Advertisement
ಅದು 1947 ಆಗಸ್ಟ್ 14ರ ಅಪರಾತ್ರಿ. ಸ್ಥಳ ಲಾಹೋರಿ ಗೇಟ್. ಲಾಹೋರಿ ಗೇಟ್ ಎನ್ನುವುದಕ್ಕಿಂತಲೂ ಲಾಲ್ ಕಿಲಾ (ಕೆಂಪುಕೋಟೆ) ಎಂದರೆ ಬಹುತೇಕರಿಗೆ ಪರಿಚಿತ ಮತ್ತು ಆಪ್ತಭಾವ. ಅಂದು ಪಂಡಿತ್ ಜವಾಹರಲಾಲ್ ನೆಹರೂರವರು ಆಗ ತಾನೇ ಅಧಿಕೃತವಾಗಿ ಜನ್ಮತಾಳಿದ್ದ ಸ್ವತಂತ್ರಭಾರತದ ಬಗ್ಗೆ ಹೀಗೆ ಭಾವಪರವಶರಾಗಿ ಭಾಷಣವನ್ನು ಮಾಡುತ್ತಲಿದ್ದರೆ ದೇಶಕ್ಕೆ ದೇಶವೇ ಸಂಭ್ರಮಾಚರಣೆಯಲ್ಲಿತ್ತು. ವಿದೇಶೀ ಮಾಧ್ಯಮಗಳೂ ಕೂಡ ಈ ಘಟನೆಯನ್ನು ಇತಿಹಾಸದ ಒಂದು ಮೈಲುಗಲ್ಲೆಂಬಂತೆ ಪರಿಗಣಿಸಿದ್ದವು. ಟ್ರೈಸ್ಟ್ ವಿದ್ ಡೆಸ್ಟಿನಿ ಎಂಬ ಖ್ಯಾತಿಯ ನೆಹರೂರವರ ಭಾಷಣವಂತೂ ಇಪ್ಪತ್ತನೆಯ ಶತಮಾನದ ಶ್ರೇಷ್ಠ ಭಾಷಣಗಳಲ್ಲೊಂದು ಎಂಬ ಮನ್ನಣೆಯನ್ನು ಗಳಿಸಿಕೊಂಡು ಅಜರಾಮರವಾಗಿಬಿಟ್ಟಿತ್ತು.
ನೆಹರೂರವರು ದಿಲ್ಲಿಯ ಕೆಂಪುಕೋಟೆಯಲ್ಲಿ ನೀಡಿದ್ದ ಆ ಐತಿಹಾಸಿಕ ಭಾಷಣವು ಭವಿಷ್ಯದ ಭಾರತದ ಬಗ್ಗೆ ಜಾಗತಿಕ ನೆಲೆಯಲ್ಲಿ ಅಪಾರವಾದ ನಿರೀಕ್ಷೆಯನ್ನು ಹುಟ್ಟಿಸಿತ್ತು. ಮುಂದೆ ನೆಹರೂರವರ ನಂತರದ ಪ್ರಧಾನಿಗಳು ಆಯಾ ಕಾಲಘಟ್ಟದ ಸಂಗತಿಗಳ ಬಗ್ಗೆ ಸಮಸ್ತ ದೇಶವನ್ನುದ್ದೇಶಿಸಿ ಮಾತನಾಡುತ್ತ ಈ ಪರಂಪರೆಯನ್ನು ಅಷ್ಟೇ ಘನತೆಯಿಂದ ಮುಂದುವರೆಸಿಕೊಂಡು ಹೋಗಿದ್ದು ವಿಶೇಷ. ಹಾಗೆ ನೋಡಿದರೆ, ಅಂದಿನ ನೆಹರೂರವರಿಂದ ಹಿಡಿದು ಈಚಿನ ಇಪ್ಪತ್ತೂಂದನೆಯ ಶತಮಾನದ ಪ್ರಧಾನಮಂತ್ರಿಗಳವರೆಗೂ, ಬಹುತೇಕ ಎಲ್ಲರೂ ಇಲ್ಲಿ ತಮ್ಮ ದೂರದೃಷ್ಟಿಯ ನೋಟಗಳನ್ನು ದೇಶವಾಸಿಗಳೊಂದಿಗೆ ಹಂಚಿಕೊಂಡವರೇ. ಕೆಂಪುಕೋಟೆಯ ಈ ಭವ್ಯ ಪರಿಸರದಲ್ಲಿ ಸ್ವಾತಂತ್ರ್ಯ ದಿನಾಚರಣೆಗಳಂದು ದೇಶವನ್ನು ಪ್ರತಿನಿಧಿಸಿ ಮಾತನಾಡಿದ ಪ್ರಧಾನಿಗಳೆಲ್ಲರಿಗೂ ನೆಹರೂರವರ ಭಾಷಣಕ್ಕೆ ಸಿಕ್ಕಷ್ಟು ಖ್ಯಾತಿಯು ದಕ್ಕಲಿಲ್ಲವಾದರೂ, ಆಯಾ ಕಾಲಮಾನಕ್ಕೆ ತಕ್ಕಂತೆ ದೇಶದ ಜನತೆಯಲ್ಲಿ ಎಲ್ಲಿಲ್ಲದ ಭರವಸೆಗಳನ್ನು ಮೂಡಿಸಿರುವುದರಲ್ಲಿ ಸಂದೇಹವಿಲ್ಲ.
