Advertisement

ಮರುಕಳಿಸುತ್ತಿರುವ ಬ್ಯಾಂಕಿಂಗ್‌ ವಂಚನೆ ಪ್ರಕರಣಗಳು

10:09 AM Mar 14, 2020 | mahesh |

ಕಷ್ಟಪಟ್ಟು ದುಡಿದು ಗಳಿಸಿ ಉಳಿಸಿದ ಅಲ್ಪಸ್ವಲ್ಪ ಹಣವನ್ನು ಸುರಕ್ಷಿತವಾಗಿರಿಸುವುದು ಹೇಗೆ? ಕಾಪಾಡಿಕೊಳ್ಳುವುದು ಹೇಗೆ? ಎಂಬೆಲ್ಲಾ ಪ್ರಶ್ನೆ ಬಂದಾಗ ನಮಗೆ ಮೊದಲು ನೆನಪಿಗೆ ಬರುವುದು ಬ್ಯಾಂಕುಗಳು. ಉಳಿತಾಯದ ವಿಷಯಕ್ಕೆ ಬಂದರೆ ಭಾರತೀಯರು ಬ್ಯಾಂಕುಗಳನ್ನೇ ಹೆಚ್ಚು ನಂಬುತ್ತಾರೆ. 2019ರ ಸೆಪ್ಟೆಂಬರ್‌ವರೆಗಿನ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಬ್ಯಾಂಕುಗಳಲ್ಲಿರುವ ಠೇವಣಿ ಹಣ 130.4 ಲಕ್ಷ ಕೋಟಿ ರೂಪಾಯಿ. ಇದರಲ್ಲಿ ಶೇ.62.5 (81.6 ಲಕ್ಷ ಕೋಟಿ ರೂ) ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳಲ್ಲಿದೆ. ನಮ್ಮ ಪಾಲಿಗೆ ಬ್ಯಾಂಕುಗಳೇ ಉಳಿತಾಯವನ್ನು ಸಂರಕ್ಷಿಸುವ ಪ್ರಮುಖ ತಾಣ.

Advertisement

1960ಕ್ಕೂ ಮುನ್ನ ದೇಶದ ಬ್ಯಾಂಕಿಂಗ್‌ ವ್ಯವಸ್ಥೆ ಖಾಸಗಿಯವರ ಕೈಯಲ್ಲಿತ್ತು. ಆಗ ಬ್ಯಾಂಕಿಂಗ್‌ ಸೇವೆ ಎಂಬುದು ಉಳ್ಳವರಿಗೆ ಮಾತ್ರ ಸೀಮಿತವಾಗಿತ್ತು. ಹಣವಿಲ್ಲದವರಿಗೆ ಈ ಸೇವೆಯ ಲಾಭ ಸರಿಯಾಗಿ ಸಿಗುತ್ತಿಲ್ಲ ಎಂಬ ಕೊರಗಿನಿಂದಾಗಿ ಈ ಕ್ಷೇತ್ರದ ರಾಷ್ಟ್ರೀಕರಣದ ಪರ್ವ ಪ್ರಾರಂಭಗೊಂಡಿತು.ಈಗ ಬ್ಯಾಂಕಿಂಗ್‌ ವ್ಯವಹಾರದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳದ್ದೇ ಸಿಂಹ ಪಾಲು. ಜೊತೆಗೆ ಖಾಸಗಿ ಬ್ಯಾಂಕುಗಳೂ ಸಹ ತಂತ್ರಜ್ಞಾನ ಆಧಾರಿತ ಅತ್ಯಾಧುನಿಕ ಸೇವೆ ನೀಡುವ ಮೂಲಕ ಜನ ಮನ್ನಣೆ ಗಳಿಸಿವೆ.

