Advertisement

ಪಿಯು ಕಾಲೇಜುಗಳಲ್ಲಿ ರೆಡ್‌ಕ್ರಾಸ್‌ ಘಟಕ ಆರಂಭ; ಕಾಲೇಜುಗಳಿಗೆ ಸರಕಾರದ ಆದೇಶ

05:04 PM Jan 29, 2022 | Team Udayavani |

ಉಡುಪಿ: ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ಕಿರಿಯರ ವಿಭಾಗ ಪ್ರಸಕ್ತ ಸಾಲಿನಿಂದ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಪದವಿಪೂರ್ವ ಕಾಲೇಜುಗಳಲ್ಲಿ ಅಸ್ಥಿತ್ವಕ್ಕೆ ಬರಲಿದೆ.

Advertisement

ರೆಡ್‌ಕ್ರಾಸ್‌ ಯುತ್‌ ಘಟಕವು ರಾಜ್ಯದ ವಿಶ್ವವಿದ್ಯಾಲಯ, ಅದರ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ 2011ರಿಂದಲೇ ಕಾರ್ಯನಿರ್ವಹಿಸುತ್ತಿದೆ.(ಅಂದಿನ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ| ವಿ.ಎಸ್‌.ಆಚಾರ್ಯ ಅವರು ಇದಕ್ಕೆ ನಿರ್ದೇಶಿಸಿದ್ದರು.) ಶಾಲೆಗಳಲ್ಲಿ ಜೂನಿಯರ್‌ ರೆಡ್‌ಕ್ರಾಸ್‌ ಘಟಕವಿದೆ. ಆದರೆ, ಪಿಯು ವಿದ್ಯಾರ್ಥಿಗಳಿಗೆ ರೆಡ್‌ಕ್ರಾಸ್‌ ಘಟಕ ಈವರೆಗೂ ಇರಲಿಲ್ಲ.

ಸರಕಾರಕ್ಕೆ ಪತ್ರ
ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ರಾಜ್ಯ ಶಾಖೆಯ ಸಭಾಪತಿ ಎಸ್‌. ನಾಗಣ್ಣ ಅವರು ಪಿಯು ಕಾಲೇಜುಗಳಲ್ಲೂ ಕಿರಿಯರ ರೆಡ್‌ಕ್ರಾಸ್‌ ಘಟಕ ತೆರೆಯಲು ಅನುಮತಿ ನೀಡಬೇಕು ಎಂದು ಕೋರಿ ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದರು. ಸರಕಾರ ಪತ್ರಕ್ಕೆ ಒಪ್ಪಿಗೆ ಸೂಚಿಸಿ, ಎಲ್ಲ ಕಾಲೇಜುಗಳಲ್ಲೂ ಕಿರಿಯರ ರೆಡ್‌ಕ್ರಾಸ್‌ ಘಟಕ ಸ್ಥಾಪಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯ ಮೂಲಕ ಆದೇಶ ಹೊರಡಿಸಿದೆ.

ವಿದ್ಯಾರ್ಥಿಗಳಿಗೆ ಅನುಕೂಲವೇನು?
ರೆಡ್‌ಕ್ರಾಸ್‌ ಘಟಕದಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಹಲವು ಅನುಕೂಲವಿದೆ. ರೆಡ್‌ಕ್ರಾಸ್‌ ವತಿಯಿಂದ ಪಿಯು ವಿದ್ಯಾರ್ಥಿಗಳಿಗೆ ಹಂತ ಹಂತವಾಗಿ ಅಥವಾ ಶಿಬಿರಗಳ ಮೂಲಕ ಸ್ವಯಂ ಆರೋಗ್ಯ ರಕ್ಷಣೆ, ತಮ್ಮ ಸುತ್ತಲಿನವರ ಆರೋಗ್ಯದ ರಕ್ಷಣೆ, ಪರಿಸರ ಜಾಗೃತಿಯ ತರಬೇತಿ ನೀಡಲಾಗುತ್ತದೆ. ಸಣ್ಣಪುಟ್ಟ ಗಾಯವಾದಾಗ ಅಥವಾ ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ಹೇಗೆ ನೀಡಬೇಕು, ಮಾಡಿ
ಕೊಳ್ಳಬೇಕು ಎಂಬುದನ್ನು ಕಲಿಸಿಕೊಡಲಾಗುತ್ತದೆ.

