ಭಟ್ಕಳ: ಭಟ್ಕಳ ಅರ್ಬನ್ ಬ್ಯಾಂಕು ಹಣ ಜಮಾ ಮಾಡುವ ಹಾಗೂ ಹಿಂಪಡೆಯುವ (ರಿಸೈಕ್ಲರ್)ಯಂತ್ರ ಅಳವಡಿಕೆ ಮೂಲಕ ಇನ್ನೊಂದು ಮೈಲಿಗಲ್ಲನ್ನು ದಾಟಿದೆ ಎಂದು ಬ್ಯಾಂಕಿನ ಅಧ್ಯಕ್ಷ ಅಬ್ದುಲ್ ಮಾಜೀದ್ ಚೌಗುಲೆ ಹೇಳಿದರು.
ಅವರು ಬ್ಯಾಂಕಿನ ಮುಖ್ಯ ಶಾಖೆ ಆವಾರದಲ್ಲಿ ಅಳವಡಿಸಲಾದ ರಿಸೈಕ್ಲರ್ (ಹಣ ಜಮಾ ಮಾಡುವ ಹಾಗೂ ಪಡೆಯುವ) ಯಂತ್ರವನ್ನು ಉದ್ಘಾಟಿಸಿ ಮಾತನಾಡಿದರು.
ಹೊಸ ಹೊಸ ಬ್ಯಾಂಕಿಂಗ್ ತಂತ್ರಜ್ಞಾನ ಅಳವಡಿಸಿ ಗ್ರಾಹಕ ಸೇವೆ ನೀಡುವಲ್ಲಿ ಮಂಚೂಣಿಯಲ್ಲಿರುವ ನಮ್ಮ ಬ್ಯಾಂಕು ಗ್ರಾಹಕರ ಕುಂದು ಕೊರತೆಗಳಿಗೆ ಸದಾ ಸ್ಪಂದಿಸುತ್ತಿದೆ. ಬ್ಯಾಂಕಿನ ಮುಖ್ಯ ಶಾಖೆಯಲ್ಲಿ ಅಳವಡಿಸಿರುವ ರಿಸೈಕ್ಲರ್ ಯಂತ್ರದ ಮೂಲಕ ಗ್ರಾಹಕರು ತಮ್ಮ ಖಾತೆಗೆ ಹಣ ಜಮಾ ಮಾಡಲು ಹಾಗೂ ತೆಗೆಯಲು ಅವಕಾಶವಿದ್ದು ಇನ್ಮುಂದೆ ಬ್ಯಾಂಕಿನ ನಗದು ಕೌಂಟರ್‌ನಲ್ಲಿ ಕಾಯುವ ಸಮಯ ಉಳಿತಾಯವಾಗಲಿದೆ ಎಂದರು. ರಿಸೈಕ್ಲರ್ ಯಂತ್ರದ ಮೂಲಕ ಅತೀ ಶೀಘ್ರ ಹಾಗೂ ಸುಲಭವಾಗಿ ಹಣ ಜಮಾ ಮಾಡಬಹುದಲ್ಲದೇ ದಿನದ 24 ಗಂಟೆಯೂ ಈ ಸೇವೆ ಲಭ್ಯವಿರುವುದರಿಂದ ಯಾವುದೇ ಸಮಯದಲ್ಲಿ ಖಾತೆಗೆ ಹಣ ಜಮಾ ಮಾಡಲು ಸಾಧ್ಯವಾಗುವುದು ಎಂದೂ ಹೇಳಿದರು.
ಈ ಹಿಂದೆಯೇ ಜನತೆಗೆ ಎಟಿಎಂ ಸೌಲಭ್ಯವನ್ನು ಒದಗಿಸುವ ಮೂಲಕ ಉತ್ತಮ ಸೇವೆಗೆ ಹೆಸರಾಗಿದ್ದ ಬ್ಯಾಂಕ್ ರಿಸೈಕ್ಲರ್ ಯಂತ್ರ ಸ್ಥಾಪಿಸುವ ಮೂಲಕ ಸೇವೆ ನೀಡುವಲ್ಲಿ ಇನ್ನೊಂದು ಹೆಜ್ಜೆ ಮುಂದೆ ಇಟ್ಟಂತಾಗಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದೂ ಅವರು ಕರೆ ನೀಡಿದರು.
ಬ್ಯಾಂಕಿನ ಉಪಾಧ್ಯಕ್ಷ ಶೇಖ್ ಶಬ್ಬೀರ್ ಖಾದಿರ ಬಾಷಾ, ನಿರ್ದೇಶಕರಾದ ಅಬ್ದುಲ ಖಾಲಿಕ್ ಸೌದಾಗರ್, ಮಾಸ್ತಿ ಎಸ್. ಮೊಗೇರ, ಶ್ರೀಧರ ನಾಯ್ಕ, ಜುಬೇರ್ ಕೋಲಾ, ಇಮ್ತಿಯಾಜ್ ಜುಬಾಪು, ಜಾಫರ್ ಸಾಧಿಕ್ ಶಾಬಂದ್ರಿ, ಪರಿ ಹುಸೇನ್ ಹಾಗೂ ಬ್ಯಾಂಕಿನ ಪ್ರಧಾನ ಕಾರ್ಯ ನಿರ್ವಾಹಕ ಸುಭಾಷ ಎಂ. ಶೆಟ್ಟಿ, ಸಹಾಯಕ ಪ್ರಧಾನ ಕಾರ್ಯನಿರ್ವಾಹಕ ಶಂಭು ಹೆಗಡೆ, ಮುಖ್ಯ ಶಾಖೆ ವ್ಯವಸ್ಥಾಪಕ ಗಣಪತಿ ಪ್ರಭು ಉಪಸ್ಥಿತರಿದ್ದರು.