Advertisement

ರಾಷ್ಟ್ರ ಬಲಪಡಿಸುವ ನಿರ್ಣಯ: ರಾಜನಾಥ್‌ ಸಿಂಗ್‌

12:04 AM Feb 16, 2023 | Team Udayavani |

ಬೆಂಗಳೂರು: ಕೇವಲ ಮೂರು ದಿನಗಳಲ್ಲಿ 80 ಸಾವಿರ ಕೋಟಿ ಮೊತ್ತದ ಒಡಂಬಡಿಕೆಗೆ ಏರೋ ಇಂಡಿಯಾ ಶೋ ಸಾಕ್ಷಿಯಾಗಿದ್ದು, ಇದು ಮುಂಬರುವ ದಿನಗಳಲ್ಲಿ ಹೂಡಿಕೆ ರೂಪದಲ್ಲಿ ದೇಶಕ್ಕೆ ಹರಿದುಬರಲಿದೆ. ಮೂರೂ ದಿನಗಳಲ್ಲಿ ನಾನಾ ದೇಶಗಳು ಮತ್ತು ರಾಷ್ಟ್ರದ ವಿವಿಧ ವೈಮಾನಿಕ ಕ್ಷೇತ್ರದ ದಿಗ್ಗಜ ಕಂಪೆನಿಗಳು ರಕ್ಷಣ ವಲಯಕ್ಕೆ ಸಂಬಂಧಿಸಿದ ಹತ್ತುಹಲವು ಉತ್ಪನ್ನಗಳು, ತಂತ್ರಜ್ಞಾನಗಳ ಅಭಿವೃದ್ಧಿ, ತಯಾರಿಕೆಗಾಗಿ ಒಡಂಬಡಿಕೆ ಮಾಡಿಕೊಂಡಿವೆ. ಅದರಂತೆ ಒಟ್ಟಾರೆ 266 ಪಾಲುದಾರರೊಂದಿಗೆ (201 ಒಡಂಬಡಿಕೆಗಳು ಸೇರಿವೆ) 80 ಸಾವಿರ ಕೋಟಿ ರೂ. ಮೌಲ್ಯದ ಒಪ್ಪಂದಗಳು ನಡೆದಿವೆ. ಈ ಅವಧಿಯಲ್ಲಿ 53 ಪ್ರಮುಖ ಘೋಷಣೆಗಳೂ ಆಗಿವೆ. ವಿನ್ಯಾಸ, ಅಭಿವೃದ್ಧಿ, ಉತ್ಪಾದನೆ ಮತ್ತು ಹೆಲಿಕಾಪ್ಟರ್‌ ಎಂಜಿನ್‌ಗಳ ಲೈಫ್ಟೈಮ್‌ ಸಪೋರ್ಟ್‌ ಮತ್ತಿತರ ಕ್ಷೇತ್ರಗಳಿಗೆ ಹೆಚ್ಚಿನ ಬಂಡವಾಳ ಹರಿದುಬಂದಿದೆ.

Advertisement

ಯಲಹಂಕ ವಾಯುನೆಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ “ಬಂಧನ್‌’ ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದ ರಕ್ಷಣ ಸಚಿವ ರಾಜನಾಥ್‌ ಸಿಂಗ್‌, ಈ ಬಂಧನ್‌ ಕೇವಲ ಆರ್ಥಿಕ ಲಾಭಕ್ಕೆ ಸೀಮಿತವಾದ ಎರಡು ಪಕ್ಷಗಳ ನಡುವಿನ ಒಪ್ಪಂದವಲ್ಲ; ಬದಲಿಗೆ ರಕ್ಷಣ ಕ್ಷೇತ್ರದಲ್ಲಿ ರಾಷ್ಟ್ರವನ್ನು ಬಲಪಡಿಸುವ ಹೊಸ ನಿರ್ಣಯವಾಗಿದೆ ಎಂದು ವಿಶ್ಲೇಷಿಸಿದರು.

