Advertisement

ಹಿರಿಯ ಸದಸ್ಯರ ಸಮಿತಿ ರಚನೆಗೆ ಶಿಫಾರಸು

12:41 AM Jan 30, 2020 | Team Udayavani |

ಬೆಂಗಳೂರು: ಆಸ್ತಿ ತೆರಿಗೆ ಸಂಗ್ರಹಣೆ ಹಾಗೂ ಖಾತಾ ನೋಂದಣಿ, ಬದಲಾವಣೆ, ವಿಂಗಡಣೆ ಸೇರಿ ವಿವಿಧ ವಿಷಯಗಳ ಬಗ್ಗೆ ಚರ್ಚೆಗೆ ಮಾಜಿ ಮೇಯರ್‌ಗಳು ಹಾಗೂ ಹಿರಿಯ ಸದಸ್ಯರ ನೇತೃತ್ವದ ಸಮಿತಿ ರಚಿಸುವಂತೆ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಶಿಫಾರಸು ಮಾಡಿದ್ದಾರೆ.

Advertisement

ಸಾಮಾನ್ಯ ಸಭೆಯಲ್ಲಿ ಬುಧವಾರ ಮಾತನಾಡಿದ ಆಯುಕ್ತರು, ಈ ಹಿಂದಿನ ಸಭೆಯಲ್ಲಿ ಚರ್ಚಿಸಲಾದ ಆಸ್ತಿ ತೆರಿಗೆ ಸಂಗ್ರಹ, ಟೋಟಲ್‌ ಸ್ಟೇಷನ್‌ ಸರ್ವೇ ಹಾಗೂ ಖಾತಾ ನೋಂದಣಿ ವಿಷಯಗಳಲ್ಲಿ ಕೆಲವು ಗೊಂದಲಗಳಿರುವುದರಿಂದ ಪಾಲಿಕೆ ನಷ್ಟವಾಗುತ್ತಿದೆ. ಈ ಬಗ್ಗೆ ಪಾಲಿಕೆ ಕಠಿಣ ಕ್ರಮ ಕೈಗೊಳ್ಳಬೇಕಾಗಿರುವುದರಿಂದ ಹಿರಿಯ ಸದಸ್ಯರು ಹಾಗೂ ಮಾಜಿ ಮೇಯರ್‌ಗಳ ನೇತೃತ್ವದ ಸಮಿತಿ ರಚಿಸಿ ಚರ್ಚಿಸುವ ಅಗತ್ಯವಿದೆ.

ಈ ನಿಟ್ಟಿನಲ್ಲಿ ಕೌನ್ಸಿಲ್‌ ಸೂಕ್ತ ನಿರ್ಣಯ ತೆಗೆದುಕೊಳ್ಳ ಬೇಕು ಎಂದರು. ಬಿಬಿಎಂಪಿಗೆ 2006ರಲ್ಲಿ 110 ಹಳ್ಳಿಗಳು ಸೇರ್ಪಡೆಗೊಂಡ ನಂತರ ಸಾಕಷ್ಟು ಬದಲಾವಣೆ ಮಾಡಬೇಕಾಗಿತ್ತು. ಆದರೆ, ಈ ವರೆಗೂ ಮಾಡಿಲ್ಲ. ಇದರಿಂದ ಪಾಲಿಕೆಗೆ ಆರ್ಥಿಕ ನಷ್ಟ ಉಂಟಾಗಿದೆ. ಆಸ್ತಿ ತೆರಿಗೆ ದರ ಏರಿಕೆ, ವಲಯ ಬದಲಾವಣೆ ಮಾಡಿದರೆ ಪಾಲಿಕೆಗೆ ಅಪಾರ ಆದಾಯ ಬರುವ ನಿರೀಕ್ಷೆ ಇದೆ. ಈ ಬಗ್ಗೆ ಚರ್ಚೆಗೆ ಪ್ರತ್ಯೇಕ ಸಭೆಗಾಗಿ ಮನವಿ ಮಾಡಿದರು.

