ಉಡುಪಿ: ಸರಕಾರಿ ಶಾಲಾ ಶಿಕ್ಷಕರಾಗಿ ಹಲವು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳಿಗೆ ಈಗ ಹಿಂಬಡ್ತಿಯ ಆತಂಕ ಎದುರಾಗಿದೆ. 1-7ನೇ ತರಗತಿವರೆಗೆ ಭೋಧಿಸುತ್ತಿದ್ದ ಶಿಕ್ಷಕರು ಇನ್ನು ಮುಂದೆ 5ನೇ ತರಗತಿಯವರೆಗೆ ಮಾತ್ರ ಬೋಧಿಸಬೇಕಾಗುತ್ತದೆ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ 7ನೇ ತರಗತಿವರೆಗೆ ಬೋಧಿಸುತ್ತಿರುವ ಶಿಕ್ಷಕರಿಗೆ ಮುಂಬಡ್ತಿ ಇಲ್ಲದೆ ಹೊಸ ನೇಮಕಾತಿಗೆ ಸರ್ಕಾರ ಕ್ರಮ ವಹಿಸಿರುವುದು ಶಿಕ್ಷಕರಲ್ಲಿ ತೀವ್ರ ಅಸಮಾಧಾನ ಉಂಟುಮಾಡಿದೆ.
15 ಸಾವಿರ ಪದವೀದರ ಶಿಕ್ಷಕರ ನೇಮಕ ಪ್ರಕ್ರಿಯೆ ಶುರುವಾಗಿದೆ. ಆದರೆ ಸೇವೆಯಲ್ಲಿರುವ ಶಿಕ್ಷಕರಲ್ಲಿ ಅನೇಕರು ಪದವೀದರಿದ್ದರೂ ಅವರಿಗೆ ನಿಯಮಾನುಸಾರ ಇಲಾಖೆಯಿಂದ ಪದೋನ್ನತಿಗೆ ಪರೀಕ್ಷೆ ನಡೆಸುತ್ತಿಲ್ಲ. ಬದಲಾಗಿ ಮುಂದಿನ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನವಾಗುತ್ತಿರುವ ಹಿನ್ನೆಲೆಯಲ್ಲಿ 1-7 ರ ಬದಲಿಗೆ ಪೂರ್ವ ಪ್ರಾಥಮಿಕ (ಎಲ್.ಕೆ.ಜಿ.,ಯು.ಕೆ.ಜಿ.) ರಿಂದ 5ನೇ ತರಗತಿ ವರೆಗೆ ಈ ಶಿಕ್ಷಕರನ್ನು ಸೀಮಿತಗೊಳಿಸಲು ಸಿದ್ಧತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಿ ಶಾಲೆಗಳಲ್ಲಿ ಪದವೀದರ ಪ್ರತಿಭಾನ್ವಿತ ಶಿಕ್ಷಕರ ಕೊರತೆಯಿದೆ. ಈ ಹಿಂದೆ 10 ಸಾವಿರ ಶಿಕ್ಷಕರ ನೇಮಕಾತಿ ನಡೆಸಿದಾಗ ಸುಮಾರು 3,200 ಶಿಕ್ಷಕರನ್ನು ಮಾತ್ರ ಭರ್ತಿಮಾಡಿಕೊಳ್ಳಲು ಸಾಧ್ಯವಾಗಿತ್ತು. ಹೀಗಾಗಿ ಈಗಾಗಲೇ ಬೋಧನೆ ನಡೆಸುತ್ತಿರುವ ಶಿಕ್ಷಕರಿಗೆ ನಿಯಮಾನುಸಾರ ಪರೀಕ್ಷೆ ನಡೆಸಿ ಅವರನ್ನು ಪದವೀಧರ ಶಿಕ್ಷಕರ ಸಾಲಿಗೆ ಸೇರಿಸಬೇಕು. ಹೊಸ ನೇಮಕದ ಮೊದಲೇ ಿದನ್ನು ಮಾಡಬೇಕು. ಹೊಸ ನೇಮಕ ಅನಂತರ ಹುದ್ದೆಗಳು ಖಾಲಿ ಇಲ್ಲದಿದ್ದರೆ ಪದೋನ್ನತಿ ನೀಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪ್ರತಿಭಾನ್ವಿತ ಪದವೀದರ ಶಿಕ್ಷಕರ ಕೊರತೆ ನೀಗಿಸಲು ಸೇವಾ ನಿರತ ಶಿಕ್ಷಕರಿಗೆ ಮೊದಲ ಆದ್ಯತೆ ನೀಡಬೇಕು ಎಂಬುದು ಶಿಕ್ಷಕರ ಆಗ್ರಹವಾಗಿದೆ.
ಪದವಿಯಾಗಿದ್ದರೂ ಪದವೀದರ ಶಿಕ್ಷಕರಲ್ಲ: ಸರ್ಕಾರಿ ಶಾಲೆಯಲ್ಲಿ ಐದು ವರ್ಷಕ್ಕಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಾ ಬಂದಿರುವ ಪದವಿಯ ಆನಂತರ ಬಿ.ಇಡಿ ಪೂರೈಸಿರುವ ಶಿಕ್ಷಕರಿಗೆ ಪದವೀದರ ಶಿಕ್ಷಕರ ಪಟ್ಟ ಸಿಕ್ಕಿಲ್ಲ. ಇದಕ್ಕೆ ಶಿಕ್ಷಕರಲ್ಲಿನ ಕೆಲವು ಗೊಂದಲಗಳು ಕಾರಣವಾಗಿದೆ. ಹಲವು ಶಿಕ್ಷಕರು ( ಈಗಾಗಲೇ ಬಿ.ಇಡಿ ಮಾಡಿಕೊಂಡಿರುವವರು) ಪದೋನ್ನತಿಗೆ ನೇರ ನೇಮಕಾತಿ ನಡೆಸಬೇಕು ಎಂಬ ಆಗ್ರಹ ಮಾಡುತ್ತಿದ್ದಾರೆ. ಆದರೆ ಡಿ.ಇಡಿ ಮಾಡಿಕೊಂಡಿರುವ (ಬಿ.ಇಡಿ ಆದವರೂ ಇದ್ದಾರೆ) ಕೆಲವು ಹಿರಿಯ ಶಿಕ್ಷಕರು ಪದವೀದರ ಶಿಕ್ಷಕರಾಗಿ ಪದೋನ್ನತಿಗೆ ಪರೀಕ್ಷೆ ನಡೆಸುವುದು ಬೇಡ. ನೇರ ಸೇವಾಹಿರಿತನದ ಆಧಾರಲ್ಲಿ ಬಡ್ತಿ ನೀಡಬೇಕು ಎನ್ನುವ ವಾದವನ್ನು ಇಲಾಖೆಯ ಮುಂದಿಟ್ಟಿದ್ದಾರೆ. ಶಿಕ್ಷಕರ ಸಂಘವು ಈ ವಿಷಯದಲ್ಲಿ ಸ್ವಲ್ಪ ಮಟ್ಟಿನ ಮೌನವನ್ನೇ ವಹಿಸಿದೆ. ಹೀಗಾಗಿ ಸೇವಾ ನಿರತರಲ್ಲಿ ಅರ್ಹರಿಗೂ ಪದವೀದರ ಶಿಕ್ಷಕರಾಗಲೂ ಆಗುತ್ತಿಲ್ಲ ಎನ್ನುವುದು ಅವರ ಅಳಲು.
ಪರೀಕ್ಷೆ ಪ್ರಸ್ತಾವ ಇಲ್ಲ: ಹಾಲಿಶಿಕ್ಷಕರಿಗೆಬಡ್ತಿ ಸಂಬಂಧ ಪರೀಕ್ಷೆ ಪ್ರಸ್ತಾವನೆ ಇಲ್ಲ.ಐದನೇ ತರಗತಿ ವರೆಗೆಬೋಧಿಸಲಿರುವ ಶಿಕ್ಷಕರು ಏಳನೇ ತರಗತಿಯ ವರೆಗೆ ಹೆಚ್ಚುವರಿಯಾಗಿ ಬೋಧಿಸುತ್ತಿದ್ದರೆ, ಹೊಸದಾಗಿ ಹುದ್ದೆಭರ್ತಿಯಾದ ಅನಂತರ 5ನೇ ತರಗತಿವರೆಗೆ ಬೋಧಿಸಬೇಕಾಗುತ್ತದೆ.
- ಡಾ| ಆರ್.ವಿಶಾಲ್, ಸಾರ್ವಜನಿಕ ಶಿಕ್ಷಣಇಲಾಖೆ ಆಯುಕ್ತ
ಕಡೆಗಣನೆ ಸರಿಯಲ್ಲ: ಪ್ರಾಥಮಿಕ ಶಾಲೆಯಲ್ಲಿರುವ ಪದವೀಧರ ಶಿಕ್ಷಕರಿಗೆ ಪದೋನ್ನತಿ ನೀಡುವ ಸಂಬಂಧ ಪರೀಕ್ಷೆ ನಡೆಸಲು ಈಗಾಗಲೇ ಹಲವುಬಾರಿ ಸರಕಾರಕ್ಕೆ ಮನವಿ ಮಾಡಿದ್ದೇವೆ. ಮೂರು ನೇಮಕಾತಿ ಸಂದರ್ಭದಲ್ಲೂ ಕಡೆಗಣಿಸಿರುವುದು ಸರಿಯಲ್ಲ.
- ಚಂದ್ರಶೇಖರ ನೂಗ್ಲಿ, ಸ. ಪ್ರಾ.ಶಾ.ಶಿಕ್ಷಕರ ಸಂಘದ ರಾಜ್ಯ ಪ್ರ.ಕಾರ್ಯದರ್ಶಿ
ಮುಕ್ತ ಸ್ಪರ್ಧೆ ಮಾಡಬೇಕು: ಪದವೀಧರ ಶಿಕ್ಷಕರ ಹುದ್ದೆಗೆ ಸರ್ಕಾರ ನಡೆಸಲಿರುವ ನೇಮಕಾತಿಯಲ್ಲಿ ಈಗಾಗಲೇ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಅರ್ಜಿ ಸಲ್ಲಿಸಿ ಪರೀಕ್ಷೆ ಬರೆಯಬಹುದು. ಆದರೆ, ಅವರನ್ನು ಸೇವಾ ನಿರತರ ಶಿಕ್ಷಕರಾಗಿ ಪರಿಗಣಿಸುವುದಿಲ್ಲ. ಬದಲಾಗಿಹೊಸ ಅಭ್ಯರ್ಥಿಯಾಗಿಯೆ ಪರಿಗಣಿಸುತ್ತೇವೆ. ಸೇವಾ ನಿರತರ ಶಿಕ್ಷಕರಿಗೆ ಸದ್ಯ ಪದೋನ್ನತಿ ಪರೀಕ್ಷೆ ನಡೆಸುವಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಡಾ| ಆರ್.ವಿಶಾಲ್ ಮಾಹಿತಿ ನೀಡಿದರು.
-ರಾಜುಖಾರ್ವಿ ಕೂಡೇರಿ