ಹಣವನ್ನು ಹೂಡಿಕೆ ಮಾಡುವಾಗ ಏನಾದರೂ ತಪ್ಪಾದರೆ ನಮಗೆ ನಷ್ಟವಾಗಬಹುದೆಂಬ ಹೆದರಿಕೆಯ ಸ್ವಭಾವ ನಮ್ಮದು. ಹೀಗಾಗಿ ನಮ್ಮ ಹಣವನ್ನು ಬ್ಯಾಂಕಿನಲ್ಲಿಟ್ಟರೆ ಕ್ಷೇಮ ಎಂದು ನಂಬಿದವರು ನಾವು . ಬ್ಯಾಂಕುಗಳು ನಮ್ಮ ಹಣವನ್ನು ಸಾಲ ಕೊಡುವುದು, ಹಿಂಪಡೆಯುವುದು ಈ ಎರಡೂ ಪ್ರಕ್ರಿಯೆಯಲ್ಲಿ ತೊಡಗಿಸುತ್ತವೆ.ಅಲ್ಲದೆ ಬ್ಯಾಂಕಿನವರು ನಮ್ಮ ಹಣವನ್ನು ವಿವಿಧೆಡೆ ಹೂಡಿಕೆ ಮಾಡುವುದರಲ್ಲಿ ಹೆಚ್ಚು ನಿಸ್ಸೀಮರು ಎಂಬೆಲ್ಲಾ ಭರವಸೆ ನಮ್ಮದು. ಆದರೆ ಕಳೆದ ಎರಡು ವರುಷಗಳಿಂದ ಜನತೆ ಬ್ಯಾಂಕುಗಳ ಮೇಲಿಟ್ಟ ಈ ನಂಬಿಕೆ ಅಲ್ಲಾಡತೊಡಗಿದೆ. ಕೆಲವರಿಗಷ್ಟೇ ಸಾಲ, ಹೂಡಿಕೆಯಲ್ಲಿ ವೈವಿಧ್ಯತೆ ಇಲ್ಲದಿರುವುದು, ವಸೂಲಾಗದ ಸಾಲ, ಅನುತ್ಪಾದಕ ಸಾಲವನ್ನು ಮುಚ್ಚಿಡಲು ಮತ್ತೂಂದು ಬ್ಯಾಂಕಿನಿಂದ ಸಾಲ, ಗ್ರಾಹಕರಿಂದ ಸಂಗ್ರಹಿಸುವ ಠೇವಣಿಯನ್ನು ಹೇಗೆ ಬಳಸುತ್ತಾರೆ ಎಂಬ ಮಾಹಿತಿಯೇ ಇಲ್ಲದಿರುವುದು, ಬೇಲಿಯೇ ಹೊಲ ಮೇಯ್ದ ಸಂಗತಿಗಳು ಗ್ರಾಹಕನು ಬ್ಯಾಂಕಿನ ಮೇಲಿಟ್ಟಿರುವ ಭರವಸೆಗಳನ್ನು ಹುಸಿಗೊಳಿಸುತ್ತಿವೆ. ಆರ್‌ಬಿಐಯ ಪ್ರಕಾರ 2019ರಷ್ಟಕ್ಕಾಗುವಾಗ ಸುಮಾರು 6801 ಬ್ಯಾಂಕ್‌ ವಂಚನೆ ಪ್ರಕರಣಗಳು ದಾಖಲಾಗಿವೆ. ಈ ವಂಚನೆಯ ಮೊತ್ತ ಸುಮಾರು 71,500 ಕೋಟಿ ರೂಪಾಯಿಗಳು. ದುರದೃಷ್ಟ ಅಂದರೆ ಇಂತಹ ಪ್ರಕರಣಗಳು ಬಯಲಿಗೆ ಬರುವಾಗ ಕೆಲವು ವರುಷಗಳೇ ಸಂದು ಹೋಗಿರುತ್ತವೆ.

2015ರಲ್ಲಿ ಆರ್‌ಬಿಐ ಯೆಸ್‌ ಬ್ಯಾಂಕಿನ ಆಸ್ತಿಯ ಗುಣಮಟ್ಟವನ್ನು ಪರಾ ಮರ್ಶೆ ಮಾಡಿದಾಗ ಅಸಲಿ ಬಂಡವಾಳ ಬಯಲಾಗಿತ್ತು. ಯೆಸ್‌ ಬ್ಯಾಂಕ್‌ 2017ರಲ್ಲಿ ತನ್ನ ವಸೂಲಾಗದ ಸಾಲ 2018 ಕೋಟಿ ರೂಪಾಯಿ ಎಂದು ಘೋಷಿಸಿದ್ದರೂ ವಾಸ್ತವವಾಗಿ 8,373 ಕೋಟಿ ರೂಪಾಯಿಗೇರಿದ್ದನ್ನು ಆರ್‌ಬಿಐ ಗಮನಿಸಿತ್ತು. ಆಗಲೇ ಯೆಸ್‌ ಬ್ಯಾಂಕು ಒಟ್ಟು 6,355 ಕೋಟಿ ರೂಪಾಯಿಗಳ ಲೆಕ್ಕವನ್ನು ಮುಚ್ಚಿ ಹಾಕಿತ್ತು. ಇಂತಹ ಪ್ರಕರಣಗಳಾಗುವಾಗ ಹೆಚ್ಚಿನ ಸಮಯವು ಈ ವಂಚನೆಯ ಬಗ್ಗೆಯೇ ವ್ಯಯವಾಗುತ್ತದೆ. ಹೇಗಾಯ್ತು? ಏಕಾಯಿತು? ಯಾರು ಇದಕ್ಕೆ ಜವಾಬ್ದಾರಿ? ಎಂಬೆಲ್ಲಾ ಚರ್ಚೆ ನಡೆಯುತ್ತದೆ. ಏನಾಗಬೇಕು ? ಪರಿಹಾರ ಹೇಗೆ? ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ತಡೆಯುವುದು ಹೇಗೆ? ಎಂಬೆಲ್ಲಾ ವಿಷಯದ ಬಗ್ಗೆ ಚಿಂತನೆ ನಡೆಯುವುದು ಅಷ್ಟಕ್ಕಷ್ಟೆ. ಮತ್ತೆ ಈ ಬಗ್ಗೆ ಚಿಂತನೆ ಪ್ರಾರಂಭವಾಗುವುದು ಮತ್ತೂಂದು ಇಂತಹ ಸಮಸ್ಯೆ ಎದು ರಾದಾಗ ಮಾತ್ರ. ಇಂತಹ ವಂಚನೆ ಸಮಸ್ಯೆಯನ್ನು ಬ್ಯಾಂಕಿಂಗ್‌ ಕ್ಷೇತ್ರ ಹಿಂದೆಯೂ ಕಂಡಿತ್ತು. ಇವತ್ತೂ ಕಾಣುತ್ತಿದ್ದೇವೆ. ಮುಂದೆಯೂ ಆಗಬಹುದೇನೋ?

ದೊಡ್ಡ ಸಾಲಗಾರರು, ಕಾರ್ಪೊರೇಟ್‌ ಸಂಸ್ಥೆಗಳು ಬ್ಯಾಂಕಿನಿಂದ ಸಾಲ ತಗೊಂಡು ವಿದೇಶಕ್ಕೆ ಓಡಿ ಹೋದ ಪ್ರಕರಣಗಳು ನಮ್ಮ ಕಣ್ಣ ಮುಂದೆಯೇ ನಡೆದಿ ವೆ. ಈ ಸಾಲಗಾರರು ತಾವು ದೇಶದ ಕಾನೂನಿಗಿಂತಲೂ ಮೇಲೆ ಎಂದು ಭಾವಿಸಿದ್ದಾರೆ.ಇವರು ನಿಜವಾಗಿ ದೇಶದ ಕಾನೂನನ್ನು ಸರಿಯಾಗಿ ಅರಿತವರು, ಅದರಲ್ಲಿನ ಲೋಪದೋಷಗಳನ್ನು ತಿಳಿದವರು. ಕಾನೂನಿನ ಲೋಪಗಳನ್ನು ತಮ್ಮ ಸಂರಕ್ಷಣೆಗೆ ಹೇಗೆ ಬಳಸಿಕೊಳ್ಳಬಹುದೆಂಬುದು ಅವರಿಗೆ ಗೊತ್ತಿದೆ. ಇದಕ್ಕೆ ವ್ಯತಿ ರಿಕ್ತ ವಾಗಿ ಚಿಕ್ಕ ಪುಟ್ಟ ಸಾಲ ತಗೊಂಡವರಿಗೆ ಸಾಲವನ್ನು ಹಿಂತಿರುಗಿಸಲಿಲ್ಲವೆಂಬ ಚಿಂತೆ ಕಾಡುತ್ತಲೇ ಇರುತ್ತದೆ. ಆದರೆ ದೊಡ್ಡ ಸಾಲಗಾರರಿಗೆ ಈ ಹೆದರಿಕೆ ಇಲ್ಲವೇ ಇಲ್ಲ. ಸಾಲ ಬಾಕಿ ಇದ್ದರೆ ಅದು ಕೊಂಡವನ ಸಮಸ್ಯೆ. ಒಂದು ಕೋಟಿ ಸಾಲವನ್ನು ಪಡೆದುಕೊಳ್ಳುವುದು ಬ್ಯಾಂಕಿನವರ ಸಮಸ್ಯೆ. ಇನ್ನು ದೇಶದಿಂದ ಓಡಿ ಹೋದವರನ್ನು ದೇಶಕ್ಕೆ ಕರೆತರಲು ಹರಸಾಹಸ ಪಡುವುದು ನಮಗೆ ಗೊತ್ತಿದ್ದದ್ದೇ. ಇವತ್ತು ಬರುತ್ತಾರೆ, ನಾಳೆ ಬರಬಹುದು ಅಥವಾ ಬರುತ್ತಾರೋ? ಬಂದರೆ ತಾವು ನೀಡಬೇಕಾದ ಹಣವನ್ನು ವಾಪಾಸು ಮಾಡುತ್ತಾರಾ? ಎಷ್ಟು ವರ್ಷಗಳು ಬೇಕಾಗಬಹುದು? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರವೇ ಇಲ್ಲ. ಸಮಸ್ಯೆಗೆ ಸಿಲುಕಿರುವ ಬ್ಯಾಂಕು ಸರಕಾರಧ್ದೋ? ಸಹಕಾರಧ್ದೋ? ಅಥವಾ ಖಾಸಗಿಯವರಧ್ದೋ? ಕೆಡುಕುಗಳಾದಾಗ ನೆರವಿಗೆ ಬರಬೇಕಾದ ಅನಿವಾರ್ಯತೆ ಸರಕಾರಕ್ಕೆ. ವಂಚನೆ ಮಾಡುವವರು ಮಾಡಿಯಾಗಿದೆ. ಪ್ರಾಮಾಣಿಕ ಸಾಲಗಾ ರರಿಗೂ ನಿತ್ಯ ರಗಳೆ. ಸ್ಥಿತಿ ಇದೇ ರೀತಿ ಮುಂದುವರಿದರೆ ಬ್ಯಾಂಕಿನಲ್ಲಿಟ್ಟ ಹಣ ಎಷ್ಟು ಸುರಕ್ಷಿತ? ಭರವಸೆ ಎಲ್ಲಿ? ನೂರಾರು ಬ್ಯಾಂಕಿಂಗ್‌ ವಂಚನೆ. ನಾಲ್ಕಾರು ಮಂದಿಗೆ ಮಾತ್ರ ಶಿಕ್ಷೆ. ಎಂಥ ವಿಪರ್ಯಾಸ?

Advertisement

ಸಂರಕ್ಷಣೆ ನಮ್ಮ ಜವಾಬ್ದಾರಿ
ಠೇವಣಿದಾರರ ಹಿತರಕ್ಷಣೆಗೆ ಪರಿಣಾಮಕಾರಿಯಾದ ನೀತಿಯೊಂದೇ ಪರಿಹಾರ. ಗ್ರಾಹಕರಾದ ನಾವು ನಮ್ಮಲ್ಲಿರುವ ಎಲ್ಲಾ ಹಣವನ್ನು ಒಂದೆಡೆ ಇಡುವುದಕ್ಕಿಂತ ಐದಾರು ಬ್ಯಾಂಕುಗಳಲ್ಲಿ ವಿಭಜಿಸಿ ಇಡುವುದು ಜಾಣತನ. ಎಲ್ಲ ಹಣ ಒಂದೆಡೆ ಇಟ್ಟು ಆ ಬ್ಯಾಂಕು ಮುಳುಗಿದರೆ ನಮಗೆ ಸಿಗುವ ಹಣ ಕೇವಲ 5 ಲಕ್ಷ ಮಾತ್ರ. ಈ ಪರಿಹಾರ ಠೇವಣಿಯ ಪ್ರಮಾಣಕ್ಕೆ ಅನುಗುಣವಾಗಿ ಇರಬೇಕಾದ ಅಗತ್ಯ ಇದೆ. ಇಲ್ಲದಿದ್ದರೆ ಬ್ಯಾಂಕುಗಳ ಮೇಲೆ ಭರವಸೆ ಇಡುವುದು ಅಸಾಧ್ಯದ ಮಾತು. ಠೇವಣಿದಾರರ ಹಿತರಕ್ಷಣೆಯನ್ನು ಕಾಪಾಡಲು 2004ರಲ್ಲಿ ಸಂಕಷ್ಟದಲ್ಲಿದ್ದ ಗ್ಲೋಬಲ್‌ ಟ್ರಸ್ಟ್‌ ಬ್ಯಾಂಕನ್ನು ಓರಿಯಂಟಲ್‌ ಬ್ಯಾಂಕ್‌ ಆಫ್ ಕಾಮರ್ಸ್‌ನೊಂದಿಗೆ ಆರ್‌ಬಿಐ ವಿಲೀನಗೊಳಿಸಿತ್ತು. ಯೆಸ್‌ ಬ್ಯಾಂಕ್‌ನ ವಿಚಾರದಲ್ಲೂ ಕೇಂದ್ರೀಯ ಬ್ಯಾಂಕ್‌ನ ಮಧ್ಯಪ್ರವೇಶವಾಗಿದೆ. ಹೆಚ್ಚು ಪ್ರಮಾಣದಲ್ಲಿ ಮಾರುಕಟ್ಟೆಗೆ ಸಾಲವನ್ನು ಸೃಷ್ಟಿಸಿ ಹರಿದು ಬಿಡುವ ಸಾಲ ನೀತಿಗೆ ಇಂತಹ ಕಷ್ಟಗಳು ತೊಡಕಾಗಲಿವೆ. ಸಾಲ ಕೊಟ್ಟವ ಕೋಡಂಗಿ… ಎಂಬ ಗಾದೆ ಮತ್ತೆ ಮತ್ತೆ ನಿಜವಾಗುತ್ತಿದೆ. ವಂಚನೆಗಳನ್ನು ತಡೆಯುವಲ್ಲಿ ಪರಿಣಾಮಕಾರಿ ನಿಯಂತ್ರಣವೇ ಮುಂದಿರುವ ದಾರಿ.

– ಡಾ| ರಾಘವೇಂದ್ರ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next