Advertisement

ಜನಾಭಿಪ್ರಾಯಕ್ಕೆ ಮನ್ನಣೆ: ಎಚ್ಡಿಕೆ

10:54 AM Mar 07, 2018 | |

ಮಹಾನಗರ : ‘ನಾನು ಸಿಎಂ ಆದರೆ ಹೆಸರಿಗೆ ಮಾತ್ರ ಸಿಎಂ ಆಗುವುದಿಲ್ಲ. ರಾಜ್ಯದ ಆರುವರೆ ಕೋಟಿ ಜನಾಭಿಪ್ರಾಯ ಪಡೆದು ಅವರ ಆ ಪ್ರಕಾರ ನಡೆಯುತ್ತೇನೆ’ ಹೀಗೆಂದು ಹೇಳಿದವರು ಜೆಡಿಎಸ್‌ ರಾಜ್ಯ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರ ಸ್ವಾಮಿ.

Advertisement

ಮಂಗಳವಾರ ಮಂಗಳೂರಿಗೆ ಆಗಮಿಸಿದ್ದ ಅವರು ತಾಜ್‌ ಗೇಟ್‌ ವೇ ಹೊಟೇಲ್‌ನಲ್ಲಿ ಫೋರಂ ಫೋರ್‌ ಡೆಮೋಕ್ರೆಸಿ ವತಿಯಿಂದ ನಡೆದ ‘ಬಲ್ಲವರೊಂದಿಗೆ ಬೌದ್ಧಿಕ ಸಂವಾದ’ದಲ್ಲಿ ಮಾತನಾಡಿ, ಈ ಬಾರಿ ತಾನು ಮುಖ್ಯಮಂತ್ರಿ ಆಗುವ ಬಗ್ಗೆ ಭರವಸೆ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಹೊಸ ಬದಲಾವಣೆ ಮಾಡಬೇಕು ಎಂಬ ಹಂಬಲವಿದೆ. ಸಿಎಂ ಆದವರು ಒಂದು ಜಾತಿಗೆ ಸೀಮಿತವಾಗದೆ ಎಲ್ಲರನ್ನೂ ಸಮಾನವಾಗಿ ಕಾಣಬೇಕೆಂದರು.

ಸಿಂಗಾರ ಅರಳಿಸಿ ಉದ್ಘಾಟನೆ
ಎಚ್‌.ಡಿ. ಕುಮಾರ ಸ್ವಾಮಿ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ವೇದಿಕೆಯ ಗೌರವ ಸಲಹೆಗಾರ ಬಿ.ಎಂ. ಫಾರೂಕ್‌, ಹಿರಿಯ ಮೂಳೆ ತಜ್ಞ ಡಾ| ಎಂ. ಶಾಂತಾರಾಮ ಶೆಟ್ಟಿ, ಕರ್ನಾಟಕ ದಾರಿಮಿ ಅಸೋಸಿಯೇಶನ್‌ನ ಕಾರ್ಯದರ್ಶಿ ಮೌಲಾನಾ ಅಬ್ದುಲ್‌ ಅಝೀಜ್‌ ದಾರಿಮಿ, ಮಂಗಳೂರು ಧರ್ಮ ಪ್ರಾಂತದ ಪ್ರಧಾನ ಗುರು ಮೊ| ಡೆನಿಸ್‌ ಮೊರಾಸ್‌ ಪ್ರಭು ಅವರು ಅಡಿಕೆ ಹೂವು ಸಿಂಗಾರವನ್ನು ಅರಳಿಸಿ ಕಾರ್ಯಕ್ರಮ ಉದ್ಘಾಟಿಸಿದರು. 

ಬಿ.ಎಂ. ಫಾರೂಕ್‌ ಪ್ರಸ್ತಾವನೆಗೈದು, ಆಯಾ ಪ್ರದೇಶದ ನೈಜ ಸಮಸ್ಯೆಗಳನ್ನು ಅರಿಯಲು ಇಂತಹ ಸಂವಾದ ಏರ್ಪಡಿಸಲಾಗುತ್ತಿದೆ. ರಾಜ್ಯದ ವಿವಿಧೆಡೆ ಸಂವಾದ ಹಮ್ಮಿಕೊಳ್ಳಲಾಗಿದೆ ಎಂದರು.  ಸರಕಾರಗಳು ಜನರ ಆರೋಗ್ಯ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ಡಾ| ಎಂ. ಶಾಂತಾರಾಮ ಶೆಟ್ಟಿ ಅಭಿಪ್ರಾಯ ಮಂಡಿಸಿದರು.

