Advertisement

ಮತ್ತೆ ಹೊಂದಾಣಿಕೆ ರಾಜಕಾರಣ ಸದ್ದು-ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ ಘೋಷಣೆ: CM ಸಿದ್ದು

11:03 PM Jul 12, 2023 | Team Udayavani |

ಬೆಂಗಳೂರು: ಹೊಂದಾಣಿಕೆ ರಾಜಕೀಯದ ವಿಚಾರ ವಿಧಾನಸಭೆಯಲ್ಲೂ ಸದ್ದು ಮಾಡಿದ್ದು, ನನ್ನ ಸುದೀರ್ಘ‌ ರಾಜಕೀಯ ಜೀವನದಲ್ಲಿ ಯಾರೊಂದಿಗೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ. ಒಂದು ವೇಳೆ ಈ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ವಿಪಕ್ಷ ನಾಯಕನ ಆಯ್ಕೆ ವಿಚಾರಕ್ಕೆ ಸಂಬಂಧಪಟ್ಟಂತೆ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಜತೆಗೆ ಜಟಾಪಟಿ ನಡೆಸುವ ಸಂದರ್ಭದಲ್ಲಿ ಸಿದ್ದರಾಮಯ್ಯ ಈ ಮಾತು ಹೇಳಿದ್ದಾರೆ.

Advertisement

ನಾನು ವಿಪಕ್ಷ ನಾಯಕನಾಗಬಾರದು ಎನ್ನುವ ರೀತಿಯಲ್ಲಿ ಸಿದ್ದರಾಮಯ್ಯ ಮಾತನಾಡಿದ್ದಾರೆ. ಹೀಗಾಗಿ ಅವರು ಯಾರಧ್ದೋ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದೆನಿಸುತ್ತದೆ’ ಎಂದು ಯತ್ನಾಳ್‌ ಮಾತಿನಲ್ಲಿ ತಿವಿದಾಗ ಸಿಟ್ಟಿಗೆದ್ದ ಸಿದ್ದರಾಮಯ್ಯ, ನಾನು ವಿಪಕ್ಷದಲ್ಲಿ ಇದ್ದಾಗ ಯಾವುದೇ ಸಚಿವರ ಮನೆಗೆ ಹೋಗಿದ್ದಾಗಲಿ, ಹೊಂದಾಣಿಕೆ ಮಾಡಿಕೊಂಡಿದ್ದಾಗಲಿ ಸಾಬೀತು ಮಾಡಿದರೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ. ಈ ಸದನದಲ್ಲಿ 1983ರಿಂದ ಇದ್ದೇನೆ. ನನ್ನ ಜತೆ ಸದನಕ್ಕೆ ಬಂದವರಲ್ಲಿ ಬಿ.ಆರ್‌.ಪಾಟೀಲ್‌ ದೇಶಪಾಂಡೆ ಬಿಟ್ಟು ಬೇರೆ ಯಾರೂ ಇಲ್ಲ. ಅಂದಿನಿಂದ ಇಲ್ಲಿಯವರೆಗೆ ಎಂದಿಗೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಕೆಲವು ಬಿಜೆಪಿ ಶಾಸಕರು, ವಿಪಕ್ಷದಲ್ಲಿದ್ದಾಗ ಅಭಿವೃದ್ಧಿ ವಿಷಯದ ಬಗ್ಗೆ ಮಾತನಾಡುವುದಕ್ಕೆ ಸಚಿವರ ಮನೆಗೆ ಹೋಗಬೇಕು ಎಂದಿಲ್ಲ. ಫೋನ್‌ ಮಾಡಿದರೂ ಸಾಕು ಎಂದು ಕಾಲೆಳೆದರು.

ನಾನೇ ವಿಪಕ್ಷ ನಾಯಕ
ಕಲಾಪ ಆರಂಭಗೊಂಡಾಗಿನಿಂದ ಚರ್ಚೆಗೆ ಬರುತ್ತಿರುವ ವಿಪಕ್ಷ ನಾಯಕನ ವಿಚಾರ ಬುಧವಾರವೂ ಪ್ರಸ್ತಾವವಾಯಿತು. ಪದೇಪದೆ ಎದ್ದು ನಿಂತು ಸರಕಾರವನ್ನು ಟೀಕಿಸುತ್ತಿದ್ದ ಯತ್ನಾಳ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ನೀವು ಪದೇಪದೆ ಎದ್ದು ನಿಂತ ಮಾತ್ರಕ್ಕೆ ನಿಮ್ಮನ್ನು ವಿಪಕ್ಷ ನಾಯಕರನ್ನಾಗಿ ಮಾಡಲ್ಲ. ನನಗಿರೋ ಮಾಹಿತಿ ಪ್ರಕಾರ ಏನೇ ಆದರೂ ನೀವು ಆಗಲ್ಲ’ ಎಂದು ಟಾಂಗ್‌ ಕೊಟ್ಟರು.

