ಬೀದರ: ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮ ಮಾನ್ಯತೆಗೆ ಶಿಫಾರಸ್ಸು ಮಾಡಲು ಸಚಿವ ಸಂಪುಟ ಸಭೆ ತೀರ್ಮಾನ ಮಾಡಿದ ಹಿನ್ನೆಲೆಯಲ್ಲಿ ಸೋಮವಾರ ನಗರದಲ್ಲಿ ಲಿಂಗಾಯತ ಹೋರಾಟ ಸಮನ್ವಯ ಸಮಿತಿಯಿಂದ ಸಂಭ್ರಮ ಆಚರಿಸಲಾಯಿತು.
ಸಮಾಜ ಮುಖಂಡರಾದ ಕೆಎಸ್ ಆರ್‌ಟಿಸಿ ಉಪಾಧ್ಯಕ್ಷ ಬಸವರಾಜ ಬುಳ್ಳಾ, ಬಸವ ಕೇಂದ್ರದ ಅಧ್ಯಕ್ಷ ಶರಣಪ್ಪ ಮಿಠಾರೆ ನೇತೃತ್ವದಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಲಿಂಗಾಯತ ಧರ್ಮಿಯರು, ಬಸವಾನುಯಾಯಿಗಳು ಪಟಾಕಿ ಸಿಡಿಸಿ- ಸಿಹಿ ಹಂಚಿ ಸಂಭ್ರಮಪಟ್ಟರು. ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆಗಾಗಿ ಹೋರಾಟ ಶುರುವಾಗಿದ್ದೇ ಬೀದರನಿಂದ. ನಂತರ ಈ ಹೋರಾಟ ರಾಜ್ಯ ಮಾತ್ರವಲ್ಲ ನೆರೆಯ ಮಹಾರಾಷ್ಟ್ರ ಮತ್ತು ತೆಲಂಗಾಣಕ್ಕೂ ತಲುಪಿತ್ತು.
ಸಂಭ್ರಮಾಚರಣೆ ವೇಳೆ ಮಾತನಾಡಿದ ಬಸವರಾಜ ಬುಳ್ಳಾ, ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಮತ್ತು ಅಲ್ಪಸಂಖ್ಯಾತರ ಸ್ಥಾನ ನೀಡಬೇಕೆಂದು ನ್ಯಾ| ನಾಗಮೋಹನದಾಸ ಸಮಿತಿ ಇತ್ತೀಚಿಗೆ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ, ಒಮ್ಮತದೊಂದಿಗೆ ಸಮಿತಿಯ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿ, ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ಕೋರಲು ನಿರ್ಣಯ ಕೈಗೊಳ್ಳಲಾಗಿದೆ. ಇದೊಂದು ಐತಿಹಾಸಿಕ ನಿಲುವು ಆಗಿದೆ ಎಂದು ಹೇಳಿದರು.
ಬಸವ ಕೇಂದ್ರದ ಪ್ರಭುರಾವ್ ವಾಸ್ಮತೆ, ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲ ಪಾಟೀಲ, ಲಿಂಗಾಯತ ಬ್ರಿಗೇಡ್ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ, ಚನ್ನಬಸವ ಹಂಗರಗಿ, ರಾಜಕುಮಾರ ಕಮಠಾಣೆ, ಪ್ರಕಾಶ ಸಾವಳಗಿ, ಸಿದ್ರಾಮಪ್ಪ ಕಪಲಾಪುರ, ಅಶೋಕ ಶಿಲವಂತ, ಸಾಯನಾಥ ನಾಗೂರೆ, ಶಾಂತಕುಮಾರ ಬಿರಾದಾರ, ನಂದಕುಮಾರ ಪಾಟೀಲ, ವಿವೇಕಾನಂದ ಪಟೆ, ಶಾಂತಮ್ಮ ಹಾರೂರಗೇರಿ ಇದ್ದರು.