Related Articles
Advertisement
ಆಗಸ್ಟ್ ಮಾಸದ ಮದುವಣಗಿತ್ತಿ ದೇಶದ ಸ್ವಾತಂತ್ರ್ಯ ಸಂಭ್ರಮಾಚರಣೆಗೆ ರಾಷ್ಟ್ರರಾಜಧಾನಿಯಾದ ದಿಲ್ಲಿಯಿಡೀ ಇನ್ನಿಲ್ಲದ ಉತ್ಸಾಹದೊಂದಿಗೆ ತಯಾರಾಗುತ್ತಿದ್ದರೆ, ಕೆಂಪುಕೋಟೆಯಂತೂ ಮದುವಣಗಿತ್ತಿಯಂತೆ ಅಣಿಯಾಗುತ್ತಿರುತ್ತದೆ. ಭದ್ರತೆಯ ದೃಷ್ಟಿಯಿಂದ ಕೆಂಪುಕೋಟೆಯ ಆಸುಪಾಸಿನಲ್ಲಿರುವ ಜನನಿಬಿಡ ಬಜಾರುಗಳು ತಾತ್ಕಾಲಿಕವಾಗಿ ಮುಚ್ಚುತ್ತವೆ. ದಿಲ್ಲಿಯ ಖ್ಯಾತ ಜನನಿಬಿಡ ತಾಣಗಳಲ್ಲೊಂದಾದ ಇಂಡಿಯಾ ಗೇಟ್ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಮವಸ್ತ್ರಧಾರಿ ಪಡೆಗಳ ಓಡಾಟ ಜೋರಾಗುತ್ತದೆ. ದೇಶದ ವಾರ್ಷಿಕ ಸಂಭ್ರಮಾಚರಣೆಯ ಲಗುಬಗೆಯಲ್ಲಿ ಅತಿಥಿ ಅಭ್ಯಾಗತರಿಗೂ, ಜನಸಾಮಾನ್ಯರಿಗೂ ಗೊಂದಲಗಳಾಗದಂತೆ, ಒಟ್ಟಾರೆ ವ್ಯವಸ್ಥೆಯಲ್ಲಿ ಒಂದಿನಿತೂ ಲೋಪದೋಷಗಳಾಗದಂತೆ ಶಹರದ ಆರಕ್ಷಕ ಪಡೆಗಳು ಕಟ್ಟೆಚ್ಚರದಿಂದ ಕಾಯುತ್ತವೆ. ಇನ್ನು ಕೆಂಪುಕೋಟೆಯು ಕಾರ್ಯಕ್ರಮದ ಕೇಂದ್ರಬಿಂದುವಾಗಿರುವುದರಿಂದ ಈ ನಿರ್ದಿಷ್ಟ ಪ್ರದೇಶದಲ್ಲಿ ವಿಶೇಷ ತಯಾರಿಗಳಿರುವುದು ಸಾಮಾನ್ಯವೇ ಅನ್ನಿ. ಪ್ರಾಯಶಃ ಆಗ್ರಾದ ತಾಜ್‌ಮಹಲ್ ಅನ್ನು ಹೊರತುಪಡಿಸಿದರೆ ಇಡೀ ದೇಶದಲ್ಲೇ ಬಹುತೇಕ ಎಲ್ಲರಿಗೂ ಚಿರಪರಿಚಿತವಾಗಿರುವ ವಾಸ್ತುಶಿಲ್ಪದ ಅದ್ಭುತವೊಂದಿದ್ದರೆ ಅದು ಕೆಂಪುಕೋಟೆ.
ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಬೇರೆಲ್ಲೂ ಕಾಣಸಿಗದ ವೈವಿಧ್ಯ ಮತ್ತು ಈ ವೈವಿಧ್ಯದಲ್ಲೂ ಏಕತಾಭಾವದ ಭಾÅತೃತ್ವವನ್ನು ಸಾವಿರಾರು ವರ್ಷಗಳಿಂದ ಉಳಿಸಿಕೊಂಡು ಬಂದಿರುವ ಭಾರತದ ವೈಶಿಷ್ಟ್ಯವೇ ಬೇರೆ. ಕಾಲಾನುಕ್ರಮದಲ್ಲಿ ಎದುರಾಗಿದ್ದ ಹಲವು ಸವಾಲು, ಅಗ್ನಿಪರೀಕ್ಷೆಗಳ ಹೊರತಾಗಿಯೂ ಇದುವೇ ನಮ್ಮ ಜೀವನಾಡಿ ಎಂಬುದನ್ನು ಭಾರತೀಯ ಮನಸ್ಸುಗಳು ಸಾಬೀತು ಮಾಡುತ್ತಲೇ ಬಂದಿವೆ. ಅದು ಈ ಮಣ್ಣಿನ ಗುಣ. ಹೀಗಾಗಿಯೇ ಹೊರಗಿನ ಬಹಳಷ್ಟು ಜನರಿಗೆ ಭಾರತವೆಂದರೆ ಪದಗಳಲ್ಲಿ ಹಿಡಿದಿಡಲಾಗದ ಅದ್ಭುತ, ಅದೊಂದು ಮುಗಿಯದ ಕೌತುಕ. ಇಂಥಾದ್ದೊಂದು ರಾಷ್ಟ್ರದ ರಾಜಧಾನಿಯಾಗಿರುವ ದಿಲ್ಲಿಯಲ್ಲೂ ಇವೆಲ್ಲವನ್ನು ಆತ್ಮದಂತೆ ಕಾಣಬಹುದು ಎಂಬುದು ಹೆಮ್ಮೆಯ ಸಂಗತಿ.
ಇಂದು ಕೆಂಪುಕೋಟೆಯೆಂದರೆ ಕೇವಲ ಒಂದು ಪ್ರಾಚೀನ ವಾಸ್ತುಶಿಲ್ಪದ ಕುರುಹಾಗಿಯಷ್ಟೇ ಉಳಿದಿಲ್ಲ. ಅದು ದಿಲ್ಲಿಗೆ ಮುಕುಟಪ್ರಾಯ. ಏಕಕಾಲದಲ್ಲಿ ಭವ್ಯ ಭೂತಕಾಲಕ್ಕೂ, ದೂರದೃಷ್ಟಿಯುಳ್ಳ ಭವಿತವ್ಯಕ್ಕೂ ಮುತ್ಸದ್ದಿಗಳ ಮೂಲಕವಾಗಿ ಸೇತುವೆಯಾಗಬಲ್ಲ ಒಂದು ವಿಶಿಷ್ಟ ವೇದಿಕೆ. ಕೆಂಪುಕೋಟೆಯನ್ನು ಕಿಲಾ-ಎ-ಮುಬಾರಕ್ ಎಂದೂ ಕರೆಯುವುದುಂಟು. ತನ್ನ ಅನ್ವರ್ಥನಾಮದಂತೆ ಈ ಕೋಟೆ ದಿಲ್ಲಿಯು ಪಡೆದುಕೊಂಡು ಬಂದ ವರವೇ ಹೌದು.
-ಪ್ರಸಾದ್ ನಾೖಕ್