ಹೃದಯಾಘಾತದ ಸಂದರ್ಭ ಅಥವಾ ಅಂತಹ ಪರಿಸ್ಥಿತಿ ಎದುರಾದ ಸನ್ನಿವೇಶಗಳನ್ನು ಹೇಗೆ ನಿಭಾಯಿಸಬೇಕು, ತುರ್ತಾಗಿ ಮಾಡಬೇಕಾದ ಕ್ರಮಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಪ್ರಕೃತಿ ವಿಕೋಪ ಸಂಭವಿಸಿದಾಗ ವಿದ್ಯಾರ್ಥಿಗಳ ಸ್ಪಂದನೆ ಹೇಗಿರಬೇಕು ಮತ್ತು ಪ್ರಕೃತಿ ವಿಕೋಪಕ್ಕೆ ಗುರಿಯಾದಾಗ, ಅದರಿಂದ ಹೊರಬರಲು ಏನು ಮಾಡಬೇಕು ಎಂಬದನ್ನು ಹೇಳಿಕೊಡಲಾಗುತ್ತದೆ. ನಾಯಕತ್ವದ ಗುಣ ಬೆಳೆಸಲು ತರಬೇತಿ ನೀಡಲಾಗುವುದು ಎಂದು ರೆಡ್‌ಕ್ರಾಸ್‌ ಸಂಸ್ಥೆಯ ಅಧಿಕಾರಿಯೊಬ್ಬರು ವಿವರ ನೀಡಿದ್ದಾರೆ.

Advertisement

ಕಾರ್ಯಾರಂಭ ಹೇಗೆ?
ಪಿಯು ಕಾಲೇಜುಗಳಲ್ಲಿ ಕಿರಿಯರ ರೆಡ್‌ಕ್ರಾಸ್‌ ಘಟಕ ಆರಂಭಿಸಲು ಸರಕಾರ ಅನುಮೋದಿಸಿ ಆದೇಶ ಹೊರಡಿಸಿದೆ. ಅದರಂತೆ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಪಿಯು ಕಾಲೇಜುಗಳು ವಾರ್ಷಿಕ 100 ರೂ. ಸದಸ್ಯತ್ವ ಶುಲ್ಕವನ್ನು ಭಾರತೀಯ ರೆಡ್‌ಕ್ರಾಸ್‌ನ ರಾಜ್ಯ ಶಾಖೆಗೆ ಪಾವತಿಸಿ ನೋಂದಾಯಿಸಿಕೊಳ್ಳಬೇಕು. ತದನಂತರ ಎಲ್ಲ ಪಿಯು ಕಾಲೇಜುಗಳು ಪ್ರತಿ ವಿದ್ಯಾರ್ಥಿಯಿಂದ 25 ರೂ. ರೆಡ್‌ಕ್ರಾಸ್‌ ಶುಲ್ಕವಾಗಿ ಸಂಗ್ರಹಿಸಿ, 10 ರೂ.ಗಳನ್ನು ಭಾರತೀಯ ರೆಡ್‌ಕ್ರಾಸ್‌ನ ರಾಜ್ಯ ಶಾಖೆಗೆ ಕಳುಹಿಸಬೇಕು. ಉಳಿದ 15 ರೂ.ಗಳನ್ನು ಕಾಲೇಜಿನಲ್ಲಿಯೇ ಉಳಿಸಿಕೊಂಡು ರೆಡ್‌ಕ್ರಾಸ್‌ ಘಟಕದ ಮೂಲಕ ವಿವಿಧ ಚಟುವಟಿಕೆ ಆಯೋಜಿಸಲು ಈ ನಿಧಿ ವಿನಿಯೋಗಿಸಬೇಕು. ಇದರ ಲೆಕ್ಕಪತ್ರವನ್ನು ಸರಕಾರದ ನಿಯಮಾನುಸಾರವೇ ಇಡಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ಎಲ್ಲ ಕಾಲೇಜುಗಳಲ್ಲಿ ಆರಂಭಕ್ಕೆ ಸೂಚನೆ
ಈಗಾಗಲೇ ವಿ.ವಿ.ಗಳಲ್ಲಿ ಯೂತ್‌ ರೆಡ್‌ಕ್ರಾಸ್‌, ಶಾಲೆಗಳಲ್ಲಿ ಜೂನಿಯರ್‌ ರೆಡ್‌ಕ್ರಾಸ್‌ ಘಟಕವಿದೆ. ಪಿಯು ವಿದ್ಯಾರ್ಥಿಗಳಿಗೆ ರೆಡ್‌ಕ್ರಾಸ್‌ ಘಟಕ ಇರಲಿಲ್ಲ. ಪ್ರಸಕ್ತ ಸಾಲಿನಿಂದ ಎಲ್ಲ ಪಿಯು ಕಾಲೇಜುಗಳಲ್ಲೂ ರೆಡ್‌ಕ್ರಾಸ್‌ ಘಟಕ ಆರಂಭಿಸಲು ಸೂಚನೆ ಹೋಗಿದೆ. ಇದರಿಂದ ಪಿಯುಸಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಇನ್ನಷ್ಟು ಅನುಕೂಲವಾಗಲಿದೆ.
-ಬಸ್ರೂರು ರಾಜೀವ್‌ ಶೆಟ್ಟಿ,
ಸಭಾಪತಿ, ಉಡುಪಿ ಜಿಲ್ಲಾ ರೆಡ್‌ಕ್ರಾಸ್‌ ಶಾಖೆ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next