ಚಿಂಚೋಳಿ: ಬಿಜೆಪಿ ಶಾಸಕ ಡಾ| ಅವಿನಾಶ ಜಾಧವ್ ಅವರು ಕರ್ನಾಟಕ ತಾಂಡಾಗಳ ಅಭಿವೃದ್ಧಿ ನಿಗಮದಿಂದ ಮಂಜೂರಿಗೊಳಿಸಿ ಹಳೆ ರಸ್ತೆ ಮೇಲೆ ಮರುನಿರ್ಮಾಣ ಮಾಡಿ ಹೊಸ ರಸ್ತೆ ಎಂದು ದಾಖಲೆ ಸೃಷ್ಟಿಸಿ ಹಣ ಲೂಟಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಸುಭಾಷ ರಾಠೊಡ ಗಂಭೀರ ಆರೋಪ ಮಾಡಿದರು.
ಪಟ್ಟಣದ ವೀರೇಂದ್ರ ಪಾಟೀಲ ಪಬ್ಲಿಕ ಶಾಲೆಯ ಸಭಾಂಗಣದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್‌ಯುವ ಸಮಿತಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜಿಪಿ ಸರಕಾರದಿಂದ ಆರೋಗ್ಯ ಶಿಕ್ಷಣಕ್ಕೆ ಯಾವುದೇ ಆದ್ಯತೆ ನೀಡದೇ ಕೇವಲ ರಸ್ತೆಗಳಿಗೆ ಪ್ರಧ್ಯಾನತೆ ನೀಡಲಾಗಿದೆ. ಐನಾಪೂರ ವಲಯದಲ್ಲಿ ಕರ್ನಾಟಕ ತಾಂಡಾಗಳ ಅಭಿವೃದ್ಧಿ ನಿಗಮ ವತಿಯಿಂದ 5 ಕೋಟಿ ರೂ. ಭ್ರಷ್ಟಾಚಾರ ನಡೆಸಲಾಗಿದೆ. ತಾಂಡಾಗಳಲ್ಲಿ ರಸ್ತೆ ಗುಣಮಟ್ಟ ಯಾರು ಕೇಳುವುದಿಲ್ಲ ಎನ್ನುವುದಕ್ಕಾಗಿ ಹಣ ಎತ್ತಿ ಹಾಕಲಾಗಿದೆ. ಚಿಂಚೋಳಿ ಮತಕ್ಷೇತ್ರದಿಂದ ಮಾಜಿ ಸಿಎಂ ವೀರೇಂದ್ರ ಪಾಟೀಲ, ದೇವೇಂದ್ರಪ್ಪ ಜಮಾದಾರ, ವೀರಯ್ಯ ಸ್ವಾಮಿ, ಕೈಲಾಸನಾಥ ಪಾಟೀಲ,ಮಾಜಿ ಸಚಿವ ದಿ|ವೈಜನಾಥ ಪಾಟೀಲ ಮತಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ವೀರೇಂದ್ರ ಪಾಟೀಲರ ಆಡಳಿತದಲ್ಲಿ ನಿರ್ಮಿಸಿದ ಮುಲ್ಲಾಮಾರಿ ಜಲಾಶಯ, ಚಂದ್ರಂಪಳ್ಳಿ ಜಲಾಶಯ, ರಸ್ತೆ ಸೇತುವೆಗಳು ಇಂದಿಗೂ ಶಾಶ್ವತವಾಗಿವೆ. ರಸ್ತೆಯ ಮೇಲೆ ರಸ್ತೆ ಮಾಡಿ ಹಣವನ್ನು ಲೂಟಿ ಮಾಡಿದರೆ ಅದು ಶಾಶ್ವತ ಇರುವುದಿಲ್ಲ ಎಂದು ಟೀಕಿಸಿದರು.
ಜಿಲ್ಲಾ ಯುವ ಅಧ್ಯಕ್ಷ ಶಿವಾನಂದ ಹೊನಗುಂಟಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಯುವಕರ ಶಕ್ತಿ ಅತಿ ಮಹತ್ವದಾಗಿದೆ. ಪಕ್ಷ ಯುವಕರಿಗೆ ಸಾಕಷ್ಟು ಬೆಂಬಲವನ್ನು ನೀಡಿ ಪ್ರೋತ್ಸಾಹಿಸಿ ಕೈ ಬಲಪಡಿಸುತ್ತಿದೆ. ಮುಂದಿನ 2023ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೆದಾರ ಮಾತನಾಡಿ, ತಾಲೂಕಿನಲ್ಲಿ ಬಿಜೆಪಿ ಅಭಿವೃದ್ಧಿ ಶೂನ್ಯವಾಗಿದೆ. ಸಂಸದ ಡಾ|ಉಮೇಶ ಜಾಧವ್ ಅವರನ್ನು ಪಕ್ಷಕ್ಕೆ ಕರೆ ತಂದು ಗೆಲ್ಲಿಸಲಾಗಿದೆ. ಆದರೆ ಪಕ್ಷಕ್ಕೆ ದ್ರೋಹ ಮಾಡಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅವರನ್ನು ಚುನಾವಣೆಯಲ್ಲಿ ಜನರೇ ತಕ್ಕಪಾಠ ಕಲಿಸುತ್ತಾರೆ. ನಮ್ಮ ಪಕ್ಷಕ್ಕೆ ಅಧಿಕಾರಕ್ಕೆ ತರಲು ಎಲ್ಲರ ಪರಿಶ್ರಮ ತುಂಬಾ ಅಗತ್ಯವಾಗಿದೆ ಎಂದರು.
ರಾಷ್ಟ್ರೀಯ ಯುವ ವಕ್ತಾರ ಚೇತನ ಗೋನಾಯಕ, ಗೋಪಾಲರಾವ ಕಟ್ಟಿಮನಿ, ಮಧುಸೂಧನರೆಡ್ಡಿ ಪಾಟೀಲ, ಚಿತ್ರಶೇಖರ ಪಾಟೀಲ, ರವಿರಾಜ ಕೊರವಿ, ಲಕ್ಷ್ಮೀದೇವಿ ಕೊರವಿ, ಬಸವರಾಜ ಮಲಿ, ಅಬ್ದುಲ್ ರವೂಫ ಮಿರಿಯಾಣ ಮಾತನಾಡಿದರು.
ವೇದಿಕೆಯಲ್ಲಿ ಪ್ರಭುಲಿಂಗ ಲೇವಡಿ, ದೇವೇಂದ್ರಪ್ಪ ಹೆಬ್ಟಾಳ, ವೀರಮ್ಮಸ್ವಾಮಿ, ಸುರೇಶ ಬಂಟಾ, ಅನಿಲಕುಮಾರ ಜಮಾದಾರ, ಶಬ್ಬೀರ ಅಹೆಮದ್, ಜಗನ್ನಾಥ ಕಟ್ಟಿ, ಜಗನ್ನಾಥ ಗುತ್ತೆದಾರ, ಪ್ರವೀಣಕುಮಾರ ತೇಗಲತಿಪ್ಪಿ, ನರಸಿಂಹಲು ಕುಂಬಾರ ಇನ್ನಿತರಿದ್ದರು. ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ನಾಗೇಶ ಗುಣಾಜಿ ಪ್ರಾಸ್ತಾವಿಕ ಮಾತನಾಡಿದರು. ಕೃಷ್ಣ ಬೀರಾಪೂರ ಸ್ವಾಗತಿಸಿದರು. ಶರಣು ಪಾಟೀಲ ನಿರೂಪಿಸಿದರು. ಅವಿರೋಧ ಕಟ್ಟಿಮನಿ ವಂದಿಸಿದರು.