“ಇಂದೋರ್‌’ ವಿವರಣೆಗೆ ಸಭೆ: ಜೋಗುಪಾಳ್ಯ, ಜಕ್ಕೂರು ವಾರ್ಡ್‌ ಸೇರಿ ನಾಲ್ಕು ವಾರ್ಡ್‌ಗಳಲ್ಲಿ ಇಂದೋರ್‌ ಮಾದರಿಯಲ್ಲಿ ಕಸ ಸಂಗ್ರಹಿಸುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ. ಈ ಮಾದರಿಯನ್ನು 198 ವಾರ್ಡ್‌ಗಳಲ್ಲಿ ಅಳವಡಿಸಿಕೊಳ್ಳುವ ಕುರಿತು ಸದಸ್ಯರಿಗೆ ವಿವರಣೆ ನೀಡಲು ಪ್ರತ್ಯೇಕ ಕೌನ್ಸಿಲ್‌ ಸಭೆ ಕರೆಯಬೇಕು ಎಂದು ಆಯುಕ್ತರು ಮನವಿ ಮಾಡಿದರು..

ಒಂಟಿ ಮನೆಗೆ ಅನುದಾನ ಕೊರತೆ ಇಲ್ಲ: ಒಂಟಿ ಮನೆ ಯೋಜನೆಗೆ ಅನುದಾನ ಕೊರತೆ ಇಲ್ಲ. 2013-14ನೇ ಸಾಲಿನಿಂದ 2017-18ರ ವರೆಗೆ 668 ಕೋಟಿ ರೂ. ವೆಚ್ಚದಲ್ಲಿ 17,610 ಒಂಟಿ ಮನೆ ನಿರ್ಮಿಣಕ್ಕೆ ಮಂಜೂರಾತಿ ನೀಡಲಾಗಿದೆ. ಈಗಾಗಲೇ 248 ಕೋಟಿ ರೂ. ವೆಚ್ಚದಲ್ಲಿ 6,830 ಮನೆ ನಿರ್ಮಿಸಲಾಗಿದೆ. 248 ಕೋಟಿ ರೂ. ವೆಚ್ಚದಲ್ಲಿ 6,426 ಒಂಟಿ ಮನೆ ನಿರ್ಮಾಣ ಪ್ರಗತಿಯಲ್ಲಿದ್ದು, 4,354 ಮನೆ ನಿರ್ಮಿಸಬೇಕಿದೆ ಎಂದು ಆಯುಕ್ತ ಅನಿಲ್‌ಕುಮಾರ್‌ ವಿವರಿಸಿದರು.

Advertisement

ಮುಖ್ಯಸ್ಥರಿಗೆ ಪತ್ರ: ಇನ್ನು ಮುಂದೆ ಪಾಲಿಕೆಯ ಸಾಮಾನ್ಯ ಸಭೆಗೆ ಜಲಮಂಡಳಿ, ಜೆಸ್ಕಾಂ ಹಾಗೂ ಸಂಚಾರ ಪೊಲೀಸ್‌ ವಿಭಾಗ ಸೇರಿ ನಗರಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು ಎಂದು ಎಲ್ಲಾ ಇಲಾಖೆಯ ಮುಖ್ಯಸ್ಥರಿಗೆ ಪತ್ರ ಬರೆಯಲಾಗುವುದು. ಸಭೆಗೆ ಗೈರುಹಾಜರಾಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ಅನಿಲ್‌ ಕುಮಾರ್‌ ತಿಳಿಸಿದರು.

ಬೌನ್ಸ್‌ ಸ್ಕೂಟರ್‌ ಸಂಸ್ಥೆ ವಿರುದ್ಧ ಕ‹ಮ ಏಕಿಲ್ಲ?: ಎಲ್ಲೆಂದರಲ್ಲಿ ನಿಲ್ಲುವ “ಬೌನ್ಸ್‌’ ದ್ವಿಚಕ್ರ ವಾಹನಗಳಿಂದ ಸಾರ್ವಜನಿಕರು, ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದ್ದು, ಈ ವಾಹನವನ್ನು ಬಾಡಿಗೆಗೆ ಬಿಟ್ಟಿರುವ ಸಂಸ್ಥೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪಾಲಿಕೆ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು. ಎಲ್ಲೆಂದರಲ್ಲಿ ಸ್ಕೂಟರ್‌ ನಿಲ್ಲಿಸಿ ತೆರಳುತ್ತಾರೆ. ಈ ಬಗ್ಗೆ ಸಂಚಾರ ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದರು.

ಮಹಿಳೆಯರಿಗೆ ಎಲೆಕ್ಟ್ರಿಕ್‌ ಸ್ಕೂಟರ್‌: ಪಾಲಿಕೆಯ ಕೇಂದ್ರ ಕಚೇರಿ ಅವರಣದಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಕಲ್ಯಾಣ ಕಾರ್ಯಕ್ರಮದ ಅನುದಾನದ ಆಡಿಯಲ್ಲಿ ಮಹಿಳೆಯರಿಗೆ ಪರಿಸರ ಸ್ನೇಹಿ ಎಲೆಕ್ಟ್ರಿಕಲ್‌ ಸ್ಕೂಟರ್‌ ವಿತರಣೆ ಯೋಜನೆ ಹಾಗೂ ಎಲೆಕ್ಟ್ರಿಕ್‌ ಸ್ಕೂಟರ್‌ ಗುಣಮಟ್ಟ ಪರಿಶೀಲನೆಗೆ ಮೇಯರ್‌ ಗೌತಮ್‌ ಕುಮಾರ್‌ ಚಾಲನೆ ನೀಡಿದರು. ಈ ವೇಳೆ ಮೇಯರ್‌ ಮಾತನಾಡಿ, ಮಹಿಳೆಯರಿಗೆ ಉಚಿತವಾಗಿ ಎಲೆಕ್ಟ್ರಿಕ್‌ ಸ್ಕೂಟರ್‌ ನೀಡಲು ಪ್ರತಿ ವಾರ್ಡ್‌ಗೆ 10 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ಹೇಳಿದರು.

ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಹನುಮಂತಯ್ಯ ಮಾತನಾಡಿ, ಮಹಿಳೆಯರ ಸ್ವಾವಲಂಬಿ ಜೀವನಕ್ಕಾಗಿ ಹೊಲಿಗೆ ಯಂತ್ರ, ಎಲೆಕ್ಟ್ರಿಕ್‌ ಸ್ಕೂಟರ್‌ ಮತ್ತು ದಿವ್ಯಾಂಗರಿಗೆ ತಿಚಕ್ರ ವಾಹನ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗ್ಳನ್ನು ವಿತರಣೆ ಮಾಡಲಾಗುವುದು ಎಂದು ಹೇಳಿದರು. ಉಪ ಮೇಯರ್‌ ರಾಮ ಮೋಹನ್‌ ರಾಜು, ವಿರೋಧ ಪಕ್ಷದ ಮಾಜಿ ನಾಯಕರಾದ ಪದ್ಮನಾಭ ರೆಡ್ಡಿ, ಪಾಲಿಕೆ ಸದಸ್ಯ ಕೆ.ಉಮೇಶ್‌ ಶೆಟ್ಟಿ ಇದ್ದರು.

ಅನಧಿಕೃತ ಮತ್ತು ಕೆಟ್ಟುನಿಂತಿರುವ ವಾಹನಗಳನ್ನು ಜಕ್ಕೂರಿನ ಕೆರೆ ಭಾಗಕ್ಕೆ ಸ್ಥಳಾಂತರಿಸಲಾಗುತ್ತಿದೆ. ಈಗಾಗಲೇ ನಗರದಲ್ಲಿರುವ ಇಂತಹ ಶೇ.60 ವಾಹನಗಳನ್ನು ಸ್ಥಳಾಂತರಿಸಲಾಗಿದೆ.
-ರಂಗಸ್ವಾಮಿ, ಎಸಿಪಿ ಸಂಚಾರ

Advertisement

Udayavani is now on Telegram. Click here to join our channel and stay updated with the latest news.

Next