ಮಂಗಳೂರು/ಉಡುಪಿ: ಎಸ್‌ಎಸ್‌ಎಲ್‌ಸಿ ತರಗತಿ ಪೂರ್ಣಮಟ್ಟದಲ್ಲಿ ನಡೆಯುತ್ತಿದ್ದು, ರಾಜ್ಯದಲ್ಲಿಯೇ ಅತ್ಯಧಿಕ ಸಂಖ್ಯೆಯ (ಶೇ. 80)ವಿದ್ಯಾರ್ಥಿಗಳು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಶಾಲೆಗೆ ಹಾಜರಾಗುತ್ತಿದ್ದಾರೆ. ಬಾಕಿ ಇರುವ ಸುಮಾರು ಶೇ. 20ರಷ್ಟು ವಿದ್ಯಾರ್ಥಿಗಳನ್ನು ಶಾಲೆಗೆ ಕರೆತರುವ ಯತ್ನವೂ ನಡೆಯುತ್ತಿದೆ.
ಕೋವಿಡ್ ದಿಂದಾಗಿ ದೀರ್ಘ ಸಮಯದ ರಜೆಯ ಬಳಿಕ ಜ.1ರಿಂದ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ತರಗತಿಗಳು ಆರಂಭವಾಗಿದ್ದವು. ಆರಂಭಿಕ ದಿನದಿಂದಲೂ ಕರಾವಳಿಯಲ್ಲಿನ ವಿದ್ಯಾರ್ಥಿಗಳ ಹಾಜರಾತಿ ಉತ್ತಮವಾಗಿಯೇ ಇತ್ತು. ಒಂದು ತಿಂಗಳೊಳಗೆ ಅದು ಶೇ. 80 ಮೀರಿದೆ. ಕೆಲವೇ ದಿನಗಳಲ್ಲಿ ಶೇ. 100 ತಲುಪುವ ನಿರೀಕ್ಷೆಯನ್ನು ಶಿಕ್ಷಕರು ಹೊಂದಿದ್ದಾರೆ.
ವಿದ್ಯಾರ್ಥಿಗಳು ಗೈರು ಹಾಜರಾಗುತ್ತಿರು ವುದಕ್ಕೆ ನೈಜ ಕಾರಣ ಏನು ಎಂಬುದನ್ನು ತಿಳಿಯುವ ಉದ್ದೇಶದಿಂದ ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರ ನೇತೃತ್ವದಲ್ಲಿ ವಿದ್ಯಾರ್ಥಿಗಳ ಮನೆ ಭೇಟಿ ಕಾರ್ಯಕ್ರಮವನ್ನು ಈಗಾಗಲೇ ಆರಂಭಿಸಲಾಗಿದೆ.
ದ.ಕನ್ನಡ ಜಿಲ್ಲೆಯಲ್ಲಿ ಸುಮಾರು 31,000 ವಿದ್ಯಾರ್ಥಿಗಳಲ್ಲಿ 24,500 ವಿದ್ಯಾರ್ಥಿಗಳು ಶಾಲೆಗೆ ಹಾಜರಾಗುತ್ತಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 15,673 ವಿದ್ಯಾರ್ಥಿಗಳಲ್ಲಿ 13,945 ವಿದ್ಯಾರ್ಥಿಗಳು ಬುಧವಾರ ತರಗತಿಗೆ ಹಾಜರಾಗಿದ್ದಾರೆ.
ದ.ಕ. ವಿದ್ಯಾಂಗ ಉಪನಿರ್ದೇಶಕ ಮಲ್ಲೇಸ್ವಾಮಿ ಅವರು ಉದಯವಾಣಿ ಜತೆಗೆ ಮಾತನಾಡಿ, “ಶೇ.80ರಷ್ಟು ಮಕ್ಕಳು ದ.ಕ. ಜಿಲ್ಲೆಯಲ್ಲಿ ತರಗತಿಗೆ ಹಾಜರಾಗುತ್ತಿದ್ದಾರೆ. ಗೈರಾಗುತ್ತಿರುವ ಮಕ್ಕಳ ಮನೆಗಳಿಗೆ ಶಿಕ್ಷಕರ ಭೇಟಿ ಆರಂಭಿಸಲಾಗಿದೆ. 530 ಶಾಲೆಗಳ ಪೈಕಿ 183 ಶಾಲೆಗಳಲ್ಲಿ ಈ ಸರ್ವೇ ಪೂರ್ಣವಾಗಿದೆ. ಉಳಿದ ಶಾಲೆಗಳಲ್ಲಿ ಸರ್ವೇ ನಡೆಯುತ್ತಿದೆ. ಹಾಸ್ಟೆಲ್ ಸಮಸ್ಯೆ, ಹೊರಜಿಲ್ಲೆ ಮಕ್ಕಳು ಹಾಗೂ ಜಿಲ್ಲೆಯಲ್ಲಿರುವ ಮಕ್ಕಳ ಸಹಿತ 3 ವಿಧಗಳಲ್ಲಿ ಸರ್ವೇ ನಡೆಸಲಾಗುತ್ತಿದೆ’ ಎಂದರು.
ಉಡುಪಿ ಜಿಲ್ಲೆಯಲ್ಲಿ ಎಸೆಸೆಲ್ಸಿ ತರಗತಿಗಳಿಗೆ ಬುಧವಾರ ಶೇ.84.66 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಹಾಸ್ಟೆಲ್ ತೆರೆಯದಿರುವುದು ಹಾಗೂ ವಲಸೆ ಕಾರ್ಮಿಕರ ಮಕ್ಕಳು ಇನ್ನೂ ಜಿಲ್ಲೆಗೆ ಆಗಮಿಸಿಲ್ಲ. ಶೀಘ್ರ ಎಲ್ಲ ವಿದ್ಯಾರ್ಥಿಗಳು ಹಾಜರಾಗುವ ನಿರೀಕ್ಷೆ ಹೊಂದಿದ್ದೇವೆ ಎಂದು ವಿದ್ಯಾಂಗ ಉಪನಿರ್ದೇಶಕ ಎನ್.ಎಚ್. ನಾಗೂರ ಅವರು ತಿಳಿಸಿದ್ದಾರೆ.