Advertisement
ಪಶ್ಚಿಮ ಘಟ್ಟದ ತಪ್ಪಲಿನ ಶಿಶಿಲ, ಅಡ್ಡಹೊಳೆ, ರಾಮನ ಗುಳಿ ಸಹಿತ ದಕ್ಷಿಣ ಕನ್ನಡ ಜಿಲ್ಲೆಯ 8, ಉಡುಪಿಯ ಸೀತಾನದಿ, ಕೊಡಗಿನ 2, ಮಂಡ್ಯದ 2, ಉತ್ತರ ಕನ್ನಡ ಮತ್ತು ಕಲಬುರಗಿ ಜಿಲ್ಲೆಗಳ ತಲಾ ಒಂದು ಸ್ಥಳಗಳನ್ನು “ಮತ್ಸ್ಯಧಾಮ’ ಎಂದು ಗುರುತಿಸಲಾಗಿದೆ. ಇವು ಮಹಶೀರ್, ಹರಗಿ (ಹುಲ್ಲುಗೆಂಡೆ), ಪರ್ಲ್ಸ್ಪಾಟ್ ಸಾಲ್ಮೊಸ್ಟೋಮ್ ಮುಂತಾದ ಅಪರೂಪದ ಮೀನು ಸಂತತಿಗಳ ಆವಾಸಸ್ಥಾನವಾಗಿರುವುದನ್ನು ಗುರುತಿಸಲಾಗಿದೆ. ಈಗಾಗಲೇ ಶೃಂಗೇರಿ, ಸುಳ್ಯದ ತೊಡಿಕಾನ, ಶಿವನ ಸಮುದ್ರ, ಹರಿಹರಪುರ, ತಿಂಗಳೆ, ರಾಮನಾಥಪುರ ಮುಂತಾದ 11 ಸ್ಥಳಗಳಲ್ಲಿ “ಮತ್ಸ್ಯಧಾಮ’ ಘೋಷಣೆ ಆಗಿದೆ ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ತಿಳಿಸಿದ್ದಾರೆ. ಅವರು ಇತ್ತೀಚೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿ ಮಾಡಿ ವಿವರ ನೀಡಿದರು.
ಬೆಳ್ತಂಗಡಿಯ ಶಿಶಿಲೇಶ್ವರ ದೇಗುಲದ “ಮತ್ಸ್ಯತೀರ್ಥ’ ದಲ್ಲಿ ಮಹಶೀರ್ ಮೀನುಗಳಿವೆ. ಸುಳ್ಯ ತಾಲೂಕಿನ ತೊಡಿಕಾನದ ಮಲ್ಲಿಕಾರ್ಜುನ ದೇವಸ್ಥಾನದ ತೀರ್ಥದಲ್ಲಿಯೂ ಇದೇ ಜಾತಿಯ ಮೀನುಗಳಿವೆ. ಮಹಶೀರ್ ಮೀನಿಗೆ ಸ್ಥಳೀಯವಾಗಿ ಪೆರುವೋಳ್ ಎನ್ನುತ್ತಾರೆ. ಕಪಿಲಾ ನದಿ ಇವುಗಳ ಆಶ್ರಯ ತಾಣ. ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ತಾಣಗಳ ಪಟ್ಟಿಯಲ್ಲೂ ಇದು ಸೇರಿದೆ.