Advertisement
ಗ್ರಾಮಾಂತರದ ಪ್ರಯಾಣಿಕರಿಗೆ ಅನುಕೂಲಉಡುಪಿ ಮತ್ತು ಪಡುಬಿದ್ರಿ ರೈಲ್ವೇ ನಿಲ್ದಾಣಗಳ ನಡುವಿನ ಇನ್ನಂಜೆಯಲ್ಲಿ ರೈಲ್ವೇ ಸ್ಟೇಷನ್ ಅಭಿವೃದ್ಧಿಪಡಿಸಿರುವುದರಿಂದ ಇನ್ನಂಜೆ- ಪಾಂಗಾಳ ಜಂಟಿ ಗ್ರಾಮಗಳು ಮಾತ್ರವಲ್ಲದೆ ಶಂಕರಪುರ, ಸುಭಾಸ್‌ನಗರ, ಕುರ್ಕಾಲು, ಕುಂಜಾರುಗಿರಿ, ಕಟಪಾಡಿ, ಮಟ್ಟು, ಶಿರ್ವ, ಪಾದೂರು, ಹೇರೂರು, ಬಂಟಕಲ್ಲು, ಉಳಿಯಾರಗೋಳಿ, ಕಾಪು ಸಹಿತ ವಿವಿಧ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ಕೊಂಕಣ ರೈಲ್ವೇ ಆರಂಭವಾಗಿದ್ದಾಗ ಇಲ್ಲಿ ನಿಲ್ದಾಣ ಇತ್ತು. ಆದರೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾದ್ದರಿಂದ ರೈಲು ನಿಲುಗಡೆಯನ್ನು ರದ್ದುಗೊಳಿಸಲಾಗಿತ್ತು. ಬಳಿಕ ನಿಲ್ದಾಣವೂ ತೆರವಾಗಿತ್ತು. ಕಳೆದ 15 ವರ್ಷಗಳಿಂದ ಜನರು ಇದಕ್ಕಾಗಿ ಹೋರಾಟ ನಡೆಸಿದ್ದು ಉದ್ದೇಶ ಫಲಿಸಿದೆ. 2016ರಲ್ಲಿ ಅಂದಿನ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಿದ್ದರು. 2019ರಲ್ಲಿ ಕಾಮಗಾರಿ ಮುಗಿಯಬೇಕಿದ್ದು, 8 ತಿಂಗಳು ವಿಳಂಬವಾಗಿ ಪೂರ್ಣಗೊಂಡಿದೆ.
560 ಮೀಟರ್ ಉದ್ದದ ಫ್ಲಾಟ್‌ಫಾರಂ, ಟಿಕೆಟ್ ಕೌಂಟರ್, ನಿಯಂತ್ರಣಾ ಕೊಠಡಿ, ವಿಶ್ರಾಂತಿ ಕೊಠಡಿ, ಸುಸಜ್ಜಿತ ಶೌಚಾಲಯ, ಸ್ಟೇಷನ್ ಮಾಸ್ಟರ್ ರೂಂ, ಕುಡಿಯುವ ನೀರಿನ ಸೌಲಭ್ಯ ಮತ್ತು ಪ್ರಯಾಣಿಕರಿಗೆ ಶೆಲ್ಟರ್ ಮಾಡಲಾಗಿದೆ. ಕ್ರಾಸಿಂಗ್-ಪಾಸಿಂಗ್ ಸ್ಟೇಷನ್‌ಗಾಗಿ 620 ಮೀಟರ್ ಉದ್ದದ ದ್ವಿಪಥ ಹಳಿ ಜೋಡಣೆ ಪೂರ್ಣಗೊಂಡಿದ್ದು, ಅದಕ್ಕೆ ಬೇಕಾದ ವಿದ್ಯುತ್ ಲೈನ್ ಮತ್ತು ವಯರ್‌ಲೆಸ್ ಸಂಪರ್ಕಗಳ ಜೋಡಣ ಕಾರ್ಯ ಪೂರ್ಣಗೊಂಡಿದೆ. ಪಡುಬಿದ್ರಿ ಮತ್ತು ಉಡುಪಿ ನಡುವಿನ ಕಿ.ಮೀ. 701/ 2-5ರಲ್ಲಿ ಇನ್ನಂಜೆ ರೈಲು ನಿಲ್ದಾಣ ಬರಲಿದೆ. ಉಡುಪಿ ಮತ್ತು ಪಡುಬಿದ್ರಿ ರೈಲ್ವೇ ನಿಲ್ದಾಣಗಳ ನಡುವಿನ 18 ಕಿ. ಮೀ. ದೂರದ ಸಂಚಾರ ಸಮಯ ಕುಗ್ಗಿಸುವ ಮತ್ತು ಎರಡೂ ಸ್ಟೇಷನ್‌ಗಳ ಮೇಲಾಗುವ ಒತ್ತಡವನ್ನು ಕಡಿಮೆಗೊಳಿಸುವ ಉದ್ದೇಶವಿದೆ. ಈ ಸೌಕರ್ಯಕ್ಕಾಗಿ 6.75 ಕೋಟಿ ರೂ. ವೆಚ್ಚ ಮಾಡಲಾಗಿದೆ. ನಿಲುಗಡೆಗೆ ಪ್ರಸ್ತಾವನೆ
ಇನ್ನಂಜೆ ರೈಲು ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದ್ದು ಆ ಮೂಲಕ ಕಾಪು ಕ್ಷೇತ್ರದ ಜನತೆಯ ಬಹುಕಾಲದ ಕನಸು ನನಸಾಗುತ್ತಿದೆ. ಕಾಮಗಾರಿ ಪುನರ್ ನಿರ್ಮಿಸಿರುವ ಬಗ್ಗೆ ರೈಲ್ವೇ ಮಂಡಳಿ ಮಾಹಿತಿ ನೀಡಿದೆ. ಬೇಡಿಕೆಯಂತೆ ಅಲ್ಲಿ ಬೆಂಗಳೂರು ಮತ್ತು ಮುಂಬಯಿ ರೈಲುಗಳ ನಿಲುಗಡೆಗೆ ಪ್ರಸ್ತಾವನೆ ಕಳುಹಿಸಿಕೊಡಲಾಗಿದೆ.
