Advertisement

ಜನ ದಟ್ಟಣೆಯಾದ್ರೆ ಎಫ್‌ಐಆರ್‌ ದಾಖಲಿಸಿ

07:45 PM Mar 16, 2021 | Team Udayavani |

ದಾವಣಗೆರೆ: ಕೊರೊನಾ ನಿಯಂತ್ರಣ ಹಿನ್ನೆಲೆ ಮದುವೆ, ಜಾತ್ರೆ, ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ಸೇರಿದಲ್ಲಿ ನಿಯಮಾನುಸಾರ ಎಫ್‌ಐಆರ್‌ ದಾಖಲಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೋವಿಡ್‌ ಲಸಿಕಾಕರಣ ಪ್ರಗತಿ ಮತ್ತು ಕೋವಿಡ್‌ ನಿಯಂತ್ರಣ ಕುರಿತು ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ಕೊರೊನಾ ಯುದ್ಧ ಇನ್ನೂ ಮುಗಿದಿಲ್ಲ. ಜನರು ಮೈಮರೆತು, ಮದುವೆ, ಜಾತ್ರೆ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಅಸಂಖ್ಯಾತ ಸಂಖ್ಯೆಯಲ್ಲಿ ಸೇರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದ್ದು ಎಲ್ಲರೂ ಸಹಕರಿಸಬೇಕು. ಜನರು ಪ್ರಸ್ತುತ ಕೊರೊನಾ ನಿಯಮಾವಳಿಗಳನ್ನು ಗಾಳಿಗೆ ತೂರಿ ಬದುಕುವ ರೀತಿ ನೋಡುತ್ತಿದ್ದರೆ ಎರಡನೇ ಅಲೆ ದೂರವಿಲ್ಲ ಅನ್ನಿಸುತ್ತಿದೆ. ಸರ್ಕಾರ ಕೂಡ ಈ ಹಿನ್ನೆಲೆಯಲ್ಲಿ ಮೊದಲಿನಂತೆ ಮದುವೆ, ಜಾತ್ರೆ, ಇತರೆ ಸಾರ್ವಜನಿಕರು ಸೇರುವ ಕಾರ್ಯಕ್ರಮಗಳಿಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಮತ್ತು ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ಸೇರಿದರೆ ಕ್ರಮ ವಹಿಸಲು ಸೂಚನೆ ನೀಡಿದೆ.

ಈ ಸುತ್ತೋಲೆಯನ್ನು ಸಂಬಂಧಿಸಿದವರಿಗೆ ನೀಡಿ ಜಾರಿ ಮಾಡಲಾಗುತ್ತಿದ್ದು, ನಿಯಮ ಮೀರಿದರೆ ಪೊಲೀಸ್‌ ಇಲಾಖೆಯವರು ಕ್ರಮ ಕೈಗೊಳ್ಳಬೇಕು ಎಂದರು. ಲಸಿಕಾಕಾರಣದಲ್ಲಿ ಪ್ರಗತಿ ಸಾಧಿಸಿ: ಲಸಿಕಾಕರಣದಲ್ಲಿ ಜಿಲ್ಲೆಯಲ್ಲಿ ಪ್ರಗತಿ ಕಡಿಮೆ ಇದೆ. ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು 45 ರಿಂದ 59 ವರ್ಷದವರೆಗಿನ ಇತರೆ ಕಾಯಿಲೆಯಿಂದ ಬಳಲುತ್ತಿರುವ, 60 ವರ್ಷ ಮೇಲ್ಪಟ್ಟಿರುವವರು ಸೇರಿದಂತೆ ಒಟ್ಟಾರೆ ಕೋವಿಡ್‌ ಲಸಿಕಾಕರಣ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಆದ ಕಾರಣ ಜಿಪಂ, ತಾಪಂ, ಗ್ರಾಪಂ ಅಧ್ಯಕ್ಷರು ಮತ್ತು ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ನಾಯಕತ್ವದಲ್ಲಿ ಲಸಿಕಾಕರಣಕ್ಕೆ ಉತ್ತೇಜನ ನೀಡಬೇಕು.

ಶಾಸಕರು ಲಸಿಕೆ ಹಾಕಿಸಿಕೊಳ್ಳುತ್ತಿರುವ ಚಿತ್ರದ ಫ್ಲೆಕ್ಸ್‌ ಹಾಕಿಸಬೇಕು. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಇಲ್ಲ ಎಂಬ ಬಗ್ಗೆ ಸ್ಥಳೀಯ ಆಡಳಿತ, ತಹಶೀಲ್ದಾರರು, ತಾಲೂಕು ವೈದ್ಯಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಜನರ ಮನವೊಲಿಸಬೇಕು ಎಂದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ತಹಶೀಲ್ದಾರರು ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳು, ಮದುವೆ ಇತರೆ ಜನ ಸೇರುವ ಸಮಾರಂಭಗಳಿಗೆ ಸ್ಥಳೀಯ ಸಂಸ್ಥೆಗಳು ಅನುಮತಿ ನೀಡುವಾಗ ಕಟ್ಟುನಿಟ್ಟಾಗಿ ನಿಯಮಾವಳಿಯನ್ನು ಪಾಲಿಸಬೇಕು.

ಕೋವಿಡ್‌ ನಿಯಮಾವಳಿ ಪಾಲನೆ ಬಗ್ಗೆ ಸಭೆ ಕರೆದು ನಡಾವಳಿ ಸಿದ್ಧಪಡಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಸೂಚಿಸಿದರು. ಜಿಪಂ ಸಿಇಒ ಡಾ| ವಿಜಯಮಹಾಂತೇಶ್‌ ದಾನಮ್ಮನವರ್‌ ಮಾತನಾಡಿ, ಲಸಿಕಾಕರಣ ಹಾಗೂ ಕೋವಿಡ್‌ ನಿಯಂತ್ರಣಕ್ಕೆ ಸಂಬಂ ಸಿದಂತೆ ಅಂಗನವಾಡಿ, ಆಶಾ, ಪಿಡಿಒ ಸೇರಿದಂತೆ ನೌಕರರಿಗೆ ಕಿರುಯೋಜನೆ ಸಿದ್ಧಪಡಿಸಬೇಕು. ಅದರಂತೆ ಕಾರ್ಯಾಚರಣೆ ಮಾಡಬೇಕು ಎಂದು ಸಲಹೆ ನೀಡಿದರು.

Advertisement

ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗರಾಜ್‌, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ತಹಶೀಲ್ದಾರರು, ತಾಲೂಕು ವೈದ್ಯಾಧಿಕಾರಿಗಳು, ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next