ಬೆಂಗಳೂರು: ಹದಿನೈದು ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಈ ಮಾಸಾಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ನವೆಂಬರ್-ಡಿಸೆಂಬರ್‌ನಲ್ಲಿ ಹೊಸದಾಗಿ ಮತ್ತೆ ಶಿಕ್ಷಕರ ನೇಮಕ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ರಾಜು ಗೌಡ ಸಹಿತ ಹಲವು ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಅವರು, ನ.6ರಂದು ಟಿಇಟಿ ನಡೆಸಿ ಮುಂದಿನ ವರ್ಷದ ಜನವರಿ ಅಥವಾ ಫೆಬ್ರವರಿಯಲ್ಲಿ ಮತ್ತಷ್ಟು ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ 25,813 ಶಿಕ್ಷಕರ ಹುದ್ದೆ ಖಾಲಿ ಇದ್ದು, 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಅದರಲ್ಲಿ ಐದು ಸಾವಿರ ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳು ಸೇರಿವೆ. ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹುದ್ದೆಗಳು ಖಾಲಿ ಇರುವ ಕಾರಣ 27 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಪ್ರಸ್ತುತ ವರ್ಷ 5,519 ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ತರಾಟೆ:
ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆ ಕುರಿತಂತೆ ಗಂಭೀರ ಚರ್ಚೆ ನಡೆದು, ವಿಪಕ್ಷ ಕಾಂಗ್ರೆಸ್ ಸದಸ್ಯರು ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಶಿಕ್ಷಕರ ಸಮಸ್ಯೆ ಎಲ್ಲ ಕಡೆಗಳಲ್ಲೂ ಇದೆ. ಕೆಲವು ಪ್ರದೇಶಗಳಲ್ಲಿ 85 ಮಕ್ಕಳಿಗೆ ಒಬ್ಬ ಶಿಕ್ಷಕ ಪಾಠ ಮಾಡುವಂತಹ ಪರಿಸ್ಥಿತಿ ಇದೆ. ಸರಕಾರ ಕೂಡಲೇ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯಾದ್ಯಂತ ಶಾಲಾ ಕೊಠಡಿಗಳ ಸಮಸ್ಯೆ ಕುರಿತಂತೆ ವಿಶೇಷ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ. ಪ್ರಸಕ್ತ ಅಧಿವೇಶನದಲ್ಲಿ ಅರ್ಧ ಗಂಟೆ ಕಾಲಾವಧಿ ಚರ್ಚೆಯಲ್ಲಿ ಈ ವಿಷಯ ಪ್ರಸ್ತಾವಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಮ್ಮತಿಸಿದರು.