Advertisement
ಮಂಗಳೂರು ನಗರದಲ್ಲಿ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಮಳೆ ಬಿಡುವು ನೀಡಿದೆ. ಮಧ್ಯಾಹ್ನ ಬಳಿಕ ಮಳೆ ತುಸು ಬಿರುಸು ಪಡೆದಿದ್ದು, ಬಿಟ್ಟು ಬಿಟ್ಟು ಸುರಿದಿದೆ. ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಆವರಿಸಿದೆ. ಬೆಳ್ತಂಗಡಿ ತಾಲೂಕಿನ ಮಚ್ಚಿನ ಬಳಿ ಗುಡ್ಡೆ ಜರಿದು ಅಡಿಕೆ ತೋಟಕ್ಕೆ ನೀರು ನುಗ್ಗಿದೆ. ಚಾರ್ಮಾಡಿ 8ನೇ ತಿರುವಿನಲ್ಲಿ ರಸ್ತೆಗೆ ಮರ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಯಿತು. ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ ಬಳಿ ಬರೆ ಕುಸಿದು ಮನೆಗೆ ಹಾನಿಯಾಗಿದೆ.
ರಾ.ಹೆ. 75ರ ಸಕಲೇಶಪುರ ದೋಣಿ ಗಲ್‌ನಲ್ಲಿ ರವಿವಾರ ಮುಂಜಾನೆ ಗುಡ್ಡ ಕುಸಿತದಿಂದ 1 ಗಂಟೆ ಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು. ರೆಡ್ ಅಲರ್ಟ್
ಕರಾವಳಿ ಭಾಗದಲ್ಲಿ ಭಾರೀ ಮಳೆ ಯಾಗುವ ನಿರೀಕ್ಷೆ ಇದ್ದು, ಜು.13ರ ವರೆಗೆ ಭಾರತೀಯ ಹವಾಮಾನ ಇಲಾಖೆ “ರೆಡ್ ಅಲರ್ಟ್’ ಘೋಷಿಸಿದೆ. ಈ ವೇಳೆ 204.5 ಮಿ.ಮೀ.ಗಿಂತಲೂ ಅಧಿಕ ಮಳೆಯಾಗುವ ನಿರೀಕ್ಷೆ ಇದೆ. ಗಾಳಿಯ ಜತೆ ಸಮುದ್ರದ ಅಬ್ಬರ ಕೂಡ ಹೆಚ್ಚಾಗುವ ನಿರೀಕ್ಷೆ ಇದೆ.ವಿಮಾನ ಸಂಚಾರದಲ್ಲಿ ವ್ಯತ್ಯಯ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಹೋಗುವ ವಿಮಾನಗಳ ಸಂಚಾರದಲ್ಲಿ ರವಿವಾರವೂ ವ್ಯತ್ಯಯ ವಾಗಿದೆ. ಪ್ರತಿಕೂಲ ಹವಾಮಾನದಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ದಿನ ಎಲ್ಲ ವಿಮಾನಗಳ ಆಗಮನ ಮತ್ತು ನಿರ್ಗಮನ ಸಮಯ ಬದಲಾವಣೆಯಾಗಿದೆ ಎಂದು ಸ್ಪೈಸ್ ಜೆಟ್ ಸಂಸ್ಥೆಯು ತನ್ನ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.
Related Articles
ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಪ್ರಸ್ತುತ ಎಷ್ಟು ದಿನಗಳ ಕಾಲ ರಜೆ ನೀಡಲಾಗಿರುತ್ತದೆಯೋ ಅಷ್ಟೂ ದಿನಗಳಿಗೆ ಅನುಗುಣವಾಗಿ ಮತ್ತು ಪಠ್ಯವನ್ನು ಪೂರ್ಣಗೊಳಿಸಲು ಶನಿವಾರ ಪೂರ್ಣ ದಿನ ಶಾಲೆಗಳನ್ನು ತೆರೆಯಬೇಕು. ದಸರಾ ರಜಾ ದಿನಗಳಂದು ಕೂಡ ಶಾಲೆಗಳನ್ನು ನಡೆಸಲು ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ರೆಡ್ ಅಲರ್ಟ್ ಮುಂದುವರಿದು ನಿರಂತರ ಮಳೆ ಬೀಳುತ್ತಿದ್ದಲ್ಲಿ ಜಿಲ್ಲೆಯಾದ್ಯಂತ ರಜೆ ಘೋಷಿಸಲು ಅಗತ್ಯ ಕ್ರಮದ ಅಧಿಕಾರವನ್ನು ಆಯಾ ಶಾಲೆಗಳಿಗೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
Advertisement
ಉಡುಪಿ: 17 ಮನೆಗಳಿಗೆ ಹಾನಿಉಡುಪಿ, ಜು. 10: ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿ ಹಲವೆಡೆ ಹಾನಿ ಸಂಭವಿಸಿದೆ. ಆಗುಂಬೆ ಘಾಟಿಯಲ್ಲಿ ಕುಸಿತ ಸಂಭವಿಸಿ ಸಂಚಾರ ಸ್ಥಗಿತಗೊಂಡಿದೆ. ಉಡುಪಿ ನಗರ ವ್ಯಾಪ್ತಿಯ ಬನ್ನಂಜೆ ಗರಡಿ ರಸ್ತೆ, ಕಲ್ಯಾಣಪುರ, ಉಪ್ಪೂರು ಗ್ರಾಮ ಕುದ್ರು ಭಾಗದಲ್ಲಿ ನೆರೆ ನೀರಿನ ಪ್ರಮಾಣ ಮತ್ತೆ ಏರಿಕೆಯಾಗಿದೆ. ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ., ಜಿ.ಪಂ. ಸಿಇಒ ಪ್ರಸನ್ನ ಎಚ್. ಅವರು ಬ್ರಹ್ಮಾವರ, ಕೋಟ ಭಾಗದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ಪರಿಶೀಲನೆ ನಡೆಸಿದರು.
ಬ್ರಹ್ಮಾವರ, ಕಾಪು, ಪಡುಬಿದ್ರಿ, ಹೆಬ್ರಿ, ಬೈಂದೂರು, ಕುಂದಾಪುರ, ಸಿದ್ದಾಪುರ, ಅಜೆಕಾರು, ಪೆರ್ಡೂರು, ಶಿರ್ವ ಭಾಗದಲ್ಲಿ ಬಿಟ್ಟುಬಿಟ್ಟು ನಿರಂತರ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಗಾಳಿ ಮಳೆಯಿಂದಾಗಿ 17 ಮನೆಗಳಿಗೆ ಹಾನಿಯಾಗಿದೆ. ಉಡುಪಿ ತಾಲೂಕು 3, ಬ್ರಹ್ಮಾವರ 5, ಕಾರ್ಕಳ 2, ಬೈಂದೂರು 6, ಕುಂದಾಪುರ ತಾಲೂಕಿನಲ್ಲಿ 3 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ.