Advertisement

ಕುಂಕುಮ ಕೋಮಲೆ

12:30 AM Jan 16, 2019 | |

ಈಗಿನ ಕುಂಕುಮಗಳು ತಕ್ಷಣವೇ ಅಳಿಸಿ ಹೋಗುವುದಿಲ್ಲ. ಮುಖಕ್ಕೆಲ್ಲ ಕುಂಕುಮದ ಬಣ್ಣ ಹರಡುವ ಆತಂಕವಿಲ್ಲ. ಬೇಕಾದಾಗ ಅಂಟಿಸಿ, ಬೇಡದಾಗ ತೆಗೆಯಬಹುದು…

Advertisement

ಕುಂಕುಮಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಮಹತ್ತರವಾದ ಸ್ಥಾನವಿದೆ. ಭಾರತೀಯ ನಾರಿಗೆ ಕುಂಕುಮ ಹಣೆಯಲ್ಲಿ ಧರಿಸಿ ಸಂಭ್ರಮಿಸುವುದೇ ಖುಷಿಯ ಸಂತಸದ ಸಂಗತಿ. “ಅಟ್ಟದ ಮೇಲೆ ಪುಟ್ಟ ಲಕ್ಷ್ಮೀ’ ಎಂಬ ಒಗಟಿಗೆ ಉತ್ತರವಾದ ಕುಂಕುಮದ ಹೆಗ್ಗಳಿಕೆ, ಇತಿಹಾಸ, ಉಪಯೋಗ ಬಹಳ ಹಿರಿದು. ಹೆಣ್ಣಿಗೆ ಅಲಂಕಾರ ಭೂಷಣವಾಗಿರುವ ಕುಂಕುಮವನ್ನು ಮನೆಗೆ ಬಂದ ಮುತ್ತೈದೆಯರಿಗೆ ನೀಡುವುದು ಗೌರವದ, ಸತ್ಸಂಪ್ರದಾಯದ ಸಂಕೇತ. 

ಭಾರತದ ಹಲವೆಡೆ ಮದುವೆಯಾದ ಹೆಂಗಸರು ಬೈತಲೆ ಹತ್ತಿರ ಕೆಂಪು ಸಿಂಧೂರ ಇಡುವ ಪದ್ಧತಿ ಇದೆ. ಪೂಜೆ- ಪುನಸ್ಕಾರ, ಹೋಮ ಹವನಗಳಲ್ಲಿ, ಹಿಂದೂ ದೇವತೆಗಳ ಆರಾಧನೆಯಲ್ಲಿ ಹೆಚ್ಚಾಗಿ ಶಕ್ತಿದೇವತೆ, ಲಕ್ಷ್ಮೀ ಪೂಜೆಗಳ ಸಂದರ್ಭದಲ್ಲಿ ಕುಂಕುಮವನ್ನು ಹೆಚ್ಚಿನ ಪ್ರಮಾಣದಲ್ಲಿ ಭಕ್ತಿಯಿಂದ ಬಳಸಲಾಗುತ್ತದೆ. ಕುಂಕುಮದಲ್ಲಿ ದೈವೀಶಕ್ತಿ ತುಂಬಿರುವುದರಿಂದ ಧರಿಸಿದವರ ಮನಸ್ಸನ್ನು ಪರಿಶುದ್ಧಗೊಳಿಸುತ್ತದೆ. ಅಷ್ಟೇ ಅಲ್ಲ, ಕುಂಕುಮ ಯಾವುದೇ ಋಣಾತ್ಮಕ ಶಕ್ತಿಗಳ ಪ್ರವೇಶಕ್ಕೆ ಅವಕಾಶ ಕೊಡುವುದಿಲ್ಲವೆಂದು ನಂಬಿಕೆಯೂ ಇದೆ.