ಇದಕ್ಕೆ ತಿರುಗೇಟು ನೀಡದ ಯತ್ನಾಳ್‌, ನೀವು ಏನಾದ್ರೂ ಅನ್ಕೊಳ್ಳಿ; ನಾನೇ 100 ಪರ್ಸೆಂಟ್‌ ವಿಪಕ್ಷ ನಾಯಕ’ ಎಂದು ಯತ್ನಾಳ್‌ ಹೇಳಿದರೆ ಅದಕ್ಕೆ ಪ್ರತಿಯಾಗಿ ಇಲ್ಲ.. ಇಲ್ಲ.. ನನಗೆ ಇರೋ ಪಕ್ಕಾ ಮಾಹಿತಿ ಪ್ರಕಾರ ನಿನ್ನನ್ನು ಮಾಡಲ್ವಂತೆ. ಸುಮ್ನೆ ಕೂತ್ಕೊ’ ಎಂದು ಸಿದ್ದರಾಮಯ್ಯ ಹೇಳಿದರು. ಆರಂಭದಲ್ಲಿ ನಾನು ವಿಪಕ್ಷ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿಲ್ಲ ಎಂದ ಯತ್ನಾಳ್‌, ಬಳಿಕ ನೀವು ಇಲ್ಲಿಯವರೆಗೆ ಹೇಳಿರುವ ಭವಿಷ್ಯವೆಲ್ಲ ಸುಳ್ಳಾಗಿದೆ. ನಾನು ವಿಪಕ್ಷ ನಾಯಕನಾಗಲ್ಲ ಎಂದು ನೀವು ಇಷ್ಟು ದೃಢವಾಗಿ ಹೇಳುತ್ತಿರುವುದು ನೋಡಿದರೆ ನಾನು ಆಗೋದು ಫಿಕ್ಸ್‌’ ಎಂದರು.

ಅಶೋಕ, ಅಶ್ವತ್ಥನಾರಾಯಣ ಆಕಾಂಕ್ಷಿಗಳು: ಮಾತು ಮುಂದುವರಿಸಿದ ಸಿದ್ದರಾಮಯ್ಯ ಅವರು, ನೀವು ಆಕಾಂಕ್ಷಿಯಿರಬಹುದು. ಆದರೆ ನಿಮ್ಮೊಂದಿಗೆ ಅಶ್ವತ್ಥನಾರಾಯಣ, ಅಶೋಕ ಅವರೆಲ್ಲ ಆಕಾಂಕ್ಷಿಗಳಿದ್ದಾರೆ ಎಂದು ಕೈತೋರಿಸಿದರು. ಇದಕ್ಕೆ ಅಶೋಕ್‌ ಹಾಗೂ ಅಶ್ವತ್ಥನಾರಾಯಣ ನಾವು ರೇಸ್‌ನಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಆರಗ ಎದ್ದುನಿಂತು ಮಾತನಾಡಲು ನಿಂತಾಗ ನೀವೇನು ರೇಸ್‌ನಲ್ಲಿಲ್ಲ ಸುಮ್ನೆ ಕೂರಿ ಎಂದು ಸಿದ್ದರಾಮಯ್ಯ ಗದರಿದರು. ಆಗ ಬಿಜೆಪಿಯ ಹಲವು ಶಾಸಕರು, ಇಲ್ಲ.. ಇಲ್ಲ ನಿಮಗೆ ವಿಷಯ ಗೊತ್ತಿಲ್ಲ; ಆರಗ ಜ್ಞಾನೇಂದ್ರ ಅವರೂ ಈಗ ರೇಸ್‌ನಲ್ಲಿದ್ದಾರೆ ಎಂದರು.

Advertisement

ಭ್ರಷ್ಟಾಚಾರ ಯಾರದ್ದು?: ಕೈ-ಕಮಲ ಜಟಾಪಟಿ
ರಾಜ್ಯಪಾಲರ ವಂದನಾ ನಿರ್ಣಯದ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಹೊತ್ತಿಸಿದ ಕಿಡಿ ಸ್ವಲ್ಪ ಹೊತ್ತು ವಿಧಾನಸಭೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯದ ಜಟಾಪಟಿಗೆ ಕಾರಣವಾಯಿತು. ಪತ್ರಿಕೆಗಳಲ್ಲಿ ಒಂದೂವರೆ ಲಕ್ಷ ಕೋಟಿ ರೂ.ಭ್ರಷ್ಟಾಚಾರವಾಗಿದೆ ಎಂದು ಕಾಂಗ್ರೆಸ್‌ನವರು ಜಾಹೀರಾತು ನೀಡಿದ್ದಾರೆ ಎಂದು ಕುಮಾರಸ್ವಾಮಿ ಪ್ರಸ್ತಾಪಿಸುತ್ತಿದ್ದಂತೆಯೇ ಕಾಂಗ್ರೆಸ್‌ನ ಪ್ರಿಯಾಂಕ ಖರ್ಗೆ ಮಧ್ಯ ಪ್ರವೇಶಿಸಿ, ನಾವು ನೀಡಿದ ಜಾಹೀರಾತು ನಿಜ. ಆದರೆ ಅದನ್ನು ಬಿಜೆಪಿಯ ಶಾಸಕರು ಮತ್ತು ಸಂಸದರೇ ನೀಡಿದ ಹೇಳಿಕೆ ಆಧರಿಸಿ ನೀಡಿದ್ದೇವೆ ಎಂದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಡಾ| ಅಶ್ವತ್ಥ ನಾರಾಯಣ, ದಾಖಲೆ ಇಲ್ಲದೇ ಆರೋಪ ಮಾಡುವುದು ಸರಿಯಲ್ಲ. ಇದು ಕಾಂಗ್ರೆಸ್‌ನ ತಳಬುಡವಿಲ್ಲದ ಆರೋಪ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next