Advertisement

ಪಿಯುಸಿಗೂ ಬಂತು ರೆಡ್‌ಕ್ರಾಸ್‌ ಘಟಕ

11:29 PM May 07, 2022 | Team Udayavani |

ರಾಜ್ಯದ ಕಾಲೇಜು ಹಾಗೂ ಪ್ರೌಢಶಾಲೆಗಳಲ್ಲಿ ಭಾರತೀಯ ರೆಡ್‌ ಕ್ರಾಸ್‌ ಸೊಸೈಟಿ ತನ್ನ ಘಟಕಗಳನ್ನು ಈ ಹಿಂದೆಯೇ ಆರಂಭಿಸಿದ್ದು ಈಗ ಪದವಿ ಪೂರ್ವ ಕಾಲೇಜಿನಲ್ಲೂ ಘಟಕ ಆರಂಭಿಸಲು ಸರಕಾರ ಸುತ್ತೋಲೆ ಹೊರಡಿಸಿದೆ. ಪದವಿ ಪೂರ್ವ ಕಾಲೇಜುಗಳಲ್ಲಿ ಕಿರಿಯ ರೆಡ್‌ಕ್ರಾಸ್‌ ಘಟಕ ಆರಂಭಿಸಲು ಈವರೆಗೆ ಅವಕಾಶ ಇರಲಿಲ್ಲ. ಪದವಿ ಹಾಗೂ ಪ್ರೌಢಶಾಲೆಗಳ 10 ಲಕ್ಷ ವಿದ್ಯಾರ್ಥಿಗಳು ಈವರೆಗೆ ರೆಡ್‌ ಕ್ರಾಸ್‌ನ ಸದಸ್ಯತ್ವ ಪಡೆದಿದ್ದಾರೆ.

Advertisement

ರೆಡ್‌ಕ್ರಾಸ್‌ ಉಗಮ: ಸ್ವಿಟ್ಸರ್ಲೆಂಡ್‌ನ‌ ಯುವ ಉದ್ಯಮಿ ಹೆನ್ರಿ ಡುನಾಂಟ್‌ 1859ರಲ್ಲಿ ಫ್ರಾಂಕೋ-ಆಸ್ಟ್ರಿಯನ್‌ ಯುದ್ಧದ ಸಮಯ ಇಟಲಿಯ ಸಲ#ರಿನೊ ಯುದ್ಧಭೂಮಿಯಲ್ಲಿ ಗಾಯಗೊಂಡ ಸೈನಿಕರ ಸ್ಥಿತಿ ನೋಡಿ ಸ್ಥಳೀಯ ಸಮುದಾಯದ ಸಹಾಯದಿಂದ ಪರಿಹಾರ ಕಾರ್ಯ ನಡೆಸಿ, ಗಾಯಾಳುಗಳ ಸಹಾಯಕ್ಕೆ ಸಂಸ್ಥೆ ಸ್ಥಾಪಿಸಲು ಸಲಹೆ ನೀಡಿದರು. ಇಂಟರ್‌ನ್ಯಾಶನಲ್‌ ರೆಡ್‌ ಕ್ರಾಸ್‌ ಸಂಸ್ಥೆಯನ್ನು 1863 ರ ಫೆ.17ರಂದು ಜಿನೀವಾ ಕನ್ವೆನ್ಷನ್ ಮೂಲಕ ಅಧಿಕೃತವಾಗಿ ಸ್ಥಾಪಿಸಲಾಯಿತು. ಹೆನ್ರಿ ಡುನಾಂಟ್‌ ಅವರ ಜನ್ಮದಿನವಾದ ಮೇ 8ರಂದು ಪ್ರತೀ ವರ್ಷ ವಿಶ್ವಾದ್ಯಂತ ರೆಡ್‌ ಕ್ರಾಸ್‌ ದಿನವನ್ನಾಗಿ ಆಚರಿಸಲಾಗುತ್ತದೆ.

