ಗೌರಿಬಿದನೂರು: ಸಾವಿರಾರು ವರ್ಷಗಳ ಇತಿಹಾಸ ಪರಂಪರೆಯುಳ್ಳ ದೇಶಿ ಕಲೆಗಳ ಪುನಶ್ಚೇತನಗೊಳಿಸುವ ಕರ್ತವ್ಯ ನಮ್ಮೆಲ್ಲರ ಮೇಲಿದ್ದು, ಈ ನಿಟ್ಟಿನಲ್ಲಿ ತಾಲೂಕಿನ ಹೂಸೂರು ಹೊರ ವಲಯದ ವಿಜ್ಙಾನ ಕೇಂದ್ರದ ಬಳಿ ಕಲೆಗಳ ತರಬೇತಿ ಕೇಂದ್ರ ಪ್ರಾರಂಭಗೊಳಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಶಾಸಕ ಎನ್. ಎಚ್.ಶಿವಶಂಕರರೆಡ್ಡಿ ತಿಳಿಸಿದರು.
ತಾಲೂಕಿನ ವಿಧುರಾಶ್ವತ್ಥ ಗ್ರಾಮದ ಸತ್ಯಾಗ್ರಹ ಸ್ಮಾರಕ ಪ್ರೌಢಶಾಲಾ ಆವರಣದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಗೌತಮಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ದೇಶಿ ಸಾಂಸ್ಕೃತಿಕ ಸಂಭ್ರಮ 2019 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. .
ಕನ್ನಡ ಪ್ರಾಧ್ಯಾಪಕ, ಪ್ರಗತಿಪರ ಚಿಂತಕ ಡಾ.ರಮೇಶಚಂದ್ರದತ್ತ ಮಾತನಾಡಿ, ಆಧುನಿಕ ಯುಗದಲ್ಲಿ ನೂರಾರು ಮಾಧ್ಯಮಗಳ ಭರಾಟೆಯಲ್ಲಿ ದೇಶಿ ಕಲೆಗಳು ಮರೀಚಿಕೆಯಾಗುತ್ತಿರುವುದು ವಿಷಾದನೀಯ ಎಂದರು. ತಾಪ ಉಪಾಧ್ಯಕ್ಷ ಪ್ರಕಾಶ್ ರೆಡ್ಡಿ ಮಾತನಾಡಿ, ದೇಶಿ ಕ್ರೀಡೆಗಳಾದ ಕಬಡ್ಡಿ, ಖೋ ಖೋ, ಚಿನ್ನಿದಾಂಡು, ಮರ ಕೋತಿ ಆಟಗಳಿಂದ ದೇಹ ಸದೃಢವಾಗುತ್ತದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ ರೆಡ್ಡಿ ಗ್ರಾಮೀಣ ಹಾಡುಗಳ ಮೂಲಕ ರಂಜಿಸಿದರು. ಕಾರ್ಯಕ್ರಮಕ್ಕೂ ಮುನ್ನ ತಮಟೆ ವಾದ್ಯ, ಕೀಲುಗೊಂಬೆ, ಏಕಪಾತ್ರಭಿನಯ ನಡೆಸಿಕೊಡಲಾಯಿತು.
ಪ್ರತಾಪ್ ಮತ್ತು ತಂಡದ ಡೊಳ್ಳು ಕುಣಿತ, ಗಾರುಡಿ ಗೊಂಬೆ, ಹೆಜ್ಜೆಕುಣಿತ ಪ್ರೇಕ್ಷಕರ ಮನಸೂರೆಗೊಂಡವು. ಗ್ರಾಪಂ ಅಧ್ಯಕ್ಷ ತಿಮ್ಮರೆಡ್ಡಿ, ತಾಪಂ ಉಪಾಧ್ಯಕ್ಷೆ ರತ್ನಮ್ಮ, ಸಾಂಸ್ಕೃತಿಕ ಚಿಂತಕ ಇಡಗೂರು ಸೋಮಯ್ಯ, ಗೌತಮಬುದ್ಧ ಸಾಮಾಜಿಕ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಇಡಗೂರು ವೈ.ಟಿ.ಪ್ರಸನ್ನಕುಮಾರ್, ನಾಟಕಕಾರ ಕೆ. ನಾಯಕ್, ಆರ್‌ಎಂಸಿ ಮಾಜಿ ಅಧ್ಯಕ್ಷ ಬೊಮ್ಮಣ್ಣ, ಶಿಕ್ಷಕ ಚಂದ್ರಪ್ಪ, ಕಲಾವಿದರಾದ ಚಂದ್ರು, ಕಿರಣ್, ರಾಮಕೃಷ್ಣ ಇದ್ದರು.