ವಿವಿಧ ಗೊಂದಲಗಳ ಪ್ರಸ್ತಾವ
ಮೌಲಾನಾ ಅಬ್ದುಲ್‌ ಅಝೀಜ್‌ ದಾರಿಮಿ ಅವರು, ಸಂವಿಧಾನದ ಬದಲಾವಣೆ ಬಗ್ಗೆ ಕೇಳಿ ಬರುತ್ತಿರುವ ಮಾತುಗಳು, ಮತ ಯಂತ್ರಗಳ ಬಗೆಗಿನ ಅನುಮಾನ, ಮದ್ರಸಗಳ ಕುರಿತು ಗೊಂದಲ, ಜಾತ್ಯತೀತ ವ್ಯವಸ್ಥೆ ಬಗೆಗಿನ ಅಣಕ ಇತ್ಯಾದಿ ವಿಷಯಗಳನ್ನು ಪ್ರಸ್ತಾವಿಸಿದರು. ಮೊ| ಡೆನಿಸ್‌ ಮೊರಾಸ್‌ ಪ್ರಭು ಅವರು, ಕರಾವಳಿ ಪ್ರದೇಶದಲ್ಲಿರುವ ಆತಂಕದ ವಾತಾವರಣವನ್ನು ವಿವರಿಸಿದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಎಚ್‌.ಡಿ. ಕುಮಾರ ಸ್ವಾಮಿ, ಸರಕಾರಗಳ ವೈಫಲ್ಯದ ಬಗ್ಗೆ ಚರ್ಚೆ ನಡೆಯಬೇಕು. ಮುಖ್ಯಮಂತ್ರಿ ಆದವರು ತಿಂಗಳಿಗೆ ಒಂದು ಬಾರಿಯಾದರೂ ಸಮಸ್ಯೆಗಳಿರುವ ಪ್ರದೇಶಗಳಿಗೆ ತೆರಳಿ ಅಲ್ಲಿ ಎಲ್ಲ ಸಮುದಾಯಗಳ ಧಾರ್ಮಿಕ/ ಸಾಮಾಜಿಕ ಮುಖಂಡರನ್ನು ಕರೆಸಿ ಮುಕ್ತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ತಾನು ಮುಖ್ಯಮಂತ್ರಿಯಾದರೆ ಈ ರೀತಿ ನಡೆದುಕೊಳ್ಳುತ್ತೇನೆ ಎಂದು ತಿಳಿಸಿದರು. ಗೋವುಗಳ ಹೆಸರಿನಲ್ಲಿ ನಡೆಯುವ ಸಂಘರ್ಷವನ್ನು ಉಲ್ಲೇಖೀಸಿದ ಅವರು ಗೋ ರಕ್ಷಕರಿಗೆ ಒಂದೊಂದು ದನ ಕೊಡೋಣ. ಅವರು ತುತ್ತು ನೀಡಿ ಸಾಕಲು ತಯಾರಿದ್ದಾರೆಯೇ ನೋಡೋಣ ಎಂದು ಎಚ್ಡಿಕೆ ಹೇಳಿದರು.

ದಿನೇಶ್‌ ಹೊಳ್ಳ ಅವರು ಎತ್ತಿನ ಹೊಳೆ ಯೋಜನೆ ಬಗ್ಗೆ, ಶಶಿಧರ ಶೆಟ್ಟಿ ಅವರು ಗಾಡ್ಗೀಳ್‌ ವರದಿ ಕುರಿತು, ಸಬಿತಾ ಶೆಟ್ಟಿ ಅವರು ಅಂಗನವಾಡಿ ಸಹಾಯಕಿಯರ ಗೌರವ ಧನ ಹೆಚ್ಚಳದ ಬಗ್ಗೆ, ಬಡಿಲ ಹುಸೇನ್‌ ಅವರು ಎಲ್ಲರಿಗೂ ಸಮಾನ ಶಿಕ್ಷಣದ ಕುರಿತು ಪ್ರಶ್ನೆ ಕೇಳಿದರು. ಎತ್ತಿನ ಹೊಳೆ ಯೋಜನೆ ಬಗ್ಗೆ ವೈಜ್ಞಾನಿಕ ಸಮೀಕ್ಷೆ ನಡೆಸಿ, ಈ ಕುರಿತಂತೆ ಹಿಂದೆ ತಾನು ಪೇಜಾವರ ಸ್ವಾಮೀಜಿ, ಡಾ| ವೀರೇಂದ್ರ ಹೆಗ್ಗಡೆ ಅವರು ಜವಾಬ್ದಾರಿ ತಗೊಂಡು ವೈಜ್ಞಾನಿಕವಾಗಿ ಸಮಸ್ಯೆ ಪರಿಹರಿಸಬೇಕೆಂದು ಹೇಳಿದ್ದೆ ಎಂದರು. ಜಿಲ್ಲಾಧ್ಯಕ್ಷ ಮಹಮದ್‌ ಕುಂಞಿ, ಎಂ.ಬಿ. ಸದಾಶಿವ, ಸುಶಿಲ್‌ ನೊರೋನ್ಹಾ ಉಪಸ್ಥಿತರಿದ್ದರು.

ಬೆಂಗಳೂರನ್ನೂ ಮೀರಿಸಬಲ್ಲದು
ಕರಾವಳಿಯಲ್ಲಿ ಹಿಂದೂ-ಮುಸ್ಲಿಂ ಗಲಾಟೆಗಳು ರಾಜಕೀಯ ಉದ್ದೇಶಗಳಿಗಾಗಿ ನಡೆಯುತ್ತಿವೆಯೇ ಹೊರತು ಧಾರ್ಮಿಕ ಉದ್ದೇಶಕ್ಕಾಗಿ ಅಲ್ಲ. ರಾಜ್ಯದ ಜಿಡಿಪಿಗೆ ಜಿಲ್ಲೆಯ ಕೊಡುಗೆ ಅಪಾರ. ಮುಂದೆ ಬೆಂಗಳೂರನ್ನೂ ಈ ಜಿಲ್ಲೆ ಮೀರಿಸಬಲ್ಲುದು ಎಂದು ಎಚ್ಡಿಕೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next