ಏರೋ ಇಂಡಿಯಾ ಶೋದಲ್ಲಾದ ಈ ಒಡಂಬಡಿಕೆಗಳು ಮತ್ತು ಟಿಒಟಿ (ತಂತ್ರಜ್ಞಾನಗಳ ವಿನಿಮಯ)ಗಳು ರಕ್ಷಣೆ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಮತ್ತಷ್ಟು ದಾರಿ ಮಾಡಿಕೊಡಲಿವೆ. ಅಷ್ಟೇ ಅಲ್ಲ, ರಕ್ಷಣಾ ವಲಯದಲ್ಲಿನ ಉತ್ಪಾದನೆಯನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್‌ ಅನಿಲ್‌ ಚವ್ಹಾಣ್‌, ವಾಯುಪಡೆ ಮುಖ್ಯಸ್ಥ ಏರ್‌ ಚೀಫ್ ಮಾರ್ಷಲ್‌ ವಿ.ಆರ್‌. ಚೌಧರಿ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಆರ್‌. ಹರಿಕುಮಾರ್‌, ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ, ರಕ್ಷಣಾ ಕಾರ್ಯದರ್ಶಿ ಗಿರಿಧರ್‌ ಅರಮಾನೆ, ರಕ್ಷಣಾ ಇಲಾಖೆಯ ಕಾರ್ಯದರ್ಶಿ, ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಮತ್ತಿತರರು ಉಪಸ್ಥಿತರಿದ್ದರು.

ಹರಿದುಬಂತು ಮೂರು ಸಾವಿರ ಕೋಟಿ ರೂ.
ಬೆಂಗಳೂರು: ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ಶೋ 14ನೇ ಆವೃತ್ತಿಯಲ್ಲಿ ಸುಮಾರು ಮೂರು ಸಾವಿರ ಕೋಟಿ ಬಂಡವಾಳ ಸೆಳೆಯುವಲ್ಲಿ ಕರ್ನಾಟಕ ಯಶಸ್ವಿಯಾಗಿದೆ.

Advertisement

ಕಳೆದ ಮೂರು ದಿನಗಳಲ್ಲಿ ರಕ್ಷಣ ವಲಯ ಅದರಲ್ಲೂ ವಿಶೇಷವಾಗಿ ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ 32 ಒಡಂಬಡಿಕೆಗಳಾಗಿದ್ದು, ಇದರ ಮೊತ್ತ 2,931 ಕೋಟಿ ರೂ. ಆಗಿದೆ. ಮುಂಬರುವ ದಿನಗಳಲ್ಲಿ ವಿವಿಧ ಹಂತಗಳಲ್ಲಿ ಈ ಬಂಡವಾಳವು ರಾಜ್ಯದಲ್ಲಿ ಉದ್ಯಮಗಳ ಸ್ಥಾಪನೆ ಮತ್ತಿತರ ರೂಪದಲ್ಲಿ ಹರಿದುಬರಲಿದೆ.

ನಿರೀಕ್ಷೆಗಿಂತ ಕಡಿಮೆ
ಕಳೆದ ನವೆಂಬರ್‌ನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶದಿಂದ ಸುಮಾರು ಹತ್ತು ಲಕ್ಷ ಕೋಟಿ ಬಂಡವಾಳ ಹರಿದುಬಂದಿತ್ತು. ಇದರ ಬೆನ್ನಲ್ಲೇ ಏರೋ ಇಂಡಿಯಾ ಶೋ ಕೂಡ 30ಕ್ಕೂ ಅಧಿಕ ಕಂಪೆನಿಗಳನ್ನು ಆಕರ್ಷಿಸುವ ಮೂಲಕ ಸಾವಿರಾರು ಕೋಟಿ ಬಂಡವಾಳ ತಂದುಕೊಟ್ಟಿದೆ. ಇದಕ್ಕೆ ಪೂರಕವಾಗಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯೂ ಆಗಲಿದೆ. ಒಟ್ಟಾರೆ ಹೂಡಿಕೆಯಲ್ಲಿ ಗರಿಷ್ಠ ಪ್ರಮಾಣದ ಬಂಡವಾಳ ರಾಜ್ಯಕ್ಕೆ ಹರಿದುಬರಲಿದ್ದು, ಆ ಮೂಲಕ ಇದರಿಂದ ಹೆಚ್ಚು ಲಾಭ ಕರ್ನಾಟಕಕ್ಕೇ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದರು. ಈ ನಿಟ್ಟಿನಲ್ಲಿ ನೋಡಿದಾಗ, ನಿರೀಕ್ಷಿತ ಮಟ್ಟದಲ್ಲಿ ಹೂಡಿಕೆ ಹರಿದುಬಂದಿಲ್ಲ ಎಂದು ತಜ್ಞರು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next