ಕುಂಕುಮ ಕೆಂಪು ಬಣ್ಣದ್ದಾದರೂ ಅದನ್ನು ತಯಾರಿಸುವುದು ಅರಿಶಿನ, ಸುಣ್ಣ  ಮತ್ತು ಎಣ್ಣೆಯನ್ನು ಬಳಸಿ. ಅದಕ್ಕೂ ಕಲಬೆರಕೆಯ ಗಾಳಿ ಸೋಕಿರುವುದು ಆತಂಕದ ಸಂಗತಿ. 50 ವರ್ಷಗಳ ಹಿಂದೆ ನಮ್ಮಮ್ಮ ಮಕ್ಕಳಿಗೆ ಹಣೆಗೆ ಇಡಲೆಂದು ಕಪ್ಪು ಸಾದು ಸ್ವತಃ ತಾನೇ ತಯಾರಿಸುತ್ತಿದ್ದರು. ಅಕ್ಕಿಯನ್ನು ಕಬ್ಬಿಣದ ಬಾಣಲೆಯಲ್ಲಿ ಕಪ್ಪಾಗುವವರೆಗೂ ಹುರಿದು ಅದನ್ನು ಬೆಲ್ಲದೊಂದಿಗೆ ಒರಳುಕಲ್ಲಿನಲ್ಲಿ ರುಬ್ಬಿ ಕುದಿಸಿ ಡಬ್ಬಿಗೆ ಹಾಕಿಡುತ್ತಿದ್ದರು. ಅದು ಅನೇಕ ತಿಂಗಳುಗಳವರೆಗೂ ಹಾಳಾಗದೆ ಹಾಗೇ ಇರುತ್ತಿತ್ತು. ಅದರಿಂದ ಚುಕ್ಕಿಚಿತ್ತಾರ, ಗುಂಡಗೆ, ತಿಲಕದ ರೀತಿ, ಕಡ್ಡಿಯಿಂದ ಉದ್ದಕ್ಕೆ… ಹೀಗೆಲ್ಲಾ ವಿಧ ವಿಧ ಆಕಾರ ಮತ್ತು ವಿನ್ಯಾಸಗಳನ್ನು ನಾನು ನನ್ನ ತಂಗಿಯಂದಿರು ಬಿಡಿಸಿ ಸಂಭ್ರಮಿಸುತ್ತಿದ್ದೆವು. ದಿನವಿಡೀ ಇದ್ದರೂ ಅಳಿಸಿಹೋಗದ ಅಂಟಾದ ಕಪ್ಪು ಸಾದಿನ ನಂಟು ಈಗ ನೆನಪಿನ ಗಂಟು!

ಇತ್ತೀಚಿನ ವರ್ಷಗಳಲ್ಲಿ ಹಣೆಗೆ ಕುಂಕುಮ ಇಡುವ ಸಂಪ್ರದಾಯ ಬಹಳವೇ ಕಡಿಮೆಯಾಗಿ ಬಿಂದಿ ಅಂಟಿಸಿಕೊಳ್ಳುವ ಸಂಸ್ಕೃತಿ ಬಂದಿದೆ. ಈಗಿನ ಕುಂಕುಮಗಳು ತಕ್ಷಣವೇ ಅಳಿಸಿ ಹೋಗುವುದಿಲ್ಲ. ಮುಖಕ್ಕೆಲ್ಲ ಕುಂಕುಮದ ಬಣ್ಣ ಹರಡುವ ಆತಂಕವಿಲ್ಲ. ಬೇಕಾದಾಗ ಅಂಟಿಸಿ, ಬೇಡದಾಗ ತೆಗೆಯಬಹುದು. ಬಳಕೆ ತುಂಬಾ ಸುಲಭ. ಅದರಲ್ಲಿಯೂ ಅಲರ್ಜಿಯಾಗುವ ಸಾಧ್ಯತೆಗಳಿವೆ. ಮೊದಲು ಕಪ್ಪು, ಕೆಂಪು ಬಣ್ಣಗಳಲ್ಲಿ ಮಾತ್ರ ದೊರೆಯುತ್ತಿದ್ದ ಬಿಂದಿ, ಬೊಟ್ಟು ಕ್ರಮೇಣ ನಾನಾ ಬಣ್ಣಗಳಲ್ಲಿ ವಿವಿಧ ಆಕಾರ ವಿನ್ಯಾಸ, ಮುತ್ತುಗಳಿಂದ ಅಲಂಕೃತ, ಬಣ್ಣದ ಹರಳುಗಳಿಂದ ಕೂಡಿದ ಸ್ಟಿಕ್ಕರ್‌ ಮಾದರಿಯಲ್ಲಿ ಸಿಗಲು ಶುರುವಾದವು. 

Advertisement

ಬದಲಾದ ಕಾಲದಲ್ಲೂ ಕುಂಕುಮ ಮಾರ್ಪಾಡುಗಳಿಗೆ ಒಳಗಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ಅದರ ಹೆಗ್ಗಳಿಕೆ. 

ಶಾರದಾ ಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next