Advertisement

ಶೀಘ್ರ ಇತ್ಯರ್ಥಕ್ಕಾಗಿ ವಿಶೇಷ ನ್ಯಾಯಾಲಯಕ್ಕಾಗಿ ಶಿಫಾರಸು

09:26 PM Jun 15, 2019 | Lakshmi GovindaRaj |

ಚಾಮರಾಜನಗರ: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲೂ ವಿಶೇಷ ನ್ಯಾಯಾಲಯ ಆರಂಭಿಸಲು ಕರ್ನಾಟಕ ವಿಧಾನಮಂಡಲ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಶಿಫಾರಸ್ಸು ಮಾಡಲಿದೆ.

Advertisement

ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ಅನುಸೂಚಿತ ಜಾತಿ ಮತ್ತು ಪಂಗಡಗಳ ಯೋಜನೆ ಅನುದಾನ ಇನ್ನಿತರ ಕಲ್ಯಾಣ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಪ್ರಗತಿ ಪರಿಶೀಲನೆ ಸಭೆ ಬಳಿಕ ಸಮಿತಿ ಅಧ್ಯಕ್ಷ ಎಚ್‌.ಕೆ. ಕುಮಾರಸ್ವಾಮಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳು ಶೀಘ್ರ ಇತ್ಯರ್ಥಗೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲೆಗಳಲ್ಲೂ ವಿಶೇಷ ನ್ಯಾಯಾಲಯ ತೆರೆಬೇಕೆಂಬ ಶಿಫಾರಸ್ಸು ಮಾಡಲಿದ್ದೇವೆ. ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ದಲಿತರ ಮೇಲಿನ 94 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 70 ಪ್ರಕರಣಗಳು ನ್ಯಾಯಾಲಯದ ವಿಚಾರಣೆ ಹಂತದಲ್ಲಿವೆ. ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಪೊಲೀಸರು ವಹಿಸಬೇಕಿರುವ ಕ್ರಮಗಳಿಗೆ ಮುಂದಾಗುವಂತೆ ತಿಳಿಸಲಾಗಿದೆ ಎಂದು ವಿವರಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಸರ್ಕಾರ ಅನುದಾನ ನೀಡುತ್ತಿದೆ. ಈ ಅನುದಾನದ ಯೋಜನೆಗಳು ಫ‌ಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿದೆಯೇ? ಇದರಿಂದ ಪರಿಶಿಷ್ಟರು ಸ್ವಾಭಿಮಾನದ ಬದುಕು, ಜೀವನ ನಡೆಸಲು ಸಾಧ್ಯವಾಗುತ್ತಿದೆಯೇ?ಎಂಬ ಬಗ್ಗೆ ಸಮಿತಿ ಪರಿಶೀಲಿಸುತ್ತಿದೆ ಎಂದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಕಲ್ಯಾಣ ಕಾರ್ಯಕ್ರಮಗಳು ಎಷ್ಟರಮಟ್ಟಿಗೆ ಪ್ರಗತಿಯಾಗುತ್ತಿದೆ ಎಂಬ ಬಗ್ಗೆ ಪ್ರತ್ಯೇಕ ಸಭೆಯನ್ನು ಮೂರು ತಿಂಗಳಿಗೊಮ್ಮೆ ನಡೆಸಬೇಕು. ಕಾರ್ಯಕ್ರಮಗಳ ಪ್ರಯೋಜನ ಅರ್ಹ ಫ‌ಲಾನುಭವಿಗಳಿಗೆ ತಲುಪುತ್ತಿದೆಯೆ ಎಂಬ ಬಗ್ಗೆ ಪ್ರಗತಿ ಪರಿಶೀಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

Advertisement

ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದ ಯುವಕನ ಬೆತ್ತಲೆ ಪ್ರಕರಣ ಸಂಬಂಧ ಘಟನಾ ಸ್ಥಳಕ್ಕೆ ಸಮಿತಿ ಭೇಟಿ ನೀಡಿ ವಿವರ ಪಡೆದುಕೊಂಡಿದೆ. ಜೂನ್‌ 3ರಂದು ಘಟನೆ ನಡೆದಿದ್ದರೂ ಜೂನ್‌ 10ರಂದು ಪ್ರಕರಣ ದಾಖಲಾಗಿದೆ. ಹಿರಿಯ ಪೊಲೀಸ್‌ ಅಧಿಕಾರಿಗಳಿಂದ ಹಿಡಿದು ಕೆಳಹಂತದ ಅಧಿಕಾರಿವರೆಗೂ ಪ್ರಕರಣ ನಿರ್ವಹಣೆಯಲ್ಲಿ ಉದಾಸೀನ ತೋರಿರುವುದು ಗಮನಕ್ಕೆ ಬಂದಿದೆ.

ಇನ್ನುಮುಂದೆ ಹೀಗೆ ನಡೆದುಕೊಳ್ಳದೇ ಅತ್ಯಂತ ಗಂಭೀರ ಹಾಗೂ ನಿಷ್ಪಕ್ಷವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ ಎಂದರು. ಸಮಿತಿ ಸದಸ್ಯರಾಗಿರುವ ಶಾಸಕ ಎನ್‌. ಮಹೇಶ್‌, ಬಸವರಾಜ್‌ ಮತ್ತಿಮೂಡ್‌, ಆರ್‌. ಪ್ರಸನ್ನಕುಮಾರ್‌, ಆರ್‌. ಧರ್ಮಸೇನ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ. ಆನಂದ್‌ಕುಮಾರ್‌ ಹಾಜರಿದ್ದರು.

ಸುದ್ದಿಗೋಷ್ಠಿಗೂ ಮುನ್ನ ಜಿಪಂ ಸಭಾಂಗಣದಲ್ಲಿ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾ ಎಚ್‌.ಕೆ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಸಂಬಂಧ ವಿವಿಧ ಇಲಾಖೆಗಳ ಕಾರ್ಯಕ್ರಮ, ಯೋಜನೆ, ಅನುದಾನ ಬಳಕೆ, ಜಮೀನು ಪರಿಹಾರ, ಕೆಬ್ಬೆಕಟ್ಟೆ ಪ್ರಕರಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆ ನಡೆಯಿತು.

ಸಮಿತಿಯ ಸದಸ್ಯರಾಗಿರುವ ಶಾಸಕರಾದ ಎನ್‌. ಮಹೇಶ್‌, ಬಸವರಾಜ್‌ ಮತ್ತಿಮೂಡ್‌, ಆರ್‌. ಪ್ರಸನ್ನಕುಮಾರ್‌, ಆರ್‌. ಧರ್ಮಸೇನಾ, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ. ಆನಂದ್‌ಕುಮಾರ್‌, ದಕ್ಷಿಣ ವಲಯದ ಐ.ಜಿ.ಪಿ. ಉಮೇಶ್‌ಕುಮಾರ್‌, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌. ಲತಾಕುಮಾರಿ, ವಿಧಾನಸಭೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಮಲ್ಲಪ್ಪ ಬಿ. ಕಾಳೆ, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌. ಆನಂದ್‌ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next