-ಲಾಲಾಜಿ ಆರ್. ಮೆಂಡನ್, ಶಾಸಕರು, ಕಾಪು
Related Articles
ಸುಸಜ್ಜಿತ ರೈಲು ನಿಲ್ದಾಣ ನಿರ್ಮಾಣವಾದರೂ ಮುಂದೆ ಯಾವೆಲ್ಲ ರೈಲುಗಳು ನಿಲುಗಡೆಯಾಗಲಿವೆ ಎನ್ನುವುದರ ಬಗ್ಗೆ ಇನ್ನೂ ಖಾತ್ರಿಯಾಗಿಲ್ಲ. ಲೋಕಲ್ ಟ್ರೈನ್ ಮಾತ್ರವಲ್ಲದೆ ಮತ್ಸ್ಯ ಗಂಧ ಮತ್ತು ಬೆಂಗಳೂರು ರೈಲುಗಳೂ ನಿಲುಗಡೆಯಾಗಬೇಕಿವೆ. ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಸ್ಥಳೀಯರನ್ನು ಒಗ್ಗೂಡಿಸಿಕೊಂಡು ಮತ್ತೆ ಹೋರಾಟ ನಡೆಸಬೇಕಿದೆ.-ಸದಾಶಿವ ಬಂಗೇರ ಕುರ್ಕಾಲು, ಇನ್ನಂಜೆ ರೈಲು ನಿಲ್ದಾಣ ಹೋರಾಟ ಸಮಿತಿ ಸದಸ್ಯ
Advertisement
ಮೂಲಸೌಕರ್ಯ ವ್ಯವಸ್ಥೆಉಡುಪಿ ಮತ್ತು ಪಡುಬಿದ್ರಿ ನಿಲ್ದಾಣಗಳ ನಡುವಿನ ಅಂತರ ಮತ್ತು ಒತ್ತಡವನ್ನು ಕುಗ್ಗಿಸುವ ಕಾರಣದಿಂದ ಇನ್ನಂಜೆಯಲ್ಲಿ ಪಾಸಿಂಗ್ – ಕ್ರಾಸಿಂಗ್ ಸ್ಟೇಷನ್ ನಿರ್ಮಿಸಲಾಗಿದೆ. ಈಗಾಗಲೇ ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಿ ಪೂರ್ಣಗೊಳಿಸಲಾಗಿದ್ದು, ರೈಲ್ವೇ ನಿಲ್ದಾಣಕ್ಕೆ ಅಗತ್ಯವಾಗಿ ಬೇಕಿರುವ ಎಲ್ಲ ಮೂಲ ಸೌಕರ್ಯಗಳನ್ನೂ ಜೋಡಿಸಲಾಗುವುದು. ಸದ್ಯಕ್ಕೆ ಹಿಂದಿನಂತೆಯೇ ಪ್ಯಾಸೆಂಜರ್ ರೈಲು ಮಾತ್ರ ನಿಲುಗಡೆಯಾಗಲಿದೆ. ಇಲ್ಲಿ ಮುಂಬಯಿ- ಬೆಂಗಳೂರು ರೈಲುಗಳ ನಿಲುಗಡೆಗೂ ಅವಕಾಶ ಮಾಡಿಕೊಡಬೇಕೆಂಬ ಬೇಡಿಕೆ ಸ್ಥಳೀಯರಿಂದ ಕೇಳಿ ಬಂದಿದೆ.
-ಬಿ.ಬಿ. ನಿಕ್ಕಂ, ರೀಜನಲ್ ರೈಲ್ವೇ ಮ್ಯಾನೇಜರ್, ಕಾರವಾರ