ಮೈಸೂರು: ಮಳೆ ಆಶ್ರಿತ ಪ್ರದೇಶದಲ್ಲಿ ಬೆಳೆಯುವ ಭತ್ತದ ಬೆಳೆಗೆ ಹೊಸ ಪ್ಯಾಕೇಜ್ ಘೋಷಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಪ್ರಕಾಶ್ ಕಮ್ಮರಡಿ ಹೇಳಿದರು.
ಕೃಷಿ ಇಲಾಖೆ, ಕೃಷಿ ಬೆಲೆ ಆಯೋಗ, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಸಹಜ ಸಮೃದ್ಧ, ಭತ್ತ ಉಳಿಸಿ ಆಂದೋಲನ ಮತ್ತು ಪ್ರಾಂತೀಯ ಸಹಕಾರ ಸಾವಯವ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ನಗರದ ಕಾಡಾ ಕಚೇರಿ ಆವರಣದಲ್ಲಿ ಆಯೋಜಿಸಿರುವ ದೇಸಿ ಅಕ್ಕಿ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ 21 ಲಕ್ಷ ಹೆಕ್ಟೇರ್ ಮಳೆ ಆಶ್ರಿತ ಪ್ರದೇಶವಿದ್ದು, ಕಳೆದ ಒಂದು ದಶಕದಲ್ಲಿ 5.46 ಲಕ್ಷ ಹೆಕ್ಟೇರ್ ಮಳೆ ಆಶ್ರಿತ ಪ್ರದೇಶದ ಕೃಷಿ ಭೂಮಿ ಕಡಿಮೆಯಾಗಿದೆ. ಆದರೆ, ಕರಾವಳಿ ಭಾಗದಲ್ಲಿ ಮಳೆ ಆಶ್ರಿತ ಪ್ರದೇಶದಲ್ಲಿ ಭತ್ತ ಬೆಳೆಯುವಿಕೆ ಹೆಚ್ಚಿದೆ. ಕರಾವಳಿಯ ಜನರಿಗೆ ಸಿರಿಧಾನ್ಯಕ್ಕಿಂತ ರಾಜಮುಡಿ ಭತ್ತವೇ ಪ್ರಧಾನ ಆಹಾರೋತ್ಪನ್ನವಾಗಿದೆ. ಆದ್ದರಿಂದ ಸರ್ಕಾರ ಗುಣಮಟ್ಟದ ಆಧಾರದಲ್ಲಿ ರಾಜಮುಡಿ ಭತ್ತ ಖರೀದಿಸಲು ಚಿಂತನೆ ನಡೆಸಬೇಕು ಎಂದು ತಿಳಿಸಿದರು.
ಬ್ರಾಂಡ್: ಕಬ್ಬು ಬೆಳೆಗಾರರಿಗೆ ಸಕ್ಕರೆ ಇಳುವರಿ ಆಧಾರದ ಮೇಲೆ ಬೆಲೆ ನಿಗದಿಪಡಿಸುವಂತೆ ಮಳೆ ಆಶ್ರಿತ ಪ್ರದೇಶದಲ್ಲಿ ಬೆಳೆದ ಭತ್ತದ ಬೆಳೆಗಳಿಗೆ ಬೆಲೆ ನಿಗದಿಪಡಿಸಬೇಕು ಎಂಬುದೂ ಸೇರಿದಂತೆ ರಾಜಮುಡಿಯನ್ನು ಭತ್ತದ ಬ್ರಾಂಡ್ ಆಗಿ ಪರಿಗಣಿಸುವಂತೆ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಅವರು ಹೇಳಿದರು.
ಶಾಸಕ ಎಸ್.ಎ.ರಾಮದಾಸ್ ಕಾರ್ಯಾಗಾರ ಉದ್ಘಾಟಿಸಿದರು. ಮೇಯರ್ ಪುಷ್ಪಲತಾ ಜಗನ್ನಾಥ್, ಸಂಪನ್ಮೂಲ ವ್ಯಕ್ತಿಗಳಾದ ಜಿ. ಕೃಷ್ಣಪ್ರಸಾದ್, ಡಾ. ರಾಜಣ್ಣ, ಹೊಯ್ಸಳ ಎಸ್. ಅಪ್ಪಾಜಿ, ಪದ್ಮಾವತಮ್ಮ, ಜಂಟಿ ಕೃಷಿ ನಿರ್ದೇಶಕ ಡಾ.ಎಂ.ಮಹಂತೇಶಪ್ಪ, ಪ್ರಾಂತೀಯ ಸಾವಯವ ಕೃಷಿಕರ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ರಮೇಶ್ ಪಿ.ರಂಗಸಮುದ್ರ ಮತ್ತಿತರರು ಹಾಜರಿದ್ದರು.