ಮನೆಯ ತಾರಸಿಯಲ್ಲಿ ಅದನ್ನು ಬೆಳೆಯುತ್ತಿದ್ದಾರೆ.

    ಗೋಣಿಚೀಲದಲ್ಲಿ ಸುಡುಮಣ್ಣು ಮತ್ತು ಒಣ ಸೆಗಣಿಯ ಹುಡಿ ತುಂಬಿಸಿ ಏಪ್ರಿಲ್‌ ತಿಂಗಳಿನಲ್ಲಿ ಗೌಡರು ಬಿತ್ತಿದ ಬೆಂಡೆಯ ಬೀಜ ಹುಟ್ಟಿ 45 ದಿನಗಳಲ್ಲಿ ಹೂ ಬಿಟ್ಟಿದೆ. 60 ದಿನಗಳಲ್ಲಿ ಕಾಯಿ ಕೊಡಲಾರಂಭಿಸಿದೆ. ಈ ತಳಿಗೆ ಹಾಲುಬೆಂಡೆಯ ಹಾಗೆ ಹಳದಿರೋಗ ಬಾಧಿಸಿಲ್ಲ. ಕೀಟದ ಆಕ್ರಮಣ ತಡೆಯಲು ಗೌಡರ ಬಳಿ ಅವರದೇ ಆದ ಅಸ್ತ್ರವಿದೆ.  ಬೇವಿನ ಕಷಾಯಕ್ಕೆ ಅರಶಿನದ ಹುಡಿ ಮತ್ತು ಕಾಳುಮೆಣಸಿನ ಚೂರ್ಣ ಬೆರೆಸಿ ಸಿದ್ಧಪಡಿಸಿದ ಅವರ ಔಷಧದ ಮುಂದೆ ಕೀಟಗಳ ಆಟ ನಡೆಯಲಿಲ್ಲ.

    ಕೆಂಪು ಬೆಂಡೆ ಗಿಡದ ಎಲೆಗಳಲ್ಲಿರುವ ದಂಡು, ಕಾಂಡ ಎಲ್ಲವೂ ಕೆಂಪು ಮಿಶ್ರಿತವಾಗಿದೆ. ಗಿಡ ನಾಲ್ಕು ತಿಂಗಳಲ್ಲಿ  ನಾಲ್ಕು ಅಡಿ ಎತ್ತರವಾಗುತ್ತದೆ ಎನ್ನುತ್ತಾರೆ ಗೌಡರು. ಅನಂತರ ಹೂ ಬಿಡುವುದು ನಿಧಾನವಾಗುತ್ತದೆ. ಆ ತನಕ ವಾರದಲ್ಲಿ ಎರಡು ಸಲ ಪ್ರತಿ ಗಿಡದಿಂದಲೂ ನಾಲ್ಕು ಕಾಯಿಗಳು ಕೊಯ್ಲಿಗೆ ಸಿಗುತ್ತವೆ. ಹದಿನೈದು ಕಾಯಿಗಳು ಒಂದು ಕಿ.ಲೋ ತೂಗುತ್ತವೆ. ಪೇಟೆಯಲ್ಲಿ ಕಿ.ಲೋಗೆ ನೂರು ರೂಪಾಯಿ ತನಕ ಬೆಲೆಯೂ ಇದೆ. ಕಾಯಿ ಅರ್ಧ ಅಡಿ ಉದ್ದವಿದ್ದು ದಪ್ಪವಾಗಿವೆ. ಬಣ್ಣ ಕೆಂಪಗಿದ್ದು ಗಮನ ಸೆಳೆಯುವುದು ಬಿಟ್ಟರೆ ಸಾವಯವದ ಘಮದಲ್ಲಿ ಬೆಳೆದ ಕಾರಣ ಬಹು ಮೃದುವಾಗಿ ಬೇಯುತ್ತದೆ. ಸಿಹಿಯಾಗಿದ್ದು ಪಲ್ಯ, ಸಾಂಬಾರು, ಮಜ್ಜಿಗೆ ಹುಳಿಗಳನ್ನು ತಯಾರಿಸಿದರೆ ಸ್ವಾದಿಷ್ಟವೂ ಆಗಿದೆ ಎನ್ನುತ್ತಾರೆ ಕೃಷ್ಣಪ್ಪರ ಹೆಂಡತಿ.

    ಕೃಷ್ಣಪ್ಪಗೌಡರ ಅಧ್ಯಯನದ ಪ್ರಕಾರ, ಕೆಂಪು ಬೆಂಡೆ ಪೋಷಕಾಂಶದ ಕಣಜವೂ ಹೌದು. ಕಾಬೋìಹೈಡ್ರೇಟ್ಸ್‌, ನಾರು, ಸಕ್ಕರೆ, ಕೊಬ್ಬು, ಪ್ರೋಟೀನು, ಕಬ್ಬಿಣ, ರಂಜಕ, ಮೆಗ್ನೇಷಿಯಂ, ಪೊಟ್ಯಾಷಿಯಂ, ಸತು, ಅಲೆಟಿಕ್‌ ಮತ್ತು ಅನೋಲಿಯಕ್‌ ಆಮ್ಲಗಳ ಜೊತೆಗೆ ಎ, ಬಿ1, 2, 3, 4, ಸಿ, ಇ, ಕೆ ಜೀವಸತ್ವಗಳು ಅದರಲ್ಲಿ ಅಡಕವಾಗಿವೆ ಎಂಬುದನ್ನು ಅವರು ವಿವರಿಸುತ್ತಾರೆ. ಒಣಗಿದ ಬೀಜದಲ್ಲಿ ಶೇ. 40ರಷ್ಟು ತೈಲಾಂಶವಿದೆ. ಕೆಂಪು ಬೆಂಡೆಯ ಎಲೆಗಳಿಂದ ಸಲಾಡ್‌ ಮಾಡುವುದೂ ಉಂಟಂತೆ. ಬೀಜವನ್ನು ಹುರಿದು ಹುಡಿ ಮಾಡಿ ಕಾಫಿಯಂತಹ ಪಾನೀಯ ತಯಾರಿಕೆಗೂ ಉಪಯೋಗಿಸುವ ಅಂಶವನ್ನೂ ಹೇಳುತ್ತಾರೆ. ಇದನ್ನು ದೊಡ್ಡ ಪ್ರಮಾಣದಲ್ಲಿ ರೈತರು ಸಾವಯವದಲ್ಲಿಯೇ ಬೆಳೆಯಬಹುದು, ಬೆಂಡೆಕಾಯಿಯ ಬಣ್ಣವೇ ಅದಕ್ಕೆ ಹೆಚ್ಚಿನ ಬೆಲೆ ತಂದುಕೊಡುತ್ತದೆ. ಪ್ರಾಯೋಗಿಕವಾಗಿಯೂ ಮನೆಯ ತಾರಸಿ ಮೇಲೆ ಬೆಳೆಯಲು ಮುಂದಾಗಬಹುದು ಎನ್ನುವ ಆಶಯ ಅವರದು. 

Advertisement

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next