Advertisement

ಪುನಶ್ಚೇತನ ನೀಡಿದ ಶಿಲ್ಪಕಲಾ ಶಿಬಿರ

10:46 PM Mar 28, 2019 | mahesh |

ವೇದದ ದೃಷ್ಟಿಯಲ್ಲಿ ವಿಶ್ವ ಸೃಷ್ಟಿಯೇ ಒಂದು ಶಿಲ್ಪ, ವಿಶ್ವಕರ್ಮ ಪ್ರಜಾಪತಿಯೇ ಇದರ ಶಿಲ್ಪಿ ಎನ್ನುತ್ತದೆ. ಹಾಗಾಗಿ ನಮ್ಮ ಭವ್ಯ ಸಂಸ್ಕೃತಿಗೆ, ಜನಜೀವನಕ್ಕೆ ವಿಶ್ವಕರ್ಮ ಸಂಪ್ರದಾಯಕ್ಕೆ ಸೇರಿದ ಜನಾಂಗದ ಕೊಡುಗೆ ಅಪಾರವಾದದ್ದು. ಶಿಲ್ಪಾಗಮಗಳಲ್ಲಿ ನಮಗೆ ಸುಪರಿಚಿತವಾಗಿರುವುದು ಕಾಶ್ಯಪ ಶಿಲ್ಪ ಶಾಸ್ತ್ರ. ಜಿ. ಜ್ಞಾನಾನಂದರು ಇದನ್ನು ಕನ್ನಡಕ್ಕೆ ಅನುವಾದಿಸಿರುವುದು ಕನ್ನಡನಾಡಿನ ಶಿಲ್ಪಿಗಳಿಗೆ ಸುಲಭವಾಗಿ ಗ್ರಹಿಸುವ ಒಂದು ಅಮೂಲ್ಯ ಗ್ರಂಥವಾಗಿದೆ. ಆಧುನಿಕ ಜೀವನ ಶೈಲಿಯಿಂದಾಗಿ ಜನಸಾಮಾನ್ಯರಿಗೆ ಸಾಂಪ್ರದಾಯಿಕ ಶಿಲ್ಪಕಲೆಯ ಅರಿವು ಮತ್ತು ಮಹತ್ವ ತಿಳಿಯದಾಗಿದೆ. ಈ ದೃಷ್ಟಿಯಿಂದ ಹಾಗೂ ಪರಿಸರದ ಶಿಲ್ಪಿಗಳಿಗೆ ಪುನಶ್ಚೇತನ ನೀಡುವ ಸಲುವಾಗಿ ಶಿಲ್ಪಶ್ರೀ ಹ್ಯಾಂಡಿಕ್ರಾಫ್ಟ್ ಫೌಂಡೇಶನ್‌ (ರಿ.), ಬ್ರಹ್ಮಾವರ, ಇವರು ಬಾರಕೂರು ಶ್ರೀ ಕಾಳಿಕಾಂಬ ದೇವಸ್ಥಾನದ ಸಭಾಭವನದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಿದ್ದರು. ಮೊದಲಿಗೆ ಸಂಪನ್ಮೂಲ ವ್ಯಕ್ತಿಯಾಗಿ ವಿ| ಪ್ರಕಾಶ್‌ ಪುರೋಹಿತ್‌ ಶಿಲ್ಪ ಶಾಸ್ತ್ರ ಮತ್ತು ಆಗಮ ಶಾಸ್ತ್ರಗಳ ಬಗ್ಗೆ ವಿಚಾರಗಳನ್ನು ಮಂಡಿಸಿದರು. ಸಾಂಪ್ರದಾಯಿಕ ಶಿಲ್ಪದಲ್ಲಿ ತಾಳಮಾನ, ಭಂಗಿ, ಮುದ್ರೆ, ಆಯುಧ, ಆಭರಣ ಇವುಗಳಲ್ಲಿನ ಕಟ್ಟುಪಾಡು ಮತ್ತು ಅನುಸರಿಸಬೇಕಾದ ನಿಯಮಗಳನ್ನು ವಿವರಿಸಿದರು. ಹಾಗೆಯೇ ಐತರೇಯ ಬ್ರಾಹ್ಮಣವು ಹೇಳುವಂತೆ ದೇವ ಶಿಲ್ಪ ಮತ್ತು ಮಾನುಷ ಶಿಲ್ಪಗಳ ಬಗ್ಗೆ ವಿವರಣೆ ನೀಡಿದರು. ಮುಂದೆ ಋಗ್ವೇದದಲ್ಲಿ ಹೇಳಿದ ನೌಕಾ ಶಿಲ್ಪ, ವಿಮಾನ ಶಿಲ್ಪ, ರಥ ಶಿಲ್ಪ, ಗೃಹ ವಾಸ್ತು ಶಿಲ್ಪ, ಸಮರಾಂಗಣ ಸೂತ್ರದಲ್ಲಿ ಸಿಗುವ ಯಂತ್ರ ಶಿಲ್ಪಗಳ ಕುರಿತಾಗಿಯೂ ತಿಳಿಸಿದರು. ಕೊನೆಯಲ್ಲಿ ಆಗಮಗಳ ವಿಬೇಧಗಳು ಹಾಗೂ ಪುರಾಣಗಳಲ್ಲಿ ಬರುವ ಶಿಲ್ಪದ ಬಗ್ಗೆ ಅರಿವನ್ನು ನೀಡಿದರು. ಅನಂತರ ಹರಿಹರಪುರದ ಶಿಲ್ಪಿ ಸುಕೆೇಶ್‌ ಆಚಾರ್ಯ ದೇವಾಲಯ ನಿರ್ಮಾಣ ವಿಚಾರವಾಗಿ ಮೊದಲಿಗೆ ದೇವಾಲಯ ವåತ್ತು ಬಗೆಗಳು, ದೇವಾಲಯ ನಿರ್ಮಾಣ ಮತ್ತು ಬಗೆಗಳು, ಭೂ ಪರೀಕ್ಷೆ ಮತ್ತು ಬುನಾದಿ ಲಕ್ಷಣ, ಉಪಪೀಠ ಮತ್ತು ಅಧಿಷ್ಠಾನಗಳು, ಭಿತ್ತಿ ಲಕ್ಷಣ, ಕೋಷ್ಠಕ, ಕುಂಭ ಪಂಜರ, ವೃತ್ತಸು#ಟಿತ, ಕುಂಭಲತ, ಜಾಲಕ, ತೋರಣ, ಪ್ರಸ್ತರ, ಕಂಠ, ಶಿಖರ, ಸ್ತೂಪಿ, ಏಕತಾಲ, ದ್ವಿತಾಲ, ತ್ರಿತಾಲದ ವಿವರಗಳು, ಎತ್ತರದಿಂದ ರೂಪಿಸಿರುವ ಆಲಯಗಳ ಬಗೆಗಳು, ದ್ರಾವಿಡ, ನಾಗರ, ವೇಸರಗಳ ವಿಮಾನ ಭೇಧಗಳು, ವಾಸ್ತು ಪುರುಷ ಲಕ್ಷಣ ಹೀಗೆ ಹನ್ನೊಂದು ಅಧ್ಯಾಯಗಳ ವಿಷಯವನ್ನು ರೇಖಾಚಿತ್ರ ಸಹಿತವಾಗಿ ವಿವರಿಸಿದರು. ಪ್ರದರ್ಶನಾಂಗಣದಲ್ಲಿ ಶಿಬಿರಾರ್ಥಿ ಶಿಲ್ಪಿಗಳು ಕಟೆದ ಶಿಲ್ಪಗಳು, ಹಾಳೆಗಳಲ್ಲಿ ಚಿತ್ರಿಸಿದ ಕೆತ್ತನೆ ಪೂರ್ವದ ಹೂ-ಬಳ್ಳಿಗಳ ವಿನ್ಯಾಸಗಳು, ದೇವಾಲಯದ ರೇಖಾಚಿತ್ರಗಳು ಹಾಗೂ ಶಿಲ್ಪಶ್ರೀ ಫೌಂಡೇಶನ್‌ನಲ್ಲಿ ರಚಿಸಿದ ಪುಟ್ಟ ಪುಟ್ಟ ಮರದ, ಶಿಲೆಯ, ಬೆಳ್ಳಿಯ ಕಲಾಕೃತಿಗಳನ್ನು ಪ್ರದರ್ಶಿಸಿದ್ದರು. ಅದರಲ್ಲಿನ ಸೂಕ್ಷ್ಮ ಕೆತ್ತನೆ, ಪ್ರಮಾಣ ಭದ್ಧತೆ, ಭಾವ ಕೌಶಲಗಳು ಅವರಲ್ಲಿರುವ ಜಾಣ್ಮೆ, ತಾಳ್ಮೆ ಮತ್ತು ಸಾಧನಾ ಶೀಲತೆಯನ್ನು ಅನಾವರಣಗೊಳಿಸಿತ್ತು. ಜೊತೆಗೆ ಅಮೂಲ್ಯ ಶಿಲ್ಪಶಾಸ್ತ್ರ ಗ್ರಂಥಗಳೂ ಇದ್ದವು.

Advertisement

ಕೆ. ದಿನಮಣಿ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next