ಬಾಳೆಹೊನ್ನೂರು: ಆಟೋದಲ್ಲಿ ಮೂರಕ್ಕಿಂತ ಹೆಚ್ಚು ಜನರ ಪ್ರಯಾಣ ನಿಷೇಧಿಸಿ ಹಾಗೂ ಸರಕು ವಾಹನದಲ್ಲಿ ಜನರನ್ನು ಕರೆದೊಯ್ಯುವುದನ್ನು ನಿರ್ಬಂಧಿಸಿರುವ ಸುಪ್ರೀಂಕೋರ್ಟ್, ತನ್ನ ಆದೇಶವನ್ನು ಮರು ಪರಿಶೀಲಿಸಬೇಕೆಂದು ಒತ್ತಾಯಿಸಿ ಆಟೋ ಸಂಘ ಹಾಗೂ ಗೂಡ್ಸ್, ಪಿಕಪ್ ವಾಹನಗಳ ಚಾಲಕರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ಬಾಳೆಹೊನ್ನೂರಿನ ಆಟೋ ಸಂಘ, ಕೂಲಿ ಕಾರ್ಮಿಕರ ಒಕ್ಕೂಟ, ಗೂಡ್ಸ್, ಪಿಕಪ್ ವಾಹನ ಹಾಗೂ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಸೋಮವಾರ ಪಟ್ಟಣದ ಶ್ರೀ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಿಂದ ರೋಟರಿ ವೃತ್ತದ ವರೆಗೆ ಹಾಗೂ ರೋಟರಿ ವೃತ್ತದಿಂದ ಜೆಸಿ ವೃತ್ತದ ವರೆಗೆ ಬೃಹತ್ ಮೆರವಣಿಗೆ ನಡೆಸಿದರು. ನಂತರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಇದಾದ ನಂತರ ನಾಡಕಚೇರಿ ಅಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಟಿ.ಎಂ.ಉಮೇಶ್ ಕಲ್ಮಕ್ಕಿ ಮಾತನಾಡಿ, ಕೆಲವು ದಿನಗಳ ಹಿಂದೆ ಸುಪ್ರೀಂಕೋರ್ಟ್ ಆಟೋದಲ್ಲಿ ಮೂರು ಜನ ಹಾಗೂ ಸರಕು ಸಾಗಣೆ ವಾಹನದಲ್ಲಿ ಯಾರೂ ಪ್ರಯಾಣಿಸದಂತೆ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ, ವಾಹನಗಳನ್ನು ತಡೆದು ಅಧಿಕ ದಂಡ ವಸೂಲಿ ಮಾಡಲಾಗುತ್ತಿದೆ. ಅಲ್ಲದೇ, ವಾಹನಗಳನ್ನು ಜಪ್ತಿ ಮಾಡುವುದರಿಂದ ಬಹಳಷ್ಟು ತೊಂದರೆಯುಂಟಾಗಿದೆ. ಇದರಿಂದಾಗಿ ಕೂಲಿ ಕಾರ್ಮಿಕರಿಗೆ ಹಾಗೂ ಎಲ್ಲಾ ವರ್ಗದ ಜನರಿಗೆ ಸಮಸ್ಯೆಯುಂಟಾಗುತ್ತಿದೆ. ಕೂಲಿ ಕಾರ್ಮಿಕರಿಗೆ ಹಾಗೂ ರೈತರು ಪಿಕಪ್ ಹಾಗೂ ಆಟೋ, ಗೂಡ್ಸ್ ವಾಹನಗಳನ್ನು ಬಳಸುವುದು ಅನಿವಾರ್ಯವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು.
ಆಟೋ ಸಂಘದ ಅಧ್ಯಕ್ಷ ಸಂದೇಶ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ರೈತರು ಹಾಗೂ ಕೂಲಿ ಕಾರ್ಮಿಕರು ಮತ್ತು ಗ್ರಾಮಸ್ಥರು ಮುಖ್ಯ ರಸ್ತೆಗೆ ತಲುಪಲು ಕನಿಷ್ಠ ಪಕ್ಷ 10ರಿಂದ 12ಕಿ.ಮೀ. ದೂರ ನಡೆದುಕೊಂಡೇ ಬರುವ ಪರಿಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ಆಟೋ ಹಾಗೂ ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಸಬೇಕಾದ ಅನಿವಾರ್ಯತೆಯಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜನಪ್ರತಿನಿಧಿಗಳು ವಿಧಾನಸಭೆ ಹಾಗೂ ಸಂಸತ್ತಿನಲ್ಲಿ ಈ ಕಾನೂನಿನ ಬಗ್ಗೆ ತಿದ್ದುಪಡಿ ತಂದು ಸುಪ್ರೀಂಕೋರ್ಟ್ ಮನವರಿಕೆ ಮಾಡಿಕೊಡಬೇಕು. ರೆಸಾರ್ಟ್ ರಾಜಕಾರಣ ಬಿಟ್ಟು ಉದ್ಭವಿಸಿರುವ ಸಮಸ್ಯೆ ಬಗೆಹರಿಸುವಲ್ಲಿ ರಾಜಕಾರಣಿಗಳು ಮುಂದಾಗಬೇಕೆಂದು ಕರೆ ನೀಡಿದರು.
ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಮಹಮ್ಮದ್ ಹನೀಫ್, ತಾಲೂಕು ಬಿಜೆಪಿ ಅಧ್ಯಕ್ಷ ವೆನಿಲಾ ಭಾಸ್ಕರ್, ಗ್ರಾಪಂ ಸದಸ್ಯ ರವಿಚಂದ್ರ, ತಾಪಂ ಸದಸ್ಯ ಕಲ್ಮಕ್ಕಿ ನಾಗೇಶ್, ಖಾಂಡ್ಯ ಹೋಬಳಿ ಬಿಜೆಪಿ ಅಧ್ಯಕ್ಷ ಹುಯಿಗೆರೆ ರವಿ, ಚಂದ್ರಶೇಖರ್, ಹೋಬಳಿ ಅಧ್ಯಕ್ಷ ಕೆ.ಕೆ.ವೆಂಕಟೇಶ್ ಮಾತನಾಡಿದರು.ತಾಪಂ ಉಪಾಧ್ಯಕ್ಷ ಹೊಳೆಬಾಗಿಲು ಮಂಜು, ಗ್ರಾಪಂ ಸದಸ್ಯೆ ಸೆಲ್ಫಿ, ಜಾನ್ ಡಿಸೋಜ, ಅರಳೀ ಕೊಪ್ಪ ಜಗದೀಶ್, ಅಟೋ ಚಾಲಕರ ಮತ್ತುಮಾಲಿಕರ ಸಂಘದ ಅನಿಲ್, ಮಹೇಶ್ ಶೆಟ್ಟಿ, ಗೂಡ್ಸ್, ಪಿಕಪ್, ಆಟೋ ಚಾಲಕರ ಮತ್ತು ಮಾಲಿಕರ ಸಂಘ, ವಿವಿಧ ಸಂಘಗಳ ಸದಸ್ಯರು, ಕೂಲಿ ಕಾರ್ಮಿಕರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.