Advertisement

ಶೀಟ್ ಬಿದ್ದು ಗಾಯಗೊಂಡಿದ್ದ ವಿದ್ಯಾರ್ಥಿಗಳ ಚೇತರಿಕೆ

11:26 PM Jul 30, 2019 | mahesh |

ಪುತ್ತೂರು: ಸೋಮವಾರ ರಾತ್ರಿ ಬೀಸಿದ ಸುಂಟರಗಾಳಿಗೆ ಉರ್ಲಾಂಡಿಯಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ಅನಂತರದ ವಿದ್ಯಾರ್ಥಿ ನಿಲಯದ ಛಾವಣಿಯ ಸಿಮೆಂಟ್ ಶೀಟ್ ಬಿದ್ದು ಗಾಯಗೊಂಡು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖ ಲಾಗಿರುವ ವಿದ್ಯಾರ್ಥಿಗಳನ್ನು ಮಂಗಳ ವಾರ ದ.ಕ. ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ| ಸೆಲ್ವಮಣಿ ಆರ್‌. ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

Advertisement

ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ ಅವರು, ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ವಿದ್ಯಾರ್ಥಿಗಳ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಂಡರು.

ಬಳಿಕ ಮಾಧ್ಯದವರ ಜತೆ ಮಾತನಾಡಿದ ಡಾ| ಸೆಲ್ವಮಣಿ ಆರ್‌., ಘಟನೆಯ ಪರಿಣಾಮದ ಕುರಿತು ಪರಿಶೀಲನೆ ನಡೆಸಿದ್ದೇನೆ. ಪುತ್ತೂರು ಸಹಾಯಕ ಆಯುಕ್ತರ ಜತೆ ಸಂಪರ್ಕದಲ್ಲಿದ್ದು, ಮಾಹಿತಿ ಪಡೆದುಕೊಂಡಿದ್ದೇನೆ. ವಿದ್ಯಾರ್ಥಿಗಳಿಗೆ ತ್ವರಿತ ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಶೀಘ್ರ ಕಟ್ಟಡ
ಹಾಲಿ ಬಾಡಿಗೆ ವ್ಯವಸ್ಥೆಯಲ್ಲಿರುವ ವಸತಿ ನಿಲಯಗಳಿಗೆ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಸರಕಾರಕ್ಕೆ ಬರೆದಿದ್ದೇವೆ. ಈಗಾಗಲೇ ಸೈಟ್ ಗುರುತಿಸಲಾಗಿದೆ. ಶೀಘ್ರ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಾ| ಸೆಲ್ವಮಣಿ ಹೇಳಿದರು.

ತೀವ್ರ ಗಾಳಿಯಿಂದ ಹಾನಿ

Advertisement

ಉರ್ಲಾಂಡಿಯ ಹಾಸ್ಟೆಲ್ 6 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ ಮತ್ತು ಯಾವುದೇ ಸಮಸ್ಯೆಗಳು ಬಂದಿಲ್ಲ. ಆದರೆ ಸೋಮವಾರ ರಾತ್ರಿ ತೀವ್ರ ರೀತಿಯ ಸುಂಟರಗಾಳಿಯಿಂದ ಹಾನಿಯಾಗಿದೆ. ಸುಮಾರು 100 ಮೀ. ದೂರದ ತನಕ ಶೀಟ್ ಹಾರಿದೆ. ಪರ್ಯಾಯ ಹಾಗೂ ಪರಿಹಾರ ಕ್ರಮಗಳ ಕುರಿತು ತ್ವರಿತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಚಿನ್‌ ಕುಮಾರ್‌ ತಿಳಿಸಿದ್ದಾರೆ.

ತಾಲೂಕು ಪಂಚಾಯತ್‌ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ತಾಲೂಕು ಪಂಚಾಯತ್‌ ಇಒ ನವೀನ್‌ ಭಂಡಾರಿ, ತಾಲೂಕು ಪಂಚಾಯತ್‌ ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್‌ ಬಿಜತ್ರೆ ಉಪಸ್ಥಿತರಿದ್ದರು.

ಗಾಳಿ: 100 ಮೀ. ದೂರ ಹಾರಿದ ಶೀಟ್
ಪುತ್ತೂರು:
ನಗರದ ಉರ್ಲಾಂಡಿಯಲ್ಲಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ಅನಂತರದ ವಿದ್ಯಾರ್ಥಿ ನಿಲಯದ ಛಾವಣಿಯ ಸಿಮೆಂಟ್ ಶೀಟ್‌ಗಳು ಸೋಮವಾರ ರಾತ್ರಿ ಬೀಸಿದ ಭಾರೀ ಗಾಳಿಗೆ ಹಾರಿಹೋಗಿವೆ.

ಗಾಳಿಗೆ ಕಟ್ಟಡದ ಶೀಟ್ 100 ಮೀ. ದೂರದ ತನಕವೂ ಹಾರಿದೆ. ವಿದ್ಯಾರ್ಥಿ ನಿಲಯದಲ್ಲಿದ್ದ 70ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಮೂವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾತ್ರಿ ಘಟನೆಯ ಸುದ್ದಿ ತಿಳಿದ ತತ್‌ಕ್ಷಣ ಪುತ್ತೂರು ಸಹಾಯಕ ಆಯುಕ್ತ ಎಚ್.ಕೆ. ಕೃಷ್ಣಮೂರ್ತಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಇತರ ಮಕ್ಕಳಿಗೆ ಸ್ಥಳೀಯ ನಿವಾಸಿ ನಿವೃತ್ತ ಎಎಸ್‌ಐ ಒಬ್ಬರ ಮನೆಯ ಮಹಡಿಯಲ್ಲಿ ಮತ್ತು ಸುದಾನ ವಸತಿಯುತ ಶಾಲೆಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ.

ಬಾಡಿಗೆ ಕಟ್ಟಡ
ವಿದ್ಯಾರ್ಥಿ ನಿಲಯ ಇರುವ ಕಟ್ಟಡವು ಉದ್ಯಮಿಯೊಬ್ಬರ ಬಾಡಿಗೆ ಕಟ್ಟಡವಾಗಿದೆ. ಪುತ್ತೂರು ತಾ.ಪಂ. ವತಿಯಿಂದ ಈ ಕಟ್ಟಡಕ್ಕೆ ಮಾಸಿಕ 70 ಸಾವಿರ ರೂ. ಬಾಡಿಗೆ ಪಾವತಿಸಲಾಗುತ್ತಿತ್ತು. ಈಗ ಕಟ್ಟಡದ ಛಾವಣಿ ಹಾರಿ ಹೋಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.

ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿಗಳನ್ನು ತಾತ್ಕಾಲಿಕವಾಗಿ ನಗರದ ಕೊಂಬೆಟ್ಟು ಪರಿಸರದಲ್ಲಿರುವ ಸಭಾಭವನವೊಂದಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಸಭಾಭವನದಲ್ಲಿ ಅಡುಗೆ ಕೋಣೆ, ಊಟದ ಕೋಣೆ ಮತ್ತು ಶೌಚಾಲಯ ಹಾಗೂ ಸ್ನಾನ ಗೃಹಗಳ ವ್ಯವಸ್ಥೆ ಇರುವ ಕಾರಣ ವಿದ್ಯಾರ್ಥಿ ನಿಲಯವನ್ನು ಅಲ್ಲಿಗೆ ಸ್ಥಳಾಂತರಿಸಲು ಸಮಸ್ಯೆಯಾಗುವುದಿಲ್ಲ ಎಂದು ತಾ.ಪಂ. ಅಧ್ಯಕ್ಷ ಕೆ. ರಾಧಾಕೃಷ್ಣ ಬೋರ್ಕರ್‌ ತಿಳಿಸಿದ್ದಾರೆ.

ಭಾರೀ ಪ್ರಮಾಣದ ಗಾಳಿ ಬೀಸಿ, ಮಳೆ ಬಂದಿದೆ. ವಿದ್ಯಾರ್ಥಿ ನಿಲಯದ ಛಾವಣಿಯ ಸಿಮೆಂಟ್ ಶೀಟ್‌ಗಳು ಹಾರಿ ಹೋಗಿವೆ. ಅದೃಷ್ಟವಶಾತ್‌ ಮಕ್ಕಳು ಪಾರಾಗಿದ್ದಾರೆ. ದೇವರೇ ನಮ್ಮೆಲ್ಲರನ್ನು ಕಾಪಾಡಿದ್ದಾನೆ ಎಂದು ವಿದ್ಯಾರ್ಥಿ ನಿಲಯ ಪಾಲಕ ಥೋಮಸ್‌ ಘಟನೆಯ ಕುರಿತು ವಿವರಿಸಿದ್ದಾರೆ.

ಸ್ಥಳಕ್ಕೆ ಪುತ್ತೂರು ನಗರಸಭೆ ಸದಸ್ಯರಾದ ಕೆ. ಜೀವಂಧರ ಜೈನ್‌, ಸಂತೋಷ್‌ ಕುಮಾರ್‌, ಪಿ.ಜಿ. ಜಗನ್ನಿವಾಸ್‌ ರಾವ್‌, ಕೆ.ರಾಧಾಕೃಷ್ಣ ಬೋರ್ಕರ್‌ ಭೇಟಿ ನೀಡಿ, ಪರಿಹಾರ ಕಾರ್ಯಗಳಿಗೆ ಮುಂದಾಗಿದ್ದಾರೆ. ವಿದ್ಯಾರ್ಥಿ ನಿಲಯದ ಎಲ್ಲ ಸಾಮಗ್ರಿಗಳನ್ನು ಸ್ಥಳಾಂತರಿಸುವ ಕಾರ್ಯ ನಡೆಸಲಾಗುತ್ತಿದೆ.

ವಿದ್ಯಾರ್ಥಿಗಳ ತಾತ್ಕಾಲಿಕ ಸ್ಥಳಾಂತರ
ವಿದ್ಯಾರ್ಥಿಗಳನ್ನು ತತ್‌ಕ್ಷಣಕ್ಕೆ ಕೊಂಬೆಟ್ಟು ದ್ರಾವಿಡ ಬ್ರಾಹ್ಮಣ ಹಾಸ್ಟೆಲ್ಗೆ ಸ್ಥಳಾಂತರ ಮಾಡಲಾಗುವುದು. ಆ. 15ರೊಳಗೆ ಹಾರಾಡಿ ಯಲ್ಲಿರುವ ಮೋತಿ ಮಹಲ್ ಕಟ್ಟಡಕ್ಕೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗುತ್ತದೆ. ಬಟ್ಟೆ, ಬರೆ ಹಾಗೂ ವಸ್ತುಗಳನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳಿಗೆ ವಿಪತ್ತು ಪರಿಹಾರ ನಿಧಿಯಿಂದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಡಾ| ಸೆಲ್ವಮಣಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next