ಬೆಳಗಾವಿ: “ರಾಜ್ಯ ಸರಕಾರದ ಹಗರಣದ ದಾಖಲೆಗಳನ್ನು ಇನ್ನೂ ಮೂರು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು’
ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈ ಕುರಿತಂತೆ ಮಹತ್ವದ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಇನ್ನುಳಿದ ಕೆಲವನ್ನು ಸರಿಯಾಗಿ ನೀಡದೆ ಅಧಿಕಾರಿಗಳು ಮುಚ್ಚಿಟ್ಟಿದ್ದಾರೆ. ಸೆ.22ರಂದು ಶಿಕಾರಿಪುರಕ್ಕೆ ಹೋಗಿ ದಾಖಲೆಗಳನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ ಮಾಡಿಕೊಂಡು, ಮಹತ್ವದ ದಾಖಲೆಗಳನ್ನು ಕಾಪಿ ಮಾಡಿಕೊಂಡು,
ಮೂರು ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು’ ಎಂದು ತಿಳಿಸಿದರು.
ಶಿಕಾರಿಪುರದಿಂದ ಸ್ಪರ್ಧಿಸಲ್ಲ: “ಈ ಸಲ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ಬೇರೆ ಕ್ಷೇತ್ರದಲ್ಲಿ ನಿಲ್ಲಬೇಕೆಂದುಕೊಂಡಿದ್ದೇನೆ’ ಎಂದು ಯಡಿಯೂರಪ್ಪ ಹೇಳಿದರು. ಉಸ್ತುವಾರಿಗಳ ಸಭೆ ಇಂದು ಬೆಂಗಳೂರು: ರಾಜ್ಯದ 224 ವಿಧಾನಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿಗಳ ಮೊದಲ ಸಭೆ ಸೆ.23ರಂದು ಬೆಂಗಳೂರಿನಲ್ಲಿರುವ ಬಿಜೆಪಿಯ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ನಡೆಯಲಿದೆ. ರಾಜ್ಯ ಸಂಘಟನಾ ಕಾರ್ಯದರ್ಶಿ(ಸಂಘಟನೆ) ಅರುಣ್ ಕುಮಾರ್ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ 224 ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳು ಭಾಗವಹಿಸಲಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವುದು ಸೇರಿದಂತೆ ಅಭ್ಯರ್ಥಿಗಳ ಆಯ್ಕೆಗೆ ಸಹಕಾರಿಯಾಗುವ ಅಂಶಗಳು, ಸ್ಥಳೀಯ ಪ್ರಚಾರ ತಂತ್ರಗಳು ಇತ್ಯಾದಿ ವಿಚಾರದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.
ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ ಕುಮಾರ್ ನೇತೃತ್ವದ ಸಮಿತಿಯಲ್ಲಿ ಬಿಜೆಪಿ ಮುಖಂಡರಾದ ಭಾನು ಪ್ರಕಾಶ್, ಕೇಶವ ಪ್ರಸಾದ್, ಡಾ.ಶಿವಯೋಗಿ ಸ್ವಾಮಿ, ಸಿ.ಟಿ.ರವಿ. ತುಳಸಿ ಮುನಿರಾಜು ಗೌಡ, ನಂದೀಶ್, ಭಾರತಿ ಮುಗುªಮ್, ನಿರ್ಮಲ್ ಕುಮಾರ್ ಸುರಾನ, ಎನ್.ವಿ.ಫಣೀಶ್. ಅಶೋಕ್ ಗಸ್ತಿ, ಜೆ. ಕೃಷ್ಣ, ಮಹೇಶ್ ತೆಂಗಿನಕಾಯಿ, ಎ.ಎನ್.ನಟರಾಜ್, ಗಿರೀಶ್ ಪಟೇಲ್, ಎಸ್. ವಿ.ರಾಘವೇಂದ್ರ, ಯತೀಶ್ ಆರ್ವಾರ್, ಪ್ರಕಾಶ್ ಅಕ್ಕಲಕೋಟೆ ಹಾಗೂ ಜಯತೀರ್ಥ ಮೊದಲಾದವರು ಇದ್ದಾರೆ. ರಾಜ್ಯದ 55 ಸಾವಿರ ಬಿಜೆಪಿ ಬೂತ್ ಸಮಿತಿ ರಚನೆಯ ಹೊಣೆ ಇವರೆಲ್ಲರ ಮೇಲಿದೆ.
ಯಡಿಯೂರಪ್ಪನವರ ಬಳಿ ಯಾವುದೇ ದಾಖಲೆಗಳಿಲ್ಲ. ಸುಮ್ಮನೆ ಹೇಳುತ್ತಿದ್ದಾರೆ. ಅವರು ಸುಳ್ಳು ಹೇಳ್ಳೋದ್ರಲ್ಲಿ ನಿಸ್ಸೀಮರು. ದಾಖಲೆಗಳು ಸಿಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಹಾಗಾದರೆ, ಆ ದಾಖಲೆಗಳು ನನ್ನ ಬಳಿ ಇವೆಯಾ? ಅವರಿಗೆ ನಾನು ದಾಖಲೆ ಕೊಡಬೇಕಾಗುತ್ತಾ? ರಾಜ್ಯ ಸರ್ಕಾರದಲ್ಲಿ ಅವ್ಯವಹಾರ ನಡೆದಿದ್ದರೆ ಬಹಿರಂಗ ಚರ್ಚೆಗೆ ಬನ್ನಿ ಎಂದು ನಾನೇ ಬಿಜೆಪಿ ನಾಯಕರಿಗೆ ಆಹ್ವಾನಿಸಿದ್ದೆ. ಆದರೆ, ಅವರೇ ಬರಲಿಲ್ಲ.
ಸಿದ್ದರಾಮಯ್ಯ, ಮುಖ್ಯಮಂತ್ರಿ