ಭಾರತೀಯ ರೆಡ್‌ ಕ್ರಾಸ್‌: 1914ರಲ್ಲಿ ಮೊದಲ ವಿಶ್ವ ಯುದ್ಧದ ಸಮಯದಲ್ಲಿ ಸಂತ್ರಸ್ತ ಸೈನಿಕರಿಗೆ ಪರಿಹಾರ ಸೇವೆಗಳಿಗಾಗಿ ಭಾರತವು ಯಾವುದೇ ಸಂಸ್ಥೆಯನ್ನು ಹೊಂದಿರಲಿಲ್ಲ. ಆಗ ತಾತ್ಕಾಲಿಕ ಸಮಿತಿಯನ್ನು ಪರಿಹಾರ ಸೇವೆಗಾಗಿ ಪ್ರಾರಂಭಿಸಲಾಯಿತು. 1920 ರ ಮಾ. 3 ರಂದು ಭಾರತೀಯ ಲೆಜಿಸ್ಲೇಟಿವ್‌ ಕೌನ್ಸಿಲ್‌ನಲ್ಲಿ ಭಾರತದ ಜಂಟಿ ಯುದ್ಧ ಸಮಿತಿಯ ಅಧ್ಯಕ್ಷರೂ ಆಗಿದ್ದ ವೈಸ್‌ರಾಯ್‌ನ ಕಾರ್ಯಕಾರಿ ಮಂಡಳಿಯ ಸದಸ್ಯ ಸರ್‌ ಕ್ಲೌಡ್ ಹಿಲ್‌, ಬ್ರಿಟಿಷ್‌ ರೆಡ್‌ಕ್ರಾಸ್‌ನಿಂದ ಸ್ವತಂತ್ರವಾದ ಭಾರತೀಯ ರೆಡ್‌ಕ್ರಾಸ್‌ ಸೊಸೈಟಿ ರಚಿಸುವ ಮಸೂದೆ ಮಂಡಿಸಿದರು. ಅದೇ ವರ್ಷದ ಮಾ.20ರಂದು ಅದು ಕಾಯ್ದೆಯಾಗಿ ಜಾರಿಗೆ ಬಂದಿತು.

ಘಟಕಗಳು: ಜಿಲ್ಲೆ ಹಾಗೂ ಉಪವಿಭಾಗ ಮಟ್ಟದಲ್ಲಿ ರೆಡ್‌ಕ್ರಾಸ್‌ ಘಟಕಗಳಿದ್ದು ಸ್ವಯಂಸೇವಕರಾಗಿ ಎಲ್ಲ ವಲಯದ ನಾಗರಿಕರಿಗೂ ಅವಕಾಶ ಕಲ್ಪಿಸಿಕೊಡಲು ವಿವಿಧ ಘಟಕಗಳನ್ನು ತೆರೆಯಲಾಗುತ್ತಿದೆ. ಕಾಲೇಜು ಮಟ್ಟದಲ್ಲಿ ಯೂತ್‌ ರೆಡ್‌ಕ್ರಾಸ್‌ ಈಗಾಗಲೇ ಅಸ್ತಿತ್ವದಲ್ಲಿದೆ. ಪ್ರೌಢಶಾಲಾ ಹಂತದಲ್ಲಿ ಘಟಕಗಳನ್ನು ತೆರೆಯಲು 2020ರಲ್ಲಿ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. 2022ರ ಎಪ್ರಿಲ್‌ನಲ್ಲಿ ಪದವಿ ಪೂರ್ವ ಕಾಲೇಜುಗಳಲ್ಲೂ ಕಿರಿಯ ರೆಡ್‌ಕ್ರಾಸ್‌ ಘಟಕ ತೆರೆಯಲು ಪದವಿಪೂರ್ವ ಶಿಕ್ಷಣ ಇಲಾಖೆ ಸರಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಶಾಲೆಗಳು ರೆಡ್‌ ಕ್ರಾಸ್‌ ಘಟಕವಾಗಿ ನೋಂದಾಯಿಸಲು 100 ರೂ. ನೀಡಬೇಕು. ಪ್ರತೀ ವಿದ್ಯಾರ್ಥಿಯೂ 10 ರೂ. ಸದಸ್ಯತ್ವ ಶುಲ್ಕ ನೀಡಬೇಕು. ಇದರಲ್ಲಿ 4 ರೂ. ಭಾರತೀಯ ರೆಡ್‌ಕ್ರಾಸ್‌ ಸೊಸೈಟಿಯ ರಾಜ್ಯ ಘಟಕಕಕ್ಕೆ, ಉಳಿದ 6 ರೂ.ಗಳಲ್ಲಿ ಶಾಲೆಯಲ್ಲಿ ರೆಡ್‌ಕ್ರಾಸ್‌ ಚಟುವಟಿಕೆಗೆ ಬಳಸ ಬಹುದು. ಈಗ ಪ.ಪೂ. ಕಾಲೇಜುಗಳು ಘಟಕವಾಗಿ ನೋಂದಾ ಯಿಸಲು 100 ರೂ. ಮತ್ತು ವಿದ್ಯಾರ್ಥಿಗಳು 25 ರೂ. ನೀಡಬೇಕು. ಇದರಲ್ಲಿ 10 ರೂ. ರೆಡ್‌ಕ್ರಾಸ್‌ಗೆ, 15 ರೂ. ಶಾಲೆಗೆ ಎಂದು ಸೂಚಿಸಲಾಗಿದೆ. ಪದವಿ ಕಾಲೇಜುಗಳು 1,500 ರೂ. ನೋಂದಣಿ ಶುಲ್ಕ, 50 ರೂ. ಸದಸ್ಯತ್ವ ಶುಲ್ಕ ನೀಡಬೇಕು. ಇದರಲ್ಲಿ 15 ರೂ. ರೆಡ್‌ಕ್ರಾಸ್‌ಗೆ, ಉಳಿಕೆ ಕಾಲೇಜಿಗೆ.

Advertisement

ಸದಸ್ಯತ್ವ: ಕಳೆದ 1 ವರ್ಷದಲ್ಲಿ ರಾಜ್ಯದಲ್ಲಿ 3,278 ಶಾಲೆಗಳು, 2,60,820 ವಿದ್ಯಾರ್ಥಿಗಳು, ದಕ್ಷಿಣ ಕನ್ನಡದಲ್ಲಿ 85 ಪ್ರೌಢಶಾಲೆಗಳು, 12,472 ಮಕ್ಕಳು, ಉಡುಪಿ ಜಿಲ್ಲೆಯಲ್ಲಿ 29 ಪ್ರೌಢಶಾಲೆಗಳು, 1,237 ಮಕ್ಕಳು ಪ್ರೌಢಶಾಲೆ ಹಂತದಲ್ಲಿ ಸದಸ್ಯತ್ವ ಪಡೆದಿದ್ದಾರೆ. ಯೂತ್‌ ರೆಡ್‌ಕ್ರಾಸ್‌ಗೆ ರಾಜ್ಯದ 30 ವಿವಿಗಳ 2,036 ಕಾಲೇಜುಗಳು ನೋಂದಣಿಯಾಗಿದ್ದು 7.26 ಲಕ್ಷ ಮಂದಿ ಸದಸ್ಯರಾಗಿದ್ದಾರೆ.

ಆರಂಭ
ಭಾರತೀಯ ರೆಡ್‌ ಕ್ರಾಸ್‌ ಸೊಸೈಟಿ 1920ರಲ್ಲಿ ಆರಂಭವಾಗಿ, ಈಗ 36 ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಲ್ಲಿ 1,100 ಜಿಲ್ಲಾ, ಉಪಜಿಲ್ಲಾ ಶಾಖೆಗಳನ್ನು ಹೊಂದಿದೆ. ದೇಶದಲ್ಲಿ ರಾಷ್ಟ್ರಪತಿಗಳು ರೆಡ್‌ ಕ್ರಾಸ್‌ ಸೊಸೈಟಿಯ ಅಧ್ಯಕ್ಷರಾಗಿದ್ದರೆ ರಾಜ್ಯಗಳಲ್ಲಿ ರಾಜ್ಯಪಾಲರು ಅಧ್ಯಕ್ಷರಾಗಿರುತ್ತಾರೆ. ವಿಪತ್ತುಗಳು/ ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ ಕಾರ್ಯಾಚರಣೆ, ನೆರವು ಒದಗಿಸುತ್ತದೆ.
ದುರ್ಬಲ ವರ್ಗದವರು ಮತ್ತು ಸಮುದಾಯಗಳ ಆರೋಗ್ಯ ಮತ್ತು ಆರೈಕೆಗೆ ಸಹಾಯ ಮಾಡುತ್ತದೆ.

ಹೆಚ್ಚಬೇಕು
ಕರ್ನಾಟಕದಲ್ಲಿ ಎಲ್ಲ ಪ್ರೌಢಶಾಲೆ, ಪಿಯು, ಪದವಿ, ವೃತ್ತಿಪರ ಕಾಲೇಜುಗಳಲ್ಲಿ ರೆಡ್‌ಕ್ರಾಸ್‌ ಘಟಕ ಆರಂಭವಾಗಬೇಕು. ವಿದ್ಯಾರ್ಥಿಗಳಿಗೆ ಜೀವ ಉಳಿಸುವ ಕೆಲಸಗಳಾದ ಪ್ರಥಮ ಚಿಕಿತ್ಸೆ, ಪ್ರಕೃತಿ ವಿಕೋಪ ನಿರ್ವಹಣೆ ತರಬೇತಿ ನೀಡಲಾಗುತ್ತದೆ. ಹಾಗಾಗಿ ರೆಡ್‌ ಕ್ರಾಸ್‌ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಇನ್ನಷ್ಟು ಹೆಚ್ಚಬೇಕು.
– ಬಸ್ರೂರು ರಾಜೀವ ಶೆಟ್ಟಿ
ಸಭಾಪತಿ, ಭಾರತೀಯ ರೆಡ್‌ಕ್ರಾಸ್‌ ಸೊಸೈಟಿ, ಉಡುಪಿ ಜಿಲ್ಲೆ ಘಟಕ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next