ಇದುವರೆಗೆ ಕೇರಳ-ಕರ್ನಾಟಕ ಗಡಿಭಾಗದಲ್ಲಿರುವ, ಆಡಳಿತಾತ್ಮಕವಾಗಿ ಕೇರಳಕ್ಕೆ ಸೇರಿರುವ ಕನ್ನಡ ಶಾಲೆಗಳ ವಿದ್ಯಾರ್ಥಿಗಳು ಮಾತ್ರ ಎದುರಿಸುತ್ತಿದ್ದ ಸಮಸ್ಯೆ ಈಗ ಮಹಾರಾಷ್ಟ್ರ -ಕರ್ನಾಟಕ ಗಡಿಭಾಗದ, ರಾಜ್ಯ ವಿಂಗಡನೆಯ ಲೆಕ್ಕದಲ್ಲಿ ಮಹಾರಾಷ್ಟ್ರಕ್ಕೆ ಸೇರಿರುವ ಕನ್ನಡ ಶಾಲೆಗಳ ಚಿಣ್ಣರು ಎದುರಿ ಸಲಾರಂಭಿಸಿದ್ದಾರೆ. ಈ ಭಾಗದ ಸಾಂಗ್ಲಿ ಮತ್ತು ಸೊಲ್ಲಾಪುರ ಜಿಲ್ಲೆಗಳ ಕನ್ನಡ ಶಾಲೆಗಳಿಗೆ ಮಹಾರಾಷ್ಟ್ರ ಸರಕಾರವು 24 ಶಿಕ್ಷಕರನ್ನು ನೇಮಕ ಮಾಡಿದ್ದು, ಇವರಲ್ಲಿ 7 ಮಂದಿ ಮಾತ್ರ ಕನ್ನಡ ಬಲ್ಲವರು; ಇನ್ನುಳಿದ ಶಿಕ್ಷಕರಿಗೆ ಕನ್ನಡದ ಗಂಧಗಾಳಿಯೇ ಇಲ್ಲ ಎಂಬುದೇ ಮಕ್ಕಳ ಸಮಸ್ಯೆಗೆ ಕಾರಣ. ಮಹಾರಾಷ್ಟ್ರ ಸರಕಾರದ ಕನ್ನಡ, ಕರ್ನಾಟಕ ವಿರೋಧಿ ನೀತಿ-ನಿಲುವುಗಳಿಗೆ ಈ ನೇಮಕಾತಿ ಹೊಸ ಸೇರ್ಪಡೆಯಂತಿದೆ.
ಈ ಹಿಂದೆ ಕಾಸರಗೋಡು ಕಡೆಯ ಅನೇಕ ಕನ್ನಡ ಶಾಲೆಗಳಲ್ಲಿ ಇಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಕನ್ನಡ ಬಾರದ, ಕೇವಲ ಮಲಯಾಳ ಮಾತ್ರ ಬಲ್ಲ ಶಿಕ್ಷಕರ ನೇಮಕಾತಿಯಿಂದ ಕನ್ನಡ ಶಾಲೆಗಳ ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದರು. ಮಕ್ಕಳೇ ಮುಂದೆ ನಿಂತು ಇಂತಹ ನೇಮಕಾತಿಯನ್ನು ತೀವ್ರವಾಗಿ ಪ್ರತಿಭಟಿಸಿ ಶಿಕ್ಷಕರು ಹಿಮ್ಮರಳಲು ಕಾರಣವಾಗಿದ್ದರು ಎಂಬುದು ಕೂಡ ಉಲ್ಲೇಖನೀಯ. ಈಗ ಇಂಥದ್ದೇ ಪರಿಸ್ಥಿತಿ ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿ ನಿರ್ಮಾಣವಾಗಿದೆ. ಜತ್ ತಾಲೂಕಿನ ಶಾಲೆಗಳಿಗೆ 11 ಮತ್ತು ಸೊಲ್ಲಾಪುರ ಜಿಲ್ಲೆಯ ಶಾಲೆಗಳಿಗೆ 13 ಶಿಕ್ಷಕರ ನೇಮಕವಾಗಿದೆ. ಈ 24 ಮಂದಿ ಶಿಕ್ಷಕರ ಪೈಕಿ 7 ಮಂದಿಯನ್ನು ಬಿಟ್ಟರೆ ಉಳಿದ ಶಿಕ್ಷಕರಿಗೆ ಕನ್ನಡ ತಿಳಿದಿಲ್ಲ; ಅವರು ಉರ್ದು ಮತ್ತು ಮರಾಠಿ ಮಾತ್ರ ಬಲ್ಲವರು. ಈ ಶಿಕ್ಷಕರು ಕನ್ನಡ ಮಾತ್ರ ಬಲ್ಲ ಅಥವಾ ಉರ್ದು ಯಾ ಮರಾಠಿಯನ್ನು ಅರೆಬರೆ ತಿಳಿದಿರುವ ಮಕ್ಕಳಿಗೆ ಆ ಭಾಷೆಗಳಲ್ಲಿ ವಿವಿಧ ವಿಷಯಗಳ ಪಾಠ ಮಾಡಿದರೆ ಮಕ್ಕಳು ಅದನ್ನು ಹೇಗೆ ಅರ್ಥೈಸಿಕೊಂಡಾರು, ಅರಗಿಸಿಕೊಂಡಾರು?
ನೆರೆಯ ಕೇರಳದಂತೆ ಮಹಾರಾಷ್ಟ್ರ ಸರಕಾರ ಕೂಡ ಹಿಂದೆ ಕನ್ನಡಿಗರನ್ನು ಕೆಣಕುವಂತಹ ನೀತಿ-ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಹಿಂದೆ ಬಿದ್ದಿಲ್ಲ. ಈಗಿನದ್ದು ಮಕ್ಕಳನ್ನು ಬಾಧಿಸುವ ನಡೆಯಾದರೆ ಜನಸಾಮಾನ್ಯರು ತೊಂದರೆಗೆ ಈಡಾಗಬಲ್ಲಂತಹ ನಿಲುವುಗಳನ್ನು ಉಭಯ ನೆರೆರಾಜ್ಯಗಳು ಅನುಸರಿಸಿದ್ದಿದೆ. ಮಲಯಾಳ ಅಥವಾ ಮರಾಠಿ ಮಾತ್ರ ಬಲ್ಲ ಅಧಿಕಾರಿಗಳ ನೇಮಕ, ಮಲಯಾಳ ಅಥವಾ ಮರಾಠಿಯಲ್ಲಿ ಮಾತ್ರ ಸುತ್ತೋಲೆಗಳನ್ನು ಹೊರಡಿಸುವುದು ಇತ್ಯಾದಿ ಇದಕ್ಕೆ ಉದಾಹರಣೆ. ಈಗಿನದ್ದು ಅದಕ್ಕೆ ಇನ್ನೊಂದು ಸೇರ್ಪಡೆ.
ರಾಜ್ಯಗಳ ಭಾಷಾಧಾರಿತ ಮರುವಿಂಗಡನೆ ಆದ ಸಂದರ್ಭದಲ್ಲಿ ನಡೆದು ಹೋದಂತಹ ಅಪಸವ್ಯಗಳು ಇವಕ್ಕೆಲ್ಲ ಮೂಲ ಕಾರಣ ಎಂದರೆ ತಪ್ಪಾಗದು. ಇಂತಹ ಸಂದರ್ಭಗಳಲ್ಲಿ ಉಭಯ ರಾಜ್ಯಗಳ ಸರಕಾರಗಳು ಪರಸ್ಪರ ಹೊಂದಾಣಿಕೆ, ಅನುಸರಣೆಯ ನಿಲುವನ್ನು ಹೊಂದಿರುವುದು ಅಪೇಕ್ಷಣೀಯ.
ಕಾಸರಗೋಡಿನಲ್ಲಿ ನಡೆದಂತೆಯೇ ಮಹಾರಾಷ್ಟ್ರ ಸರಕಾರದ ಈಗಿನ ನಡೆಯನ್ನು ಗಡಿಭಾಗದ ಕನ್ನಡ ಹೋರಾಟಗಾರರು ಬಲವಾಗಿ ವಿರೋಧಿಸಿದ್ದಾರೆ. ಈ ಸಂಬಂಧ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಪತ್ರವನ್ನೂ ಬರೆಯಲಾಗಿದೆ. ಈಗ ಸರಕಾರ ತಡ ಮಾಡದೆ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು. ಕಾನೂನು ಮತ್ತು ರಾಜತಾಂತ್ರಿಕ ರೀತಿಯಲ್ಲಿ ಸೂಕ್ತ ನಿರ್ಣಯಗಳನ್ನು ತೆಗೆದುಕೊಂಡು ಮಹಾರಾಷ್ಟ್ರ ಸರಕಾರದ ಜತೆಗೆ ವ್ಯವಹರಿಸಬೇಕು. ತೊಂದರೆಗೀಡಾದ ಕನ್ನಡ ಭಾಷಿಕ ಮಕ್ಕಳ ಹಿತವನ್ನು ಕಾಪಾಡುವುದಕ್ಕೆ ವಿಳಂಬ